ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿಯಾಗಲು ₹6 ಕೋಟಿ:ಸಂಸದ ಪ್ರತಾಪ ಸಿಂಹ ಹೇಳಿಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು

Last Updated 20 ಡಿಸೆಂಬರ್ 2022, 7:04 IST
ಅಕ್ಷರ ಗಾತ್ರ

ಮೈಸೂರು: ‘ಕುಲಪತಿಯಾಗಲು ₹ 5 ಕೋಟಿ, ₹ 6 ಕೋಟಿ ದುಡ್ಡು ತೆಗೆದುಕೊಂಡರೆ ಆತ ಏನಾಗುತ್ತಾನೆ? ಬೇರೆ ವ್ಯವಹಾರ ಮಾಡಲೇಬೇಕಾಗುತ್ತದೆ. ಆಯ್ಕೆ ಪ್ರಕ್ರಿಯೆಗೆ ರಚಿಸುವ ಶೋಧನಾ ಸಮಿತಿಯಲ್ಲಿ ಹೆಸರು ತರುವುದಕ್ಕೂ ಲಾಬಿ ನಡೆಯುತ್ತಿದೆ’ ಎಂಬ ಮೈಸೂರು–ಕೊಡಗು ಬಿಜೆಪಿ ಸಂಸದ ಪ್ರತಾಪ ಸಿಂಹ ನೀಡಿರುವ ಹೇಳಿಕೆ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದೇನೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಇಲ್ಲಿ ಮಂಗಳವಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿಕಿ ಬುಕ್ಸ್‌–ಸ್ಮಾರ್ಟ್‌ಕೀ ವತಿಯಿಂದ ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕುಲಪತಿಗಳ ನೇಮಕಾತಿಯಲ್ಲಿನ ಭ್ರಷ್ಟಾಚಾರದ ಕುರಿತು ಪ್ರತಾಪ ಮಾತನಾಡಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದನ್ನು ಆಧರಿಸಿ ದೂರು ನೀಡಲಿದ್ದೇನೆ’ ಎಂದು ಹೇಳಿದರು.

‘ಇಂಗ್ಲಿಷ್‌ನಲ್ಲಿ ಒಂದು ವಾಕ್ಯ ಬರೆಯಲು ಗೊತ್ತಿಲ್ಲದವರು ಕೆ–ಸೆಟ್ ಪಾಸಾಗಿದ್ದಾರೆ. ಅವರು ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾದರೆ, ಯಾವ ರೀತಿ ಪಾಠ ಮಾಡಬಹುದು? ಕೆ–ಸೆಟ್ ಪರೀಕ್ಷೆಯಲ್ಲಿ ಗೋಲ್‌ಮಾಲ್ ನಡೆಯುತ್ತಿದೆ. ಹೀಗಾಗಿ, ಮೈಸೂರು ವಿಶ್ವವಿದ್ಯಾಲಯದ ವಿರುದ್ಧವೇ ಯುಜಿಸಿ ಅಧ್ಯಕ್ಷರಿಗೆ ದೂರು ಕೊಟ್ಟು ವಿಚಾರಣೆಗೆ ಹಾಕಿಸಿದ್ದೇನೆ. ನಾವು ಕಮಿಷನ್‌ ಪಡೆಯದೇ ರಾಜಕಾರಣ ಮಾಡುತ್ತಿದ್ದೀವಾ? ಭ್ರಷ್ಟಾಚಾರ ಮುಕ್ತ ರಾಜಕಾರಣದ ಬಗ್ಗೆಯೂ ಫೋಕಸ್ ಮಾಡಬೇಕಿದೆ’ ಎಂದೆಲ್ಲಾ ಹೇಳಿದ್ದಾರೆ. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸುವಂತೆ ಲೋಕಾಯುಕ್ತವನ್ನು ಕೋರಲಾಗುವುದು’ ಎಂದರು.

‘ಲೋಕಾಯುಕ್ತ ಪೊಲೀಸರು15 ದಿನಗಳಲ್ಲಿ ಕ್ರಮ ವಹಿಸದಿದ್ದಲ್ಲಿ, ಹೈಕೋರ್ಟ್‌ ಮೊರೆ ಹೋಗುತ್ತೇನೆ’ ಎಂದು ತಿಳಿಸಿದರು.

‘ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ಹೇಳುತ್ತಿರುವುದನ್ನು ಗಮನಿಸಿದರೆ, ರಾಜ್ಯಪಾಲರ ಕಚೇರಿಯೂ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ ಎಂದರ್ಥವೇ? ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಉತ್ತರ ಕೊಡಬೇಕು’ ಎಂದು ಒತ್ತಾಯಿಸಿದರು.

‘ಐಟಿ, ಸಿಬಿಐ, ಇಡಿಯಂತಹ ತನಿಖಾ ಸಂಸ್ಥೆಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರ ಮೇಲೆ ಆಗಾಗ ದಾಳಿ ನಡೆಸುತ್ತಲೇ ಇದೆ. ನಾವು ಇದಕ್ಕೆಲ್ಲಾ ಜಗ್ಗುವುದಿಲ್ಲ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ 21 ಪ್ರಮುಖರನ್ನು ಬಿಜೆಪಿಯವರು ‍ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದ್ದಾರೆ. ಇಲ್ಲದಿದ್ದರೆ, ಐಟಿ ದಾಳಿ ಮಾಡಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT