ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಕಾಕ್ಲಿಯರ್ ಇಂಪ್ಲಾಂಟ್‌’ ಯೋಜನೆ ‘ಶ್ರವಣ ಸಂಜೀವಿನಿ’ ಆಗಿ ಮರುನಾಮಕರಣ

353 ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಕೆ: ಸಚಿವ ದಿನೇಶ್‌ ಗುಂಡೂರಾವ್
Published 12 ಮಾರ್ಚ್ 2024, 23:35 IST
Last Updated 12 ಮಾರ್ಚ್ 2024, 23:35 IST
ಅಕ್ಷರ ಗಾತ್ರ

ಮೈಸೂರು: ಹುಟ್ಟಿನಿಂದಲೇ ಶ್ರವಣದೋಷ ಎದುರಿಸುತ್ತಿರುವ ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಸುವ ಯೋಜನೆಗೆ ಇಲ್ಲಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ (ಆಯಿಷ್‌) ‘ಶ್ರವಣ ಸಂಜೀವಿನಿ’ ಎಂದು ಮರುನಾಮಕರಣ ಮಾಡಲಾಯಿತು.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಯೋಜನೆಯ ಫಲಾನುಭವಿ ಮಕ್ಕಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಶ್ರವಣ ಸಾಧನಗಳನ್ನು ವಿತರಿಸಿ, ಮಕ್ಕಳು ಮತ್ತು ಪೋಷಕರಿಗೆ ವಾಕ್‌ ಮತ್ತು ಶ್ರವಣ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿ, ‘ಶ್ರವಣ ಸಮಸ್ಯೆ ಎದುರಿಸುತ್ತಿರುವ ಮಗುವಿನ ಶಸ್ತ್ರಚಿಕಿತ್ಸೆಗೆ ₹ 10 ಲಕ್ಷದಿಂದ ₹ 15 ಲಕ್ಷ ಖರ್ಚಾಗುತ್ತದೆ. ಹೀಗಾಗಿ  2016ರಲ್ಲಿ ನಮ್ಮದೇ ಸರ್ಕಾರವಿದ್ದಾಗ ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆ ಆರಂಭಿಸಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೆರವಾಗಿತ್ತು’ ಎಂದು ಹೇಳಿದರು.

‘ಈ ಬಾರಿ ಬಜೆಟ್‌ನಲ್ಲಿ ಯೋಜನೆಗಾಗಿ ₹ 32 ಕೋಟಿ ಮೀಸಲಿಟ್ಟಿರುವುದಲ್ಲದೇ, 353 ಮಕ್ಕಳಿಗೆ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿದೆ. ಶ್ರವಣ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಎಲ್ಲರಂತೆ ಸಮಾನ ಶಿಕ್ಷಣ, ಅವಕಾಶ, ಕಲಿಕೆ ಸಾಧ್ಯವಾಗಬೇಕು. ಹೀಗಾಗಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ವಿಶೇಷ ಕಾಳಜಿ ವಹಿಸಲಾಗಿದೆ’ ಎಂದು ತಿಳಿಸಿದರು.

‘ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಕೆಯಲ್ಲಿ ದೇಶದಲ್ಲಿಯೇ ರಾಜ್ಯ ಮೊದಲ ಸ್ಥಾನದಲ್ಲಿದೆ. ಆಯಿಷ್‌ ನೇತೃತ್ವದಲ್ಲಿ ರಾಜ್ಯದ 27 ಆಸ್ಪತ್ರೆಗಳಲ್ಲಿ ಸೇವೆ ಲಭ್ಯವಾಗುತ್ತಿದೆ. ಅವುಗಳಲ್ಲಿ 12 ಸರ್ಕಾರಿ ಆಸ್ಪತ್ರೆಗಳಿವೆ’ ಎಂದು ಮಾಹಿತಿ ನೀಡಿದರು.

‘ಶಸ್ತ್ರಚಿಕಿತ್ಸೆಗೂ ಮುನ್ನ ನಾನಾ ರೀತಿಯ ತಪಾಸಣೆಯನ್ನು ನುರಿತ ತಜ್ಞರೇ ನಡೆಸಬೇಕಾಗುತ್ತದೆ. ಹೀಗಾಗಿಯೇ ಆಯಿಷ್‌ನ ಸಹಕಾರ ಪಡೆಯಲಾಗಿದೆ. ಶಸ್ತ್ರಚಿಕಿತ್ಸೆ ನಂತರವೂ ಮಗುವಿನ ಕಲಿಕೆಗೆ ತರಬೇತಿಯನ್ನು ಪೋಷಕರು, ಸಿಬ್ಬಂದಿಗೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಶ್ರವಣದೋಷ ಮುಕ್ತ ಕರ್ನಾಟಕ ನಿರ್ಮಾಣವೇ ಸರ್ಕಾರದ ಗುರಿ. ಸಮಸ್ಯೆ ಎದುರಿಸುತ್ತಿರುವ ಮಕ್ಕಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. 8 ತಿಂಗಳಿಂದ 6 ವರ್ಷದ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನೀಡಲಾಗುತ್ತದೆ. ತಜ್ಞರನ್ನು ಗುರುತಿಸಿ ಚಿಕಿತ್ಸೆ, ಆರೈಕೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಶಾಸಕರಾದ ಕೆ.ಹರೀಶ್‌ ಗೌಡ, ತನ್ವೀರ್‌ ಸೇಠ್‌ ಅವರು ಫಲಾನುಭವಿ ಮಕ್ಕಳಾದ ಯಶಸ್ವಿನಿ, ಮಹೇಶ್‌ ಕುಮಾರ್‌, ಹೃದನ್ಯ, ಚತುರ್ವೇದ, ಖುಷಿ, ರಚನಾ, ಪೋಷಿತಾ, ಉನ್ನತ್‌ ಅವರಿಗೆ ಶಸ್ತ್ರಚಿಕಿತ್ಸೆಯ ಕಿಟ್‌ ಅನ್ನು ವಿತರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ವೈ.ನವೀನ್‌ ಭಟ್‌, ಆಯಿಷ್‌ ನಿರ್ದೇಶಕಿ ಎಂ.ಪುಷ್ಪಾವತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ.ಬಿ.ಎಸ್‌.ಪುಷ್ಪಲತಾ, ಕಾಕ್ಲಿಯರ್ ಇಂಪ್ಲಾಂಟ್‌ ಯೋಜನೆಯ ರಾಜ್ಯ ನೋಡಲ್ ಅಧಿಕಾರಿ ಬಿ.ಆರ್‌.ಚಂದ್ರಿಕಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಹಾಜರಿದ್ದರು.

ಶ್ರವಣ ಸಾಧನಗಳ ವಿತರಣೆ ಶಸ್ತ್ರಚಿಕಿತ್ಸೆ ಕಿಟ್‌ ನೀಡಿಕೆ ಶ್ರವಣದೋಷ ಮುಕ್ತ ಕರ್ನಾಟಕದ ಗುರಿ
‘ನೆರವಾದ ಆಯಿಷ್‌’
‘ಐದು ವರ್ಷದ ಹಿಂದೆ ಧ್ವನಿ ಕಳೆದುಕೊಳ್ಳುವ ಸಂದರ್ಭ ಎದುರಾದಾಗ ಆಯಿಷ್‌ ನನಗೆ ನೆರವಾಗಿ ಚಿಕಿತ್ಸೆ ಆರೈಕೆ ನೀಡಿದೆ’ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದರು.  ‘ಕಾಕ್ಲಿಯರ್ ಇಂಪ್ಲಾಂಟ್‌ ಯೋಜನೆ ಮೂಲಕ ಸರ್ಕಾರವು ಶ್ರವಣದೋಷವುಳ್ಳ ಮಕ್ಕಳ ಪೋಷಕರಿಗೆ ಸಹಾಯಹಸ್ತ ಚಾಚಿದೆ. ಯೋಜನೆ ಪ್ರಯೋಜನ ಪಡೆಯಬೇಕು’ ಎಂದು ಕೋರಿದರು. ‘ಹೊಸ ಆಸ್ಪತ್ರೆಗಳನ್ನು ಕಟ್ಟಿಸುವುದಕ್ಕಿಂತ ಹಳೆ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವಲ್ಲಿ ಆರೋಗ್ಯ ಇಲಾಖೆ ಕ್ರಮವಹಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ’ ಎಂದೂ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT