ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ‘ಅಸಹಜ’ ವಹಿವಾಟು: ತೆರಿಗೆ ಇಲಾಖೆ ನಿಗಾ

ಗೋದಾಮುಗಳು, ಸರಕು ಸಾಗಣೆ ಮೇಲೆ ಕಣ್ಣಿಡಲು ಅಧಿಕಾರಿಗಳ ತಂಡ ರಚನೆ
Published 21 ಮಾರ್ಚ್ 2024, 6:42 IST
Last Updated 21 ಮಾರ್ಚ್ 2024, 6:42 IST
ಅಕ್ಷರ ಗಾತ್ರ

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆಯಬಹುದಾದ ಅಕ್ರಮ ವಹಿವಾಟು ತಡೆಯಲು ವಾಣಿಜ್ಯ ತೆರಿಗೆಗಳ ಇಲಾಖೆ ಜಂಟಿ ಆಯುಕ್ತರ (ಜಾರಿ) ಕಚೇರಿಯಿಂದ ನಿಗಾ ವಹಿಸಲಾಗಿದೆ.

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯು ಇಲ್ಲಿನ ದೇವರಾಜ ಮೊಹಲ್ಲಾದಲ್ಲಿರುವ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿದೆ. ಈ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಅಧಿಕಾರಿಗಳು ಮತ್ತು ನೌಕರರ ತಂಡವನ್ನು ರಚಿಸಲಾಗಿದ್ದು, ಅಸಹಜ ವ್ಯಾಪಾರ–ವಹಿವಾಟಿನ ಮೇಲೆ ವಿಚಕ್ಷಣೆ ವಹಿಸಲಾಗುತ್ತಿದೆ. ಅದಕ್ಕಾಗಿ ಕ್ರಿಯಾಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ.

‘ಸರಕುಗಳ ಮೇಲೆ, ಮೂಲದಲ್ಲೇ ನಿಯಂತ್ರಣ ಹೇರಿದರೆ ಆಮಿಷಗಳನ್ನು ಒಡ್ಡುವುದನ್ನು ತಡೆಯಬಹುದು’ ಎನ್ನುವ ಉದ್ದೇಶ ಇಲಾಖೆಯದ್ದು.

ಅಂತರರಾಜ್ಯಗಳ ನಡುವಿನ ವ್ಯಾಪಾರ–ವಹಿವಾಟುಗಳಿಗೆ ಹೆಬ್ಬಾಗಿಲಾದ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ, ಚುನಾವಣೆ ವೇಳೆ ನಡೆಯಬಹುದಾದ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಈ ಇಲಾಖೆಯಿಂದಲೂ ಕಣ್ಣಿಡಲಾಗಿದೆ. ವಂಚನೆಗಳನ್ನು ನಿರ್ಬಂಧಿಸಲು 24 ಗಂಟೆಯೂ ವಿಚಕ್ಷಣೆಗೆ ಕ್ರಮ ವಹಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಪಾಸಣೆ:

ಈ ಇಲಾಖೆಯ ಅಧಿಕಾರಿಗಳಿಗೆ ಕಾರ್ಯನಿರ್ವಹಣೆಗಾಗಿ ಗಡಿ ನಿಗದಿಪಡಿಸಲಾಗಿದೆ. ಅವರು ಅಂತರರಾಜ್ಯದಿಂದ ಬರುವ ಸರಕು ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಾರೆ. ತೆರಿಗೆ ವಂಚನೆ ಪ್ರಕರಣದ ಜೊತೆಗೆ, ಚುನಾವಣೆಯಲ್ಲಿ ಮತದಾರರಿಗೆ ಹಂಚುವುದಕ್ಕಾಗಿ ಸಾಗಿಸಲಾಗುವ ವಿವಿಧ ಸರಕುಗಳ ಮೇಲೂ ಕಣ್ಣಿಟ್ಟಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಾದ ನಂತರ ಇಲಾಖೆಯ ಚೆಕ್‌ಪೋಸ್ಟ್‌ಗಳು ಈಗ ಚಾಲ್ತಿಯಲ್ಲಿಲ್ಲ. ಹೀಗಾಗಿ, ಅಧಿಕಾರಿಗಳು ಗಸ್ತಿನಲ್ಲಿ ಇರುತ್ತಾರೆ. ಪೊಲೀಸ್ ಇಲಾಖೆಯ ಚೆಕ್‌ಪೋಸ್ಟ್‌ಗಳ ನೌಕರರ ಸಮನ್ವಯದಲ್ಲಿ ಕೆಲಸ ಮಾಡುತ್ತಾರೆ. ದಾಖಲೆಗಳಿಲ್ಲದ ಸರಕು, ಸಾಮಗ್ರಿ ಹಾಗೂ ಚಿನ್ನಾಭರಣ ಮೊದಲಾದವುಗಳನ್ನು ವಶಕ್ಕೆ ಪಡೆದು, ಮುಂದಿನ ಕ್ರಮ ಜರುಗಿಸುತ್ತಾರೆ.

ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ. ಕೇರಳದ ಗಡಿಯಾದ ಮೈಸೂರು ಜಿಲ್ಲೆಯ ಬಾವಲಿ, ಹ್ಯಾಂಡ್‌ಪೋಸ್ಟ್, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪೆರಂಬಾಡಿ, ಕುಟ್ಟ, ಚಾಮರಾಜನಗರ ಜಿಲ್ಲೆಯ ಪುಣಜನೂರಿನಲ್ಲಿ ನಿಗಾ ವಹಿಸಲಾಗುತ್ತಿದೆ. ಚುನಾವಣಾ ಆಯೋಗದಿಂದಲೂ ನಿರ್ದೇಶನ ನೀಡಲಾಗಿದೆ. ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ಚುನಾವಣಾ ಘಟಕ ಸ್ಥಾಪನೆ

ಸರಕು ಮೊದಲಾದವುಗಳ ಜಪ್ತಿ ಪ್ರಕರಣಗಳು, ವರದಿಗಳನ್ನು ಸಲ್ಲಿಸಲು ವಿಭಾಗದ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಜಾರಿ)–2 ನೇತೃತ್ವದಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರು ಹಾಗೂ ಒಬ್ಬ ದತ್ತಾಂಶ ನಮೂದಕ ಸಹಾಯಕರನ್ನು ನಿಯೋಜಿಸಿ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಯಲ್ಲಿ ‘ಚುನಾವಣಾ ಘಟಕ’ ಸ್ಥಾಪಿಸಲಾಗಿದೆ.

ಕೇಂದ್ರ ಕಚೇರಿಯಲ್ಲಿರುವ ಇ–ಎಆರ್‌ಎಂ (ಎಲೆಕ್ಷನ್ ಅನಾಲಿಟಿಕ್ಸ್‌ ಅಂಡ್ ರಿಸ್ಕ್‌ ಮ್ಯಾನೇಜ್‌ಮೆಂಟ್ ಸೆಲ್‌) ಘಟಕಕ್ಕೆ ವರದಿ ನೀಡುವ ಕಾರ್ಯವೂ ಇಲ್ಲಿಂದ ನಡೆಯಲಿದೆ. ತೆರಿಗೆ ಪಾವತಿದಾರರು ಅಥವಾ ವಾಹನ ತಪಾಸಣೆ ಕುರಿತು ಮಾಹಿತಿ ಕೊಡಲಾಗುತ್ತದೆ. ಇ–ವೇ ಬಿಲ್‌ ಅನಾಲಿಟಿಕ್‌ ಪೋರ್ಟಲ್‌ ತಂತ್ರಜ್ಞಾನವನ್ನು ಬಳಸಿ ಆಯಾ ವಿಭಾಗಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಉಚಿತವಾಗಿ ನೀಡುವ ಸರಕುಗಳು ಸಾಗಾಟವನ್ನು ಪತ್ತೆ ಹಚ್ಚಿ, ವಿಶ್ಲೇಷಿಸಿ ವರದಿಯನ್ನು ಸಲ್ಲಿಸಲಾಗುವುದು ಎಂಬ ವಿವರ ದೊರೆತಿದೆ.ಸಾರ್ವಜನಿಕರು ಅಕ್ರಮ ಕಂಡುಬಂದಲ್ಲಿ ನಿಯಂತ್ರಣ ಕೊಠಡಿ ದೂ.ಸಂಖ್ಯೆ:0821– 2540277 ಸಂಪರ್ಕಿಸಿ ಮಾಹಿತಿ ಹಂಚಿಕೊಳ್ಳಬಹುದಾಗಿದೆ.

ತಂತ್ರಾಂಶ ಆಧರಿಸಿ ಪತ್ತೆ ಕಾರ್ಯ

ಸರಕು ಹಾಗೂ ಸೇವೆಗಳ ಬಗ್ಗೆ ವಿವಿಧ ತಂತ್ರಾಂಶಗಳಲ್ಲಿ ದಾಖಲಾಗುವ ಮಾಹಿತಿ ಆಧರಿಸಿಯೂ ಕ್ರಮ ವಹಿಸಲಾಗುತ್ತದೆ. ಘೋಷಿತ ಹಾಗೂ ಅನಧಿಕೃತ (ಇದ್ದಲ್ಲಿ) ಗೋದಾಮುಗಳಿದ್ದರೆ ಅವುಗಳ ಮೇಲೆಯೂ ಕಣ್ಣಿಡಲಾಗಿದೆ. ಅಧಿಕಾರಿಗಳು, ದಿಢೀರ್‌ ದಾಳಿ ನಡೆಸಿ ತಪಾಸಣೆ ಕೈಗೊಳ್ಳಲಿದ್ದಾರೆ.

ಮತದಾರರಿಗೆ ಉಚಿತವಾಗಿ ವಿತರಿಸಬಹುದಾದ ಗೃಹೋಪಯೋಗಿ ವಸ್ತುಗಳು, ಕುಕ್ಕರ್‌ಗಳು, ಗ್ಯಾಸ್‌ ಬರ್ನರ್‌ಗಳು, ಇಸ್ತ್ರಿಪೆಟ್ಟಿಗೆ, ಮೊಬೈಲ್‌ ಫೋನ್‌ಗಳು, ಮಿಕ್ಸಿ, ಗ್ರೈಂಡರ್‌, ಫ್ಯಾನ್‌ಗಳು, ಗೋಡೆ ಗಡಿಯಾರಗಳು, ಚಿನ್ನ ಹಾಗೂ ಬೆಳ್ಳಿ ಆಭರಣ, ಸ್ಟೀಲ್‌ ಪದಾರ್ಥಗಳು, ಸಿದ್ಧ ಉಡುಪುಗಳು, ಸೀರೆ ಮೊದಲಾದ ಜವಳಿ ಮಾರಾಟದ ಮೇಲೆ ನಿಗಾ ವಹಿಸಲಾಗಿದೆ. ರೈಲು, ಬಸ್‌ ನಿಲ್ದಾಣ, ಟ್ರಾನ್ಸ್‌ಪೋರ್ಟ್‌ ಕಂಪನಿಗಳ ಮೇಲೂ ಕಣ್ಣಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ನೋಡಲ್ ಅಧಿಕಾರಿಗಳ ನೇಮಕ

ಚಿಟ್‌ ಫಂಡ್, ಸಣ್ಣ ಮತ್ತು ಸೂಕ್ಷ್ಮ ಸಾಲದ ವಹಿವಾಟು ಪ್ರಮಾಣದ ‘ಅಸಹಜ ವ್ಯತ್ಯಾಸ’ವನ್ನು ಗುರುತಿಸಿ, ಆಮಿಷಗಳಿಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗಿದೆ. ಎಂತಹ ಸರಕುಗಳು, ಎಷ್ಟು ಪ್ರಮಾಣದಲ್ಲಿ ಸಾಗಣೆಯಾಗುತ್ತಿದೆ. ಇದರ ಹಿನ್ನೆಲೆ–ಕಾರಣವೇನು ಎಂಬಿತ್ಯಾದಿ ವಿಷಯಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ. ಮದುವೆ ಮಂಟಪ, ಸಮುದಾಯ ಭವನಗಳು, ಮುದ್ರಣಾಲಯಗಳು ಹಾಗೂ ಕೇಟರಿಂಗ್‌ ಸರ್ವಿಸ್‌ ಮಾಡುವ ಸ್ಥಳಗಳ ಮೇಲೂ ದಾಳಿ ನಡೆಸಲಾಗುತ್ತದೆ ಎನ್ನುತ್ತಾರೆ ಅವರು. ಚುನಾವಣೆಗೆ ಸಂಬಂಧಿಸಿದ ಸಮನ್ವಯ ಕಾರ್ಯಗಳಿಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಾಲ್ಕೂ ಜಿಲ್ಲೆಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು ನೋಡಲ್ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ.

ನೋಡಲ್ ಅಧಿಕಾರಿಗಳು

l ಮೈಸೂರು–ಕಂಬಣ್ಣ ಡಿ. ಮೊ.ಸಂಖ್ಯೆ: 90195 07148

l ಮಂಡ್ಯ–ಎಚ್‌.ಎನ್.ಶ್ರೀನಿವಾಸ್, ಮೊ.ಸಂಖ್ಯೆ: 96633 63227

l ಚಾಮರಾಜನಗರ– ಎಸ್.ನಾಗರಾಜ್‌, ಮೊ.ಸಂಖ್ಯೆ: 98865 52932

l ಕೊಡಗು– ಸಣ್ಣಲಚ್ಮನಾಯಕ, ಮೊ.ಸಂಖ್ಯೆ: 94818 02462

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT