ಮೈಸೂರು: ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಪತ್ನಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಅಪರಾಧಿ ಜಯರಾಜುಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ 5ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ದೇವರಾಜು 30 ವರ್ಷದ ಹಿಂದೆ ಲಲಿತಾದ್ರಿಪುರದ ಜಯಮ್ಮ ಅವರನ್ನು ಮದುವೆಯಾಗಿದ್ದು, ಈತನ ದೈಹಿಕ, ಮಾನಸಿಕ ಹಿಂಸೆ ತಾಳದೆ ಅವರು ತವರು ಮನೆ ಸೇರಿದ್ದರು. ನಂತರ ಆತ ಚಟ್ನಹಳ್ಳಿಯ ಪುಟ್ಟಮ್ಮ ಎಂಬುವರನ್ನು ಮದುವೆಯಾಗಿದ್ದು, ದಂಪತಿಗೆ ಒಬ್ಬ ಮಗಳಿದ್ದಳು. ಮದುವೆಯಾದಾಗಿನಿಂದಲೂ ಆತ ಪತ್ನಿಗೆ ಬೈಯುವುದು, ಹಲ್ಲೆ ನಡೆಸುವುದನ್ನು ಮುಂದುವರಿಸಿದ್ದ. ಮನೆಯಲ್ಲಿ ಮಗಳು ಇದ್ದಾಗಲೇ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ. ಅದಕ್ಕೆ ಒಪ್ಪದಿದ್ದಾಗ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಬೆದರಿಸಿದ್ದ.
2022ರ ಜೂನ್ 27ರಂದು ಪುಟ್ಟಮ್ಮ ಮಲಗಿದ್ದಾಗ ತನ್ನೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಮಚ್ಚಿನಿಂದ ಆಕೆಯ ಕತ್ತನ್ನು ಕತ್ತರಿಸಿ, ಹಾಲ್‌ನಲ್ಲಿದ್ದ ಮಂಚದ ಮೇಲಿಟ್ಟು ಪರಾರಿಯಾಗಿದ್ದ. ಪ್ರಕರಣದ ತನಿಖಾಧಿಕಾರಿಯಾಗಿದ್ದ ಸ್ವರ್ಣಾ ಜಿ.ಎಸ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹15 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಈ.ಯೋಗೇಶ್ವರ ವಾದ ಮಂಡಿಸಿದರು.
ಚಿನ್ನದ ಸರಗಳವು
ಮೈಸೂರು: ಕೆಲಸ ಮುಗಿಸಿ ತೆರಳುತ್ತಿದ್ದ ಹಿನಕಲ್ ನಿವಾಸಿ ಶ್ರೀವಳ್ಳಿ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಅಪರಿಚಿತ ವ್ಯಕ್ತಿಗಳಿಬ್ಬರು 30 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.
ಕೆಲಸ ಮುಗಿಸಿ ವಿಜಯನಗರದ ಹೊಯ್ಸಳ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ. ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಂಜಾ ಮಾರಾಟಕ್ಕೆ ಯತ್ನ: ಬಂಧನ
ಮೈಸೂರು: ಗಾಯತ್ರಿಪುರಂ ಚರ್ಚ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ, ಕೇರಳದ ಸದ್ಯ ಗುಂಡ್ಲುಪೇಟೆಯಲ್ಲಿ ವಾಸಿಸುತ್ತಿರುವ ಅಕ್ಬರ್ ಪಾಷಾ ಎಂಬಾತನನ್ನು ಬಂಧಿಸಿರುವ ಸೈಬರ್ ಠಾಣಾ ಪೊಲೀಸರು, ₹1.20 ಲಕ್ಷ ಮೌಲ್ಯದ 4.130 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.