ಶುಕ್ರವಾರ, ಮಾರ್ಚ್ 31, 2023
32 °C

ಮೈಸೂರು | ಬೋನಿಗೆ ಬಿದ್ದ ಚಿರತೆ: ಸ್ಥಳದಲ್ಲೇ ಕೊಲ್ಲಲು ಜನರ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ (ಮೈಸೂರು ಜಿಲ್ಲೆ): ತಾಲ್ಲೂಕಿನ ಸೋಸಲೆ ಹೋಬಳಿಯ ಹೊರಳಹಳ್ಳಿ ಗ್ರಾಮ ಮತ್ತು ನೆರಗ್ಯಾತನಹಳ್ಳಿ ನಡುವಿನ ತೋಟದ ಸಮೀಪ ಅರಣ್ಯ ಇಲಾಖೆಯಿಂದ ಇಟ್ಟಿದ್ದ ಬೋನಿಗೆ (ತುಮಕೂರು ಕೇಜ್‌) ಚಿರತೆ ಗುರುವಾರ ಬಿದ್ದಿದೆ.

ಚಿರತೆ ಸೆರೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಅದನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಕುತೂಹಲದಿಂದ ಬಂದಿದ್ದರು. ಇದರಿಂದ ತೋಟದ ಬಳಿ ಜನಜಂಗುಳಿ ಕಂಡುಬಂತು. ಚಿರತೆಯನ್ನು ಬೇರೆಡೆ ಸಾಗಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಿದಾಗ ಗ್ರಾಮಸ್ಥರು ತಡೆದರು. ಆ ಪ್ರಾಣಿಯನ್ನು ಸ್ಥಳದಲ್ಲೇ ಕೊಲ್ಲುವಂತೆ ಪಟ್ಟು ಹಿಡಿದರು. ಚಿರತೆ ಇದ್ದ ವಾಹನವನ್ನು ಸುತ್ತುವರಿದು ಪ್ರತಿಭಟಿಸಿದರು. ಕೆಲವರು ವಾಹನಕ್ಕೆ ಅಡ್ಡಲಾಗಿ ಮಲಗಿ ಪ್ರತಿರೋಧ ವ್ಯಕ್ತಪಡಿಸಿದರು. ಈ ವೇಳೆ, ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು–ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

ಮನವೊಲಿಕೆಗೆ ಯತ್ನ:

‘ಬೋನಿಗೆ ಬಿದ್ದಿರುವ ಚಿರತೆಯನ್ನು ಕೊಲ್ಲಲು ನಿಯಮದಲ್ಲಿ ಅವಕಾಶವಿಲ್ಲ. ಅದನ್ನು ಬೇರೆಡೆಗೆ ಸಾಗಿಸಲು ಅವಕಾಶ ಕೊಡಿ’ ಎಂದು ಉಪ ವಿಭಾಗಾಧಿಕಾರಿ ಕಮಲಾ ಬಾಯಿ, ಎಎಸ್ಪಿ ಡಾ.ನಂದಿನಿ ಜನರನ್ನು ಕೋರಿದರು. ‘ಬೇಕಿದ್ದರೆ ಚಿರತೆಯನ್ನು ಸಾಗಿಸುವ ಸ್ಥಳದವರೆಗೆ ನೀವೂ ಬನ್ನಿ’ ಎಂದೂ ಅಧಿಕಾರಿಗಳು ಆಹ್ವಾನ ನೀಡಿದರು.

‘ಪರಿಸ್ಥಿತಿಯನ್ನು ಅರಿತು ಚಿರತೆ ಸಾಗಣೆಗೆ ಅನುವು ಮಾಡಿಕೊಡಿ’ ಎಂಬ ಅಧಿಕಾರಿಗಳ ಕೋರಿಕೆಗೆ ಜನರು ಸಮ್ಮತಿ ಸೂಚಿಸಿದರು. ನಂತರ ಚಿರತೆಯನ್ನು ಇಲ್ಲಿಂದ ವಾಹನದಲ್ಲಿ ಸಾಗಿಸಲಾಯಿತು. ಕಾರ್ಯಪಡೆ ಅಧಿಕಾರಿಗಳು ಮತ್ತೊಂದು ಬೋನಿಗೆ ಸ್ಥಳಾಂತರಿಸಿ ವಾಹನದಲ್ಲಿ ಸಾಗಿಸಿದರು. ಸೆರೆಯಾಗಿರುವ ಚಿರತೆಯು 6 ವರ್ಷ ವಯಸ್ಸಿನ ಗಂಡು ಚಿರತೆ ಎಂದು ತಿಳಿದುಬಂದಿದೆ. ಅದನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ.

ಡಿಸಿಎಫ್ ಬಸವರಾಜು, ಮಹೇಶ್ ಕುಮಾರ್, ಎಸಿಎಫ್ ಲಕ್ಷೀಕಾಂತ್, ಡಿವೈಎಸ್ಪಿ ಗೋವಿಂದರಾಜು, ಸಿಪಿಐ ಆನಂದ್, ಲೋಲಾಕ್ಷಿ, ಪಿಎಸ್ಐಗಳಾದ ತಿರುಮಲ್ಲೇಶ್, ಪಚ್ಚೇಗೌಡ, ವಲಯ ಅರಣ್ಯಾಧಿಕಾರಿ ಸೈಯದ್ ನದೀಮ್, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಇದ್ದರು.

ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ಬಾಲಕನನ್ನು ಕೊಂದ ಘಟನೆ ನಡೆದಿತ್ತು. ಇದರಿಂದ, ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈಗ ಸೆರೆ ಸಿಕ್ಕಿರುವುದು ಬಾಲಕನನ್ನು ಕೊಂದ ಚಿರತೆಯೇ ಎನ್ನುವುದು ಖಚಿತವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು