ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷತ್ರಿಯ ಸಮಾಜದ ಒಳಪಂಗಡ ಒಗ್ಗೂಡಬೇಕು: ಉದಯ್‌ ಸಿಂಗ್‌ ಕರೆ

Last Updated 11 ಸೆಪ್ಟೆಂಬರ್ 2022, 10:11 IST
ಅಕ್ಷರ ಗಾತ್ರ

ಮೈಸೂರು: ‘ಹರಿದು ಹಂಚಿ ಹೋಗಿರುವ ಕ್ಷತ್ರಿಯ ಸಮಾಜ ಒಗ್ಗೂಡಿದರೆ ರಾಜಕೀಯವಾಗಿ ಶಕ್ತಿ ಪಡೆದುಕೊಳ್ಳಬಹುದು’ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್‌ ಸಿಂಗ್‌ ತಿಳಿಸಿದರು.

ಕರ್ನಾಟಕ ಕ್ಷತ್ರಿಯ ಒಕ್ಕೂಟ ಜಿಲ್ಲಾ ಮಹಿಳಾ ಘಟಕದಿಂದ ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಪದಗ್ರಹಣ ಹಾಗೂ ಸಮುದಾಯದ ಜಾಗೃತಿ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಮಾಜದ ಶಕ್ತಿಯು ದಿನೇ ದಿನೇ ಕ್ಷೀಣಿಸುತ್ತಿದೆ. ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದೆ. ರಾಜಕಾರಣ ಸೇರಿದಂತೆ ಎಲ್ಲವೂ ಜಾತಿ ವ್ಯವಸ್ಥೆ ಆಧಾರದ ಮೇಲೆ ನಡೆಯುತ್ತಿರುವುದರಿಂದ ನಮ್ಮನ್ನು ಪರಿಗಣಿಸುವವರೇ ಇಲ್ಲವಾಗಿದ್ದಾರೆ’ ಎಂದು ವಿಷಾದಿಸಿದರು.

‘ನಮ್ಮೆಲ್ಲ ಒಳಪಂಗಡಗಳನ್ನು ಒಗ್ಗೂಡಿಸಲು ಶ್ರಮಿಸುತ್ತಿದ್ದೇವೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು, ರಾಜಕೀಯವಾಗಿ ಪ್ರಬಲವಾಗಲು ಒಳಪಂಗಡಗಳೆಲ್ಲವೂ ಕ್ಷತ್ರಿಯ ಎನ್ನುವ ಆಲದಮರದಡಿ ಬರಬೇಕು. ಈ ಮೂಲಕ ಸರ್ಕಾರದ‌ ಗಮನಸೆಳೆಯುವ ಕೆಲಸವನ್ನು ಮಾಡಬೇಕು. ಮೂಲ‌ ಕ್ಷತ್ರಿಯರೆಲ್ಲರೂ ಸೇರಿದರೆ ಸರ್ಕಾರವೇ ಮನೆ ಬಾಗಿಲಿಗೆ ಬರುತ್ತದೆ’ ಎಂದರು.

‘ಜಿಲ್ಲೆಗಳಲ್ಲಿರುವ ಸಮಾಜದ ನಾಯಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ದೇಶದಾದ್ಯಂತ ಹರಡಿರುವ ಸಮಾಜದವರೆಲ್ಲರೂ ಒಗ್ಗಟ್ಟಾದರೆ ಹಕ್ಕುಗಳನ್ನು ಪಡೆದುಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಉಮಾ ಮೂರ್ತಿರಾವ್ ಮಾತನಾಡಿ, ‘36 ಒಳಪಂಗಡಗಳಾಗಿ ಚದುರಿರುವ ಎಲ್ಲರನ್ನೂ ಒಗ್ಗೂಡಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಸದ್ಯ ನಮ್ಮನ್ನು ಗುರುತಿಸುವವರೇ ಇಲ್ಲ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕಾದರೆ ಸಂಘಟಿತರಾಗಬೇಕು. ನಮ್ಮ ಆಚರಣೆಗಳನ್ನು ನಾಲ್ಕು ಗೋಡೆಗಳ ನಡುವೆ ಮಾಡಿಕೊಳ್ಳೋಣ. ರಜಪೂತ, ಭಾವಸಾರ, ಮರಾಠಾ ಎಂದು ಹೇಳಿಕೊಳ್ಳದೆ ಎಲ್ಲರೂ ಕ್ಷತ್ರಿಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಆಳುವವರಿಗೆ ನಮ್ಮ ಶಕ್ತಿಯನ್ನು ತೋರಿಸಬೇಕು. ಕ್ಷತ್ರಿಯ ಎಂಬ ಬೇರನ್ನು ಮರೆಯಬಾರದು. ಆಗ ನಮ್ಮ ಕೂಗು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಮಹಿಳಾ ಘಟಕದ ಆಧ್ಯಕ್ಷೆಯಾಗಿ ಸವಿತಾ ಘಾಟ್ಗೆ, ಪ್ರಧಾನ ಕಾರ್ಯದರ್ಶಿಯಾಗಿ ಸವಿತಾ, ಸಂಘಟನಾ ಕಾರ್ಯದರ್ಶಿಯಾಗಿ ಮೀರಾ ಬಾಯಿ, ವನಿತಾ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಚೇತನಾ ಕೋರೆ ಮೊದಲಾದವರು ಪದಗ್ರಹಣ ಮಾಡಿದರು.

ನಗರಪಾಲಿಕೆ ಸದಸ್ಯೆ‌ ಶೋಭಾ ಸುನೀಲ್, ಮುಖಂಡರಾದ ಡಾ.ವಾಮನ್ ಬಾಪಟ್, ಭುವನೇಶ್ವರಿ, ಸತ್ಯನಾರಾಯಣ ಸಿಂಗ್, ಸತ್ಯಪ್ಪ, ಮಹದೇವರಾವ್, ಅರುಣ್ ಚವ್ಹಾಣ್, ರಾಮರಾವ್ ಬಾವಲೆ, ಸುನೀಲ್, ಗಣೇಶ್ ಲಾಳಿಗೆ ಇದ್ದರು.

ಮೀರಾಬಾಯಿ ಪ್ರಾರ್ಥಿಸಿದರು. ಸವಿತಾ ಸ್ವಾಗತಿಸಿದರು. ಕವಿತಾ ರಾಮ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT