ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಶುದ್ಧೀಕರಣಕ್ಕೆ ಮಾದೇಗೌಡ ಒತ್ತಾಯ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ

Published : 24 ಆಗಸ್ಟ್ 2024, 16:19 IST
Last Updated : 24 ಆಗಸ್ಟ್ 2024, 16:19 IST
ಫಾಲೋ ಮಾಡಿ
Comments

ಮೈಸೂರು: ಇಲ್ಲಿನ ಮುಡಾ ಶುದ್ಧೀಕರಿಸುವಂತೆ ಒತ್ತಾಯಿಸಿ ನಗರ ವಿಶ್ವಸ್ಥ ಮಂಡಳಿಯ ಮಾಜಿ ಅಧ್ಯಕ್ಷ, ವಿಧಾನಪರಿಷತ್‌ ಮಾಜಿ ಸದಸ್ಯ ಡಿ.ಮಾದೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

‘ಪರಮೋಚ್ಛ ಅಧಿಕಾರದಿಂದ ಭೂಗಳ್ಳರ ವಿರುದ್ಧ ಕಠಿಣ ಕಾನೂನು ಜಾರಿಗೆ ತಂದು, ಬಡ ಜನರು ನೆಮ್ಮದಿಯ ಸೂರು ಕಟ್ಟಿಕೊಳ್ಳಲು ನೆರವಾಗಬೇಕು. ಆ ಕಾನೂನು ಎಲ್ಲ ಪ್ರಾಧಿಕಾರಗಳಿಗೂ ಅನ್ವಯ ಆಗುವಂತೆ ಇರಬೇಕು’ ಎಂದು ಮನವಿ ಮಾಡಿದ್ದಾರೆ.

‘ಮುಡಾದಿಂದ ನಿಮ್ಮ ಪತ್ನಿ 14 ನಿವೇಶನಗಳನ್ನು ಪಡೆದಿರುವುದು ತಲ್ಲಣ ಸೃಷ್ಟಿಸಿದೆ. ನಿಮ್ಮ ಅಧಿಕಾರದ ಪ್ರಭಾವದಿಂದ ಪಡೆದುಕೊಂಡಿದ್ದು ಎಂಬ ಆರೋಪ ಕೇಳಿಬಂದಿತು. ಇದಕ್ಕೆ ಪ್ರತಿಪಕ್ಷಗಳು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದವು. ಇದಕ್ಕೆ ಪ್ರತ್ಯುತ್ತರ ನೀಡಲು ನೀವೂ ಸಮಾವೇಶ ಮಾಡಿ ವೀರಾವೇಶದ ಮಾತನಾಡಿದಿರಿ. ಮರು ದಿನ ವಿರೋಧ ಪಕ್ಷದವರೂ ಅದೇ ಮೈದಾನದಲ್ಲಿ ಮುಡಾ ಹಗರಣದ ಬಗ್ಗೆ ಮಾತಾಡಿದವು. ನೀವೆಲ್ಲ ಪರಸ್ಪರ ಆರೋಪ– ಪ್ರತ್ಯಾರೋಪ ಮಾಡಿದ್ದರಿಂದ ಮುಡಾ ಸಮಸ್ಯೆಯೇನೂ ಬಗೆಹರಿಯಲಿಲ್ಲ. ನಿವೇಶನ ಬಯಸಿ ದಶಕಗಳಿಂದ ಕಾಯುತ್ತಿರುವ 84 ಸಾವಿರ ನಿವೇಶನಾಕಾಂಕ್ಷಿಗಳಿಗೂ ಯಾವುದೇ ಪ್ರಯೋಜನ ಆಗಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಿರೋಧಿಗಳು ನಿಮ್ಮನ್ನು ‘ಮಜಾವಾದಿ’ ಎನ್ನಲಿ. ಆದರೆ, ನಾನು ನಿಮ್ಮನ್ನು 50 ವರ್ಷಗಳಿಂದ ಕಂಡಂತೆ ‘ಸಮಾಜವಾದಿ’ಯಾಗೇ ಇದ್ದೀರಿ’ ಎಂದಿದ್ದಾರೆ.

‘ನಿಮ್ಮ ಪತ್ನಿ ಪಾರ್ವತಿ ಹೆಸರು ಮುಡಾ ಪ್ರಕರಣದಲ್ಲಿ ಬಂದಿರುವುದಕ್ಕೆ ನನಗೆ ಬಹಳ ನೋವಾಗುತ್ತಿದೆ. ಕಳಂಕದಲ್ಲಿ  ಸಿಲುಕಿದ್ದು ಬೇಸರ ತರಿಸಿದೆ. ಪ್ರಭಾವವನ್ನು ಬಳಸಿಕೊಳ್ಳದ ಅವರಿಗೆ ಕಳಂಕ ಹಚ್ಚಿದಿರಲ್ಲ, ಇದು ಸರಿಯೇ?’ ಎಂದು ಕೇಳಿದ್ದಾರೆ.

‘ನಿಮಗೆ ನಿಮ್ಮ ಪತ್ನಿ ಮೇಲೆ ಕಿಂಚಿತ್ತು ಕಾಳಜಿ ಇದ್ದಿದ್ದರೆ, ಆ 14 ನಿವೇಶನಗಳನ್ನು ಮುಡಾಕ್ಕೆ ಹಿಂತಿರುಗಿಸಿ ಆರೋಪ ಮುಕ್ತರಾಗುತ್ತಿದ್ದಿರಿ. ಹೀಗಾಗಿದ್ದರೆ, ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ. ಇದರ ವಿರುದ್ಧ ನೀವು ನ್ಯಾಯಾಲಯದ ಮೊರೆ ಹೋಗುವ ಸಂದರ್ಭವೂ ಉದ್ಭವಿಸುತ್ತಿರಲಿಲ್ಲ. ಆದರೆ, ನೀವು ಮುಡಾ ಪ್ರಕರಣವನ್ನು ಸಮರ್ಥಿಸಿಕೊಂಡು ಈಗ ಕಾನೂನಿನ ಕುಣಿಕೆಗೆ ನೀವು ಸಿಲುಕಿದ್ದಲ್ಲದೆ, ಏನೂ ಅರಿಯದ ಮುಗ್ಧ ಪತ್ನಿ ಪಾರ್ವತಿ ಅವರನ್ನೂ ಕಾನೂನಿನ ಕಟಕಟೆಗೆ ದೂಡಿದ್ದೀರಿ. ಇದು ನಿಮ್ಮ ಆತ್ಮಸಾಕ್ಷಿಗಾದರೂ ಸರಿ ಎನಿಸುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

‘ನಿಮ್ಮ ಪತ್ನಿಗೆ 2021ರಲ್ಲಿ ಶೇ 50:50 ಅನುಪಾತದಡಿ 14 ನಿವೇಶನಗಳನ್ನು ಬಿಜೆಪಿ ಅಧಿಕಾರಾವಧಿಯಲ್ಲೇ ಕೊಟ್ಟಿರಲಿ. ಹಿರಿಯ ರಾಜಕಾರಣಿಯಾದ ನಿಮ್ಮ ಗಮನಕ್ಕೆ ಬಂದಾಗ, ಇದೊಂದು ಅಕ್ರಮವೆಂದು ಅನ್ನಿಸಲಿಲ್ಲವೇ’ ಎಂದು ಕೇಳಿದ್ದಾರೆ.

‘ಮುಡಾ ಶುದ್ಧೀಕರಣಕ್ಕಾಗಿ ಅಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ಬಯಲಿಗೆ ತರಲು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರಂಥ ದಕ್ಷರಿಂದ ತನಿಖೆ ನಡೆಸಿ. 50:50 ಅನುಪಾತದಲ್ಲಿ ಮುಡಾ ನಿವೇಶನಗಳನ್ನು ಅವ್ಯಾಹತವಾಗಿ ಕಬಳಿಸಲಾಗಿದೆ. ಇದನ್ನೆಲ್ಲ ಮರಳಿ ಪಡೆದು, ಹಿಂದಿನಿಂದಲೂ ನಿವೇಶನಕ್ಕಾಗಿ ಕಾಯುತ್ತಿರುವ ಅರ್ಹ ಅರ್ಜಿದಾರರಿಗೆ ಹಂಚಿ’ ಎಂದು ಸಲಹೆ ನೀಡಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ
ನಿವೇಶನ ಅಧಿಕಾರದ ಪ್ರಭಾವದಿಂದ ಪಡೆದುಕೊಂಡ ಆರೋಪ ಪತ್ನಿ ಪಾರ್ವತಿ ಅವರನ್ನೂ ಕಾನೂನಿನ ಕಟಕಟೆಗೆ ದೂಡಲಾಗಿದೆ ನಿವೇಶನಕ್ಕೆ ದಶಕಗಳಿಂದ ಕಾಯುತ್ತಿರುವ 84 ಸಾವಿರ ಆಕಾಂಕ್ಷಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT