ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಗಳ್ಳರಿಗೆ ಶಿಕ್ಷೆ ನೀಡುವುದೇ ಆದ್ಯತೆಯಾಗಲಿ

ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಒತ್ತಾಯ
Last Updated 23 ಡಿಸೆಂಬರ್ 2018, 19:49 IST
ಅಕ್ಷರ ಗಾತ್ರ

ಮೈಸೂರು: ಭೂಗಳ್ಳರನ್ನು ಹಿಡಿದು ಅವರಿಗೆ ಕಠಿಣ ಶಿಕ್ಷೆ ನೀಡುವುದನ್ನು ಸರ್ಕಾರ ಆದ್ಯತೆಯಾಗಿ ಸ್ವೀಕರಿಸಲಿ ಎಂದು ಶಾಸಕ ಎ.ಟಿ.ರಾಮಸ್ವಾಮಿ ಒತ್ತಾಯಿಸಿದರು.

ಎ.ಟಿ.ರಾಮಸ್ವಾಮಿ ಅವರ ಅಭಿಮಾನಿಗಳ ಬಳಗವು ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 2006ರಲ್ಲಿ ನನ್ನನ್ನು ಅಕ್ರಮ ಭೂಕಬಳಿಕೆ ಆಯೋಗದ ಅಧ್ಯಕ್ಷನನ್ನಾಗಿ ಮಾಡಿದ್ದರು. ಆಗ ನಾನು ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿರುವ ಬಗ್ಗೆ ಸುದೀರ್ಘ ವರದಿ ನೀಡಿದ್ದೆ. ಆದರೆ, ಕುಮಾರಸ್ವಾಮಿ ಅವರಿಗೆ ಅದನ್ನು ಜಾರಿಗೊಳಿಸಲು ಸಾಧ್ಯವೇ ಆಗಿರಲಿಲ್ಲ. ಹಲವು ಅಡಚಣೆಗಳು ಅವರನ್ನು ಆವರಿಸಿದ್ದವು. ಈಗಲೂ ಇದೇ ಒತ್ತಡ ಅವರ ಮೇಲಿದೆ. ಆದರೆ, ಅವಕ್ಕೆ ಮಣಿಯಬಾರದು. ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಬೇಕು’ ಎಂದು ಕೋರಿದರು.

‘ಹಸಿವೆ ನೀಗಿಸಿಕೊಳ್ಳಲು ರೈತರುಒಂದೆರಡು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಅವರನ್ನು ಕ್ಷಮಿಸಿಬಿಡಬಹುದು. ಅಥವಾ ಅಕ್ರಮ ಸಕ್ರಮ ಮಾಡಬಹುದು. ಆದರೆ, ಸರ್ಕಾರಿ ಭೂಮಿಯನ್ನು ತಮ್ಮ ಭೂಮಿಯೆಂದು ನಂಬಿಸಿ ನಕಲಿ ದಾಖಲೆ ಸೃಷ್ಟಿಸುವವರನ್ನು ಕ್ಷಮಿಸಲಾಗದು. ಅಲ್ಲದೇ, ಇವರಾರೂ ಬಡವರಲ್ಲ. ಎಲ್ಲರೂ ಪ್ರಭಾವಿಗಳೇ. ಸರ್ಕಾರಿ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬೆಂಗಳೂರಿನಲ್ಲೇ ₹ 2 ಲಕ್ಷ ಕೋಟಿ ಮೌಲ್ಯದ 40 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಬೆಂಗಳೂರಿನ ಈಗಲ್ಟನ್‌ ಸಂಸ್ಥೆಯು ಅಕ್ರಮವಾಗಿ ಭೂಮಿ ವಶಪಡಿಸಿಕೊಂಡು ರೆಸಾರ್ಟ್ ನಿರ್ಮಿಸಿದೆ. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಂಸ್ಥೆಯು ₹ 982 ಕೋಟಿ ದಂಡವನ್ನು ಸರ್ಕಾರಕ್ಕೆ ಕಟ್ಟಬೇಕು ಇಲ್ಲವಾದಲ್ಲಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ತೀರ್ಪು ನೀಡಿದೆ. ಆದರೆ, ಈವರೆಗೂ ಆ ಸಂಸ್ಥೆಯು ಹಣವನ್ನೂ ನೀಡಿಲ್ಲ, ಸರ್ಕಾರ ಭೂಮಿಯನ್ನು ವಶಪಡಿಸಿಕೊಂಡೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸತ್ಯಕ್ಕೆ ತಲೆಬಾಗಬೇಕು; ಹಣಕ್ಕಲ್ಲ. ಆದರೆ, ಈಗಿನ ದಿನಗಳಲ್ಲಿ ಹಣಕ್ಕೆ ತಲೆಬಾಗುವ ಪರಿಸ್ಥಿತಿ ಬಂದಿದೆ. ಸಂಬಂಧಗಳಿಗಿಂತ ಹಣವೇ ಮಿಗಿಲು ಎಂದು ಹೇಳುವವರಿದ್ದಾರೆ. ಇದು ನಿಲ್ಲಬೇಕು. ಯುವಕರು ಸಂಬಂಧಗಳಿಗೆ, ಮೌಲ್ಯಗಳಿಗೆ ತಲೆಬಾಗಬೇಕು. ಅಧಿಕಾರ, ಹಣದ ಹಿಂದೆ ಹೋಗಕೂಡದು’ ಎಂದು ಮನವಿ ಮಾಡಿದರು.

ಹೋರಾಟ ನಿಲ್ಲಕೂಡದು

ಸನ್ಮಾನಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿ, ಸಾಮಾಜಿಕ ವ್ಯವಸ್ಥೆಯೇ ಈಗ ಹಾಳಾಗಿದೆ. ಪ್ರಾಮಾಣಿಕತೆಗೆ ಬೆಲೆ ಇಲ್ಲದಾಗಿದೆ. ಹಾಗೆಂದು ಹೋರಾಟ ನಿಲ್ಲಿಸಲಾಗದು. ನಾನು 60 ವರ್ಷಗಳಿಂದ ರಾಜಕಾರಣದಲ್ಲಿದ್ದುಕೊಂಡು ಹೋರಾಟ ಮುಂದುವರೆಸಿದ್ದೇನೆ. ಹೋರಾಟದ ಹಾದಿಗೆ ಅನೇಕ ಮುಳ್ಳುಗಳು ಬರುತ್ತವೆ. ಆದರೆ, ಹೋರಾಟ ನಿಲ್ಲಕೂಡದು’ ಎಂದು ಹೇಳಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರೈತರ ₹ 40 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿದಾಗ ಅನೇಕ ಟೀಕೆಗಳು ಎದುರಾದವು. ಮಾಧ್ಯಮಗಳು ಎಲ್ಲೆ ಮೀರಿ ಸುದ್ದಿ ಪ್ರಸಾರ ಮಾಡಿದವು. ಆದರೆ, ಈಗ ಕಾಲ ಬದಲಾಗಿದೆ. ಸಾಲ ಮನ್ನಾ ಅಧ್ಯಯನಕ್ಕಾಗಿ ಗುಜರಾತ್‌ನಿಂದ ತಜ್ಞರು ರಾಜ್ಯಕ್ಕೆ ಬರುತ್ತಿದ್ದಾರೆ. ಸತ್ಯ, ಪ್ರಾಮಾಣಿಕತೆಗೆ ಸೋಲಿಲ್ಲ. ಗೆದ್ದೇ ಗೆಲ್ಲುತ್ತವೆ’ ಎಂದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ವಿಧಾನ ಪರಿಷತ್‌ ಉಪ ಸಭಾಪತಿ ಎಸ್.ಎಲ್‌.ಧರ್ಮೇಗೌಡ, ಜೆಡಿಎಸ್‌ ಮುಖಂಡ ಪ್ರೊ.ಕೆ.ಎಸ್‌.ರಂಗಪ್ಪ, ಪ್ರಗತಿಪರ ರೈತ ಎಂ.ಸಿ.ರಂಗಸ್ವಾಮಿ, ಹಾರಂಗಿ ನೀರು ಬಳಕೆದಾರರ ಮಹಾಮಂಡಲದ ಅಧ್ಯಕ್ಷ ಎಸ್.ಸಿ.ಚೌಡೇಗೌಡ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಜೆಡಿಎಸ್ ರೈತ ಯುವ ಮಹಿಳಾ ಘಟಕದ ಅಧ್ಯಕ್ಷೆ ಚೀತ್ರಾ ಗೌಡ, ಮುಖಂಡರಾದ ಶಾರದಮ್ಮ, ಕೆ.ವಿ.ಮಲ್ಲೇಶ್‌, ಪ್ರೇಮಾ ಶಂಕರೇಗೌಡ, ಬೋರೇಗೌಡ, ಸಿ.ಮಂಜೇಗೌಡ, ಸಿ.ರಘು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT