ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಲಕಾಡು: ನೂತನ ಅಣೆಕಟ್ಟು ಬಹುತೇಕ ಪೂರ್ಣ

₹62 ಕೋಟಿ ವೆಚ್ಚದಲ್ಲಿ ಮಾಧವ ಮಂತ್ರಿ ಡ್ಯಾಂ ನಿರ್ಮಾಣ; ನದಿ ಪಾತ್ರದ ರೈತರಿಗೆ ಅನುಕೂಲ
Published 8 ಫೆಬ್ರುವರಿ 2024, 7:14 IST
Last Updated 8 ಫೆಬ್ರುವರಿ 2024, 7:14 IST
ಅಕ್ಷರ ಗಾತ್ರ

ತಲಕಾಡು: ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ನೂತನ ಮಾಧವ ಮಂತ್ರಿ ಅಣೆಕಟ್ಟು ನಿರ್ಮಾಣ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈ ಭಾಗದ ರೈತರ ಕನಸು ಈಡೇರಿದೆ.

ಸುಮಾರು ₹62 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟಿನ ಕಾಮಗಾರಿ ಶೇ 90ರಷ್ಟು ಮುಗಿದಿದೆ. ನಾಲ್ಕು ಗೇಟ್‌ಗಳನ್ನು ನಿರ್ಮಿಸಲಾಗಿದ್ದು, ಅಂತಿಮ ಹಂತದ ಕಾಮಗಾರಿ ಮಾರ್ಚ್‌ಗೆ ಕೊನೆಗೊಳ್ಳಲಿದೆ. ನೂತನ ಅಣೆಕಟ್ಟೆಯು 520 ಮೀಟರ್ ಉದ್ದ, 8.5 ಮೀಟರ್ ಎತ್ತರ ಹಾಗೂ 1.28 ಮೀಟರ್ ಅಗಲ ಇದೆ.

‘ಅಣೆಕಟ್ಟೆಯ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲು ₹75 ಲಕ್ಷಕ್ಕೂ ಅಧಿಕ ಮೊತ್ತದ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮ ಬನ್ನೂರು ವಿಭಾಗದ ಎಇಇ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜಯನಗರ ಸಾಮ್ರಾಜ್ಯದ ಮಂತ್ರಿಯಾಗಿದ್ದ ಮಾಧವರಾಯನಿಂದ ಕಾವೇರಿ ನದಿಗೆ ಅಡ್ಡಲಾಗಿ ಕಲ್ಲು ಬಂಡೆ, ಗಾರೆ ಬಳಸಿ ನಿರ್ಮಿಸಿದ ಕಾರಣ ‘ಮಾಧವ ಮಂತ್ರಿ ಅಣೆಕಟ್ಟೆ’ ಎಂದು ಪ್ರಸಿದ್ಧಿ ಪಡೆದಿದೆ. 600 ವರ್ಷಗಳ ಇತಿಹಾಸ ಹೊಂದಿದ್ದು, 5,828 ಎಕರೆ ಪ್ರದೇಶಕ್ಕೆ ನೀರು ಉಣಿಸುತ್ತಿದೆ. ಮಾಧವ ಮಂತ್ರಿ ನಾಲೆ ವ್ಯಾಪ್ತಿಯು 29 ಕಿ.ಮೀ. ಇದ್ದು, 170 ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತದೆ. ತಲಕಾಡು, ಕಾಳಬಸವನ ಹುಂಡಿ, ಕುಕ್ಕೂರು, ಹೊಳೆಸಾಲು, ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಸೇರಿದಂತೆ ಅನೇಕ ಗ್ರಾಮಗಳ ರೈತರಿಗೆ ಉಪಯೋಗವಾಗಿದೆ. 

2013ರಿಂದ 2016ರವರೆಗೆ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಾಗ ಅಣೆಕಟ್ಟಿನಲ್ಲಿ ಬಿರುಕು ಕಾಣಿಸಿಕೊಂಡು, ಅದರ ಕಲ್ಲುಗಳು ಸಡಿಲಗೊಂಡಿದ್ದವು. ನೀರು ಹರಿದು ನದಿ ಪಾತ್ರದ ಸುತ್ತಮುತ್ತ ಬೆಳೆದಿದ್ದ ಬೆಳೆಗಳಿಗೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ಅಣೆಕಟ್ಟೆಗೆ ಭೇಟಿ ನೀಡಿದ್ದ ಸಚಿವ ಎಚ್‌.ಸಿ.ಮಹದೇವಪ್ಪ ಅವರು, ₹62 ಕೋಟಿ ವೆಚ್ಚದಲ್ಲಿ ಹೊಸ ಅಣೆಕಟ್ಟೆಯ ನಿರ್ಮಿಸುವುದಾಗಿ ತಿಳಿಸಿದ್ದರು.

1346ರಲ್ಲಿ ಮಾಧವರಾಯನಿಂದ ನಿರ್ಮಾಣವಾದ ಅಣೆಕಟ್ಟೆ
1346ರಲ್ಲಿ ಮಾಧವರಾಯನಿಂದ ನಿರ್ಮಾಣವಾದ ಅಣೆಕಟ್ಟೆ

‘ಅಣೆಕಟ್ಟೆಯಿಂದ ಈ ಭಾಗದ ಜನರು, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬಹುದು. ಹಿನ್ನೀರಿನಲ್ಲಿ ಮೀನು ಸಾಕಣೆ ಮಾಡಬಹುದು. ಮಾಧವ ಮಂತ್ರಿ ಅಣೆಕಟ್ಟೆ ತಲಕಾಡು ಜನರ ಜೀವನಾಡಿಯಾಗಿದೆ’ ಎಂದು ನಿವಾಸಿ ಶ್ರೀನಿವಾಸರಾವ್ ಹೇಳಿದರು.

ಶ್ರೀನಿವಾಸ್ ರಾವ್
ಶ್ರೀನಿವಾಸ್ ರಾವ್
‘ಅಣೆಕಟ್ಟೆ ಕಾಮಗಾರಿ ಮುಗಿಯವ ಹಂತಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು.
ರಘುರಾಮ್ ಸೈಟ್ ಎಂಜಿನಿಯರ್‌ ರಾಮ್ ಲಿಂಗಮ್ ಕನ್‌ಸ್ಟ್ರಕ್ಷನ್ ಕಂಪನಿ
ಟಿ.ಎನ್.ರಮೇಶ್
ಟಿ.ಎನ್.ರಮೇಶ್
ಎಚ್.ಸಿ.ಮಹದೇವಪ್ಪ ಅವರ ಶ್ರಮದಿಂದ ಮಾಧವ ಮಂತ್ರಿ ನೂತನ ಅಣೆಕಟ್ಟೆ ನಿರ್ಮಾಣವಾಗಿದೆ. ಇಲ್ಲದಿದ್ದರೆ ಈ ಭಾಗದ ರೈತರು ವಲಸೆ ಹೋಗಬೇಕಿತ್ತು.
ಟಿ.ಎನ್.ರಮೇಶ್ ರೈತ
ಎಚ್‌.ಸಿ.ಮಹದೇವಪ್ಪ
ಎಚ್‌.ಸಿ.ಮಹದೇವಪ್ಪ
ಉದ್ಯಾನ ನಿರ್ಮಾಣ
‘ತಲಕಾಡು ಭಾಗದ ರೈತರಿಗೆ ಅನುಕೂಲ ಕಲ್ಪಿಸಲು ಮಾಧವ ಮಂತ್ರಿ ನೂತನ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರದೇಶವು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಲು ಉದ್ಯಾನ ನಿರ್ಮಿಸಲಾಗುವುದು’ ಎಂದು ಸಚಿವ ಎಚ್‌.ಸಿ.ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT