ಮೈಸೂರು: ಪರಿಶಿಷ್ಟರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ನಟ ಉಪೇಂದ್ರ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘದ ಸದಸ್ಯರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.
ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಕಾರರು ‘ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವಾಗ ಜಾತಿ ನಿಂದನೆ ಮಾಡಿ ಸಮುದಾಯವನ್ನು ಅವಮಾನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಕಾರ್ಯಾಧ್ಯಕ್ಷ ಕಲ್ಲಳ್ಳಿ ಕುಮಾರ ಮಾತನಾಡಿ, ‘ಯಾವುದೇ ಒಂದು ಜಾತಿಯನ್ನು ಅವಹೇಳನ ಮಾಡುವ ಯಾರನ್ನೇ ಆಗಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅವಹೇಳನಕಾರಿ ಮಾತುಗಳು ಸರಿಯಲ್ಲ’ ಎಂದರು.
‘ಬುದ್ದಿವಂತ, ಚಾಣಕ್ಯ ಎಂದೆಲ್ಲ ಹೇಳಿಕೊಳ್ಳುವ ನಟ, ಸಾಮಾಜಿಕ ಜೀವನದಲ್ಲಿ ಯಾವ ರೀತಿ ಮಾತನಾಡಬೇಕು ಎಂಬುದು ಗೊತ್ತಿಲ್ಲವೇ? ನೋವುಂಟು ಮಾಡುವ ಗಾದೆಯನ್ನು ಬಳಸುವುದು ಸರಿಯೇ? ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮನಸ್ಥಿತಿಯು ಅವರಲ್ಲಿನ ಕೋಮುವಾದಿ ಹಾಗೂ ಜಾತಿವಾದಿತನವನ್ನು ಸೂಚಿಸುತ್ತದೆ’ ಎಂದು ಆರೋಪಿಸಿದರು.
‘ಉಪೇಂದ್ರ ಬೆಂಬಲಿಗರು ಸಮುದಾಯ ಮೇಲೆ ಮುಗಿಬಿದ್ದಿದ್ದಾರೆ. ದಲಿತರು ಯಾವುದೇ ಕಾರಣಕ್ಕೂ ಶೋಷಣೆಯನ್ನು ಸಹಿಸುವುದಿಲ್ಲ. ರಾಜ್ಯ ಸರ್ಕಾರವು ಜಾತಿನಿಂದನೆ ಮಾಡಿರುವ ಉಪೇಂದ್ರ ಅವರನ್ನು ಬಂಧಿಸಲು ಕ್ರಮವಹಿಸದಿದ್ದರೆ, ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಸಿ.ಮಹೇಶ್, ಉಪಾಧ್ಯಕ್ಷ ಲಿಂಗರಾಜು, ಕಾರ್ಯಾಧ್ಯಕ್ಷ ಶಿವಶಂಕರ್, ಕಿರಣ್ ಕುಮಾರ್ , ಮರಿದೇವಯ್ಯ, ನಂಜುಂಡ, ರವಿ, ಪರಶು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.