ಮೈಸೂರು: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ–ಜೆಡಿಎಸ್ ವಿರುದ್ಧದ ಕಾಂಗ್ರೆಸ್ ಜನಾಂದೋಲನಕ್ಕೆ ಬೆಂಬಲ ನೀಡಲು ಶೋಷಿತ ಸಮುದಾಯಗಳ ಮುಖಂಡರು ನಿರ್ಧರಿಸಿದರು.
ಇಲ್ಲಿನ ಸಿದ್ಧಾರ್ಥನಗರದ ಕನಕ ಭವನದಲ್ಲಿ ಮುಖಂಡ ಬಿ.ಸುಬ್ರಹ್ಮಣ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಮುಖರು, ಶೋಷಿತ ಸಮುದಾಯಗಳ ಮುಖಂಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳು ಪಾಲ್ಗೊಂಡಿದ್ದರು.
‘ಹಿಂದುಳಿದವರು, ಶೋಷಿತರು ಮತ್ತು ಅಲ್ಪಸಂಖ್ಯಾತರ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕುತಂತ್ರ ಮತ್ತು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಆ.9ರಂದು ಇಲ್ಲಿ ನಡೆಯುವ ಕಾಂಗ್ರೆಸ್ ಜನಾಂದೋಲನವನ್ನು ಬೆಂಬಲಿಸಲಾಗುವುದು. ಆ.6ರಂದು ಬೆಳಿಗ್ಗೆ 10.30ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು’ ಎಂದು ಮುಖಂಡರು ತಿಳಿಸಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್. ಮೂರ್ತಿ, ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಾಜಿ ಮೇಯರ್‌ಗಳಾದ ಆರೀಫ್ ಹುಸೇನ್, ಪುಷ್ಪಲತಾ ಚಿಕ್ಕಣ್ಣ, ಮುಖಂಡ ಬಿ.ವಿ. ಸೀತಾರಾಮು ಪಾಲ್ಗೊಂಡಿದ್ದರು.