ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಆಶ್ರಯ ಬಡಾವಣೆಯಲ್ಲಿಲ್ಲ ಮೂಲಸೌಕರ್ಯ, ನೀರು -ರಸ್ತೆಯಿಲ್ಲದೆ ಒದ್ದಾಟ

Published 8 ಡಿಸೆಂಬರ್ 2023, 5:20 IST
Last Updated 8 ಡಿಸೆಂಬರ್ 2023, 5:20 IST
ಅಕ್ಷರ ಗಾತ್ರ

ಮೈಸೂರು: ನಗರದ ಹೊರವಲಯದಲ್ಲಿರುವ ಆಶ್ರಯ ಬಡಾವಣೆಯ ಸುಮಾರು 60 ಕುಟುಂಬಗಳು ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಪರಿತಪಿಸುತ್ತಿವೆ.

ಜೆ.ಪಿ. ನಗರದ ವರ್ತುಲ ರಸ್ತೆಯ ಕೆಳಭಾಗದಲ್ಲಿರುವ ಕೊಪ್ಪಲೂರಿನಲ್ಲಿರುವ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡವರೇ ವಿದ್ಯುತ್‌ ಕಂಬ ಅಳವಡಿಸಿಕೊಂಡು, ಬೋರ್‌ವೆಲ್‌ ಹಾಕಿಸಿ, ಸಣ್ಣ ರಸ್ತೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಅವರು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸಲ್ಲಿಸಿದ ‌ಮನವಿಗಳಿಗೆ ಸೂಕ್ತ ಸ್ಪಂದನೆ ದೊರಕಿಲ್ಲ. ಪರಿಣಾಮ, ತೊಂದರೆಗೆ ಸಿಲುಕಿದ್ದಾರೆ.

ಬಡಾವಣೆಯ ಅಕ್ಕಪಕ್ಕದಲ್ಲಿ ಮುಡಾ ಬಡಾವಣೆ ಇದೆ. ಆಶ್ರಮ ಬಡಾವಣೆ ಮಾತ್ರ ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಸೇರಿ ಬಡವಾಗಿಯೇ ಉಳಿದಿದೆ. ಇಲ್ಲಿ ನಾಲ್ಕು ಗಲ್ಲಿಗಳಿದ್ದು, ನಿವಾಸಿಗಳೇ ಹಣ ಹಾಕಿ 30 ಗಜದ ಮಣ್ಣಿನ ರಸ್ತೆ ನಿರ್ಮಿಸಿದ್ದಾರೆ. ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ‌ನೀರು ರಸ್ತೆಯಲ್ಲೇ ಹರಿದು ಸಮಸ್ಯೆ ಉಂಟಾಗುತ್ತಿದೆ. ರಸ್ತೆ ಸಮರ್ಪಕವಾಗಿಲ್ಲದೆ ಇರುವುದರಿಂದ, ದ್ವಿಚಕ್ರವಾಹನದಲ್ಲಿ ತೆರಳುವಾಗ ಅನೇಕರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ಕೊಳವೆ ಬಾವಿಯಲ್ಲೂ ಉಪ್ಪಿನ ಅಂಶವುಳ್ಳ ನೀರು ಸಿಕ್ಕಿದ್ದು, ಕುಡಿಯಲು ಯೋಗ್ಯವಿಲ್ಲ. ಬಡಾವಣೆಯ ಸುತ್ತ ಹಾಗೂ ಕೆಲವು ರಸ್ತೆಯಲ್ಲೂ ಕಾಡು ಬೆಳೆದಿದ್ದು, ಹಾವುಗಳ ಕಾಟ ಜಾಸ್ತಿಯಾಗಿದೆ. ಮಕ್ಕಳನ್ನು ಆಟವಾಡಲು ಹೊರಗಡೆ ಬಿಡಲಾಗದಂತಹ ಸ್ಥಿತಿ ಇದೆ.

ಬಡಾವಣೆಯು ಎರಡು ವಿಧಾನಸಭಾ ಕ್ಷೇತ್ರದ ಕೊನೆಯಲ್ಲಿದ್ದು, ಯಾವ ಶಾಸಕರ ಬಳಿ ಸಮಸ್ಯೆ ಹೇಳಬೇಕು ಎಂಬ ಗೊಂದಲವೂ ಅಲ್ಲಿನ ನಿವಾಸಿಗಳಲ್ಲಿದೆ. ಕೆಲವು ಮನೆಯರವರು ಕೃಷ್ಣರಾಜಕ್ಕೆ ಹಾಗೂ ಇನ್ನೂ ಕೆಲವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾನ ಮಾಡುತ್ತಿದ್ದಾರೆ. ಅಧಿಕಾರಿಗಳಲ್ಲೂ ಈ ಸಮಸ್ಯೆಗೆ ಪರಿಹಾರ ಇಲ್ಲವಾಗಿದೆ.

‘ಕಾಲ, ಕಾಲಕ್ಕೆ ತೆರಿಗೆ ಪಡೆಯುವ ಅಧಿಕಾರಿಗಳಲ್ಲಿ ಸಮಸ್ಯೆಯ ಬಗ್ಗೆ ಹೇಳಿಕೊಂಡರೆ ಪ್ರತಿಕ್ರಿಯಿಸುವುದಿಲ್ಲ. ಕಾಡು ತುಂಬಿ ಮನೆಯ ಒಳಗೂ ಹಾವಿನ ಕಾಟವಿದೆ. ವಿದ್ಯುತ್‌ ಸಂಪರ್ಕವನ್ನೂ ಖಾಸಗಿಯಾಗಿ ಮಾಡಿಸಿಕೊಂಡಿದ್ದೇವೆ’ ಎಂದು ಬಡಾವಣೆ ನಿವಾಸಿ ಸತ್ಯಾನಂದ ಬೇಸರ ವ್ಯಕ್ತಪಡಿಸಿದರು.

‘ಚರಂಡಿ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಪ್ರತಿ ಬೇಸಿಗೆಯಲ್ಲೂ ಪ್ರತಿ ಲೋಡ್‌ಗೆ ₹600 ನೀಡಿ ಮಣ್ಣು ಹಾಕಿಸುತ್ತಿದ್ದೇವೆ. ನಗರ ಭಾಗದಲ್ಲಿದ್ದರೂ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ’ ಎಂದು ಶೋಭಾ ಅಳಲು ತೋಡಿಕೊಂಡರು.

ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎನ್ನುವುದು ಅಲ್ಲಿನ ನಿವಾಸಿಗಳ ಮನವಿಯಾಗಿದೆ.

ರಸ್ತೆ ರಿಪೇರಿಗಾಗಿ ಸ್ಥಳೀಯ ನಿವಾಸಿಗಳೇ ತರಿಸಿಕೊಂಡಿರುವ ಮಣ್ಣು
ರಸ್ತೆ ರಿಪೇರಿಗಾಗಿ ಸ್ಥಳೀಯ ನಿವಾಸಿಗಳೇ ತರಿಸಿಕೊಂಡಿರುವ ಮಣ್ಣು

‘ಮೂರು ದಶಕದಿಂದ ಸೌಕರ್ಯವಿಲ್ಲ’

‘30 ವರ್ಷದ ಹಿಂದೆ ಇಲ್ಲಿ ಬಡಾವಣೆ ನಿರ್ಮಾಣವಾಗಿದ್ದು ಅಂದಿನಿಂದ ಇಂದಿನವರೆಗೂ ಸೌಕರ್ಯಗಳಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದೇವೆ. ಆರಂಭದಲ್ಲಿ ಕುಡಿಯುವ ನೀರಿಗಾಗಿ ಪೈಪ್‌ ತಂದು ಹಾಕಿದರೂ ಬೇರೆ ಯಾವುದೇ ಕೆಲಸಗಳೂ ಆರಂಭವಾಗಿಲ್ಲ’ ಎನ್ನುತ್ತಾರೆ ನಿವಾಸಿಗಳು.

ತಾಂತ್ರಿಕ ಸಮಸ್ಯೆ: ಅಭಿವೃದ್ಧಿ ವಿಳಂಬ

‘ಆಶ್ರಯ ಬಡಾವಣೆಯು ನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಆದರೆ ಅಲ್ಲಿನ ದಾಖಲಾತಿಗಳು ಮಾತ್ರವೇ ಪಟ್ಟಣ ಪಂಚಾಯಿತಿಯಲ್ಲಿವೆ. ಮುಂದಿನ ಪಾಲಿಕೆ ಚುನಾವಣೆ ಸಮಯದಲ್ಲಿ ಬಡಾವಣೆ ಅಧಿಕೃತವಾಗಿ ನಗರ ಪಾಲಿಕೆಗೆ ಸೇರ್ಪಡೆಯಾಗುತ್ತದೆ. ಹೀಗಾಗಿ ನಾವು ಅಭಿವೃದ್ಧಿ ಕೆಲಸ ಮಾಡಿಲ್ಲ. ಮುಂದೆ ಪಾಲಿಕೆ ಅಲ್ಲಿಗೆ ಸೌಲಭ್ಯ ನೀಡಬಹುದು’ ಎಂದು ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಶ್ರೀಧರ್‌ ತಿಳಿಸಿದರು.

ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದೇವೆ. ಆದರೆ ನಮ್ಮ ಸಮಸ್ಯೆಗೆ ಅವರು ಸ್ಪಂದಿಸುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡದೆ ಅನ್ಯಾಯವೆಸಗಿದ್ದಾರೆ.
- ಸತ್ಯಾನಂದ ಬಡಾವಾಣೆ ನಿವಾಸಿ
ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಪಟ್ಟಣ ಪಂಚಾಯಿತಿ ಗಮನ ಸೆಳೆದಿದ್ದೇವೆ. ಆದರೆ ಅಲ್ಲಿಂದ ನಮ್ಮ ಅಹವಾಲು ಸರ್ಕಾರದ ಮಟ್ಟಕ್ಕೆ ತಲುಪಿಲ್ಲ
-ಕುಮಾರ್‌ ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT