ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಲಕ್ಷ್ಮಣ, ಯದುವೀರ್‌ ಬಿರುಸಿನ ಪ್ರಚಾರ

Published 5 ಏಪ್ರಿಲ್ 2024, 16:35 IST
Last Updated 5 ಏಪ್ರಿಲ್ 2024, 16:35 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಹಾಗೂ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಶುಕ್ರವಾರ ಬಿರುಬಿಸಿಲಿನಲ್ಲೂ ನಗರದ ವಿವಿಧೆಡೆ ಸಂಚಾರ ನಡೆಸಿ, ಜನರಿಂದ ಮತ ಯಾಚಿಸಿದರು.

ಲಕ್ಷ್ಮಣ ಅವರು ದೇವರಾಜ ಮಾರುಕಟ್ಟೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಜತೆಗೂಡಿ ‘ಗ್ಯಾರಂಟಿ ಯೋಜನೆ’ಗಳ ಕರಪತ್ರವನ್ನು ವಿತರಿಸುವ ಮೂಲಕ ಅಲ್ಲಿನ ವ್ಯಾಪಾರಿಗಳಿಂದ ಮತ ಯಾಚಿಸಿದರು.

ಮಾರುಕಟ್ಟೆಯ ಮಳಿಗೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ಜನಪರ ಹಾಗೂ ಅಭಿವೃದ್ಧಿ ಯೋಜನೆಗಳನ್ನು ತಿಳಿಸಿ ಬೆಂಬಲಿಸುವಂತೆ, ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬುವಂತೆ ಮನವಿ ಮಾಡಿದರು. ದೇವರಾಜ ಮಾರುಕಟ್ಟೆ ಅಭಿವೃದ್ಧಿಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ದೇವರಾಜ ಮಾರುಕಟ್ಟೆಯ ವರ್ತಕರ ಸಂಘದ ಅಧ್ಯಕ್ಷ ಮಹದೇವ್ ಅವರು ಶಾಸಕ ಕೆ.ಹರೀಶ್ ಗೌಡ ಹಾಗೂ ಅಭ್ಯರ್ಥಿ ಲಕ್ಷ್ಮಣ ಅವರನ್ನು ಸನ್ಮಾನಿಸಿದರು. ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಸಂಪೂರ್ಣ ಬೆಂಬಲ ಕೊಡುವುದಾಗಿ ಆಶ್ವಾಸನೆ ನೀಡಿದರು.

ಮಾರುಕಟ್ಟೆಯ ಅಂಗಡಿಯ ಮಾಲೀಕರು, ವ್ಯಾಪಾರಿಗಳು ಹಾಗೂ ಸಿಬ್ಬಂದಿ, ‘ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ನಾವು ಪಡೆದುಕೊಳ್ಳುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದೇವೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ’ ಎಂದು ತಿಳಿಸಿದರು.

ಪಕ್ಷದ ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮುಖಂಡರಾದ ಗೋಪಿ, ಪುಷ್ಪವಲ್ಲಿ, ಕಾರ್ಯಕರ್ತರು ಮತ್ತು ಮುಖಂಡ ಹೇಮಣ್ಣ ಉಪಸ್ಥಿತರಿದ್ದರು.

ನಂತರ ಅವರು, ಬಾಬು ಜಗಜೀವನ್‌ರಾಂ ಜಯಂತಿ ಅಂಗವಾಗಿ ಮುಖಂಡರೊಂದಿಗೆ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಸವನಪುರ ಮತ್ತು ಚಾಮರಾಜ ಕ್ಷೇತ್ರದ ವಿವಿಧೆಡೆ ಸಂಚರಿಸಿ ಮತ ಯಾಚಿಸಿದರು.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಎಂಐಟಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಮತ ಯಾಚಿಸಿದರು
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಎಂಐಟಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಮತ ಯಾಚಿಸಿದರು
ಬೆಂಬಲ ಕೋರಿದ ಯದುವೀರ್‌
ಎಂಐಟಿ ಪದವಿ ಕಾಲೇಜಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಯದುವೀರ್‌ ‘ನಾನು ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಕಣಕ್ಕಿಳಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಬಂದಿದ್ದೇನೆ. ಸಮಾಜಸೇವೆಯ ಮೂಲಕ ನಿಮಗೆ ನೆರವಾಗಬೇಕು ಎಂದು ಬಯಸಿದ್ದೇನೆ. ಮೈಸೂರು ಅರಸರು ಹಾಗೂ ನಿಮಗಿರುವ ಭಾವನಾತ್ಮಕ ಸಂಬಂಧವನ್ನು ಮುಂದಿಟ್ಟುಕೊಂಡು ಬೆಂಬಲ ಕೇಳುತ್ತಿಲ್ಲ. ನೀವು ತೋರಿದ ಪ್ರೀತಿಯ ಋಣ ತೀರಿಸಲು ನಾನು ಅವಕಾಶ ಕೇಳುತ್ತಿದ್ದೇನೆ’ ಎಂದರು. ‘ಮೈಸೂರು ಮಹಾರಾಜರು ಜನರ ಜೀವನಮಟ್ಟ ಸುಧಾರಿಸಲು ಶ್ರಮಿಸಿದ್ದರು. ಅದೇ ರೀತಿ ಈಗಿನ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಸ್ವಾವಲಂಬಿಯಾಗಿಸಲು ಕೆಲಸ ಮಾಡುತ್ತಿದ್ದಾರೆ. ವಿಕಸಿತ ಭಾರತಕ್ಕಾಗಿ ನಮಗೆ ಶಕ್ತಿ ತುಂಬಬೇಕು. ಶ್ರೇಷ್ಠ ಭಾರತ ನಿರ್ಮಾಣಕ್ಕಾಗಿ ಕೈಜೋಡಿಸಬೇಕು’ ಎಂದು ಕೋರಿದರು. ನಂತರ ಅವರು ಬಾಬು ಜಗಜೀವನ್‌ರಾಂ ಜಯಂತಿ ಅಂಗವಾಗಿ ಮುಖಂಡರೊಂದಿಗೆ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ವಿವಿಧ ಕಾಲೇಜುಗಳು ಹಾಗೂ ಉದ್ದಿಮೆಗಳಿಗೆ ತೆರಳಿ ಅಲ್ಲಿನವರಿಂದ ಮತ ಯಾಚಿಸಿದರು. ಕುರಿಮಂಡಿ ಗಣೇಶ ನಗರ ಮತ್ತು ವೀರನಗೆರೆಯಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT