ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಭದ್ರತೆಯಲ್ಲಿ ನಡೆದ ಮಹಿಷ ದಸರಾ: ಸಾವಿರಾರು ಮಂದಿ ಭಾಗಿ

ಸಾವಿರಾರು ಮಂದಿ ನಡುವೆ ಪುರಭವನ ಆವರಣದಲ್ಲಿ ಕಾರ್ಯಕ್ರಮ
Published 13 ಅಕ್ಟೋಬರ್ 2023, 19:32 IST
Last Updated 13 ಅಕ್ಟೋಬರ್ 2023, 19:32 IST
ಅಕ್ಷರ ಗಾತ್ರ

ಮೈಸೂರು: ಮಹಿಷ ದಸರಾ ಆಚರಣೆ ಸಮಿತಿಯು ಇಲ್ಲಿನ ಪುರಭವನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಿಷ ದಸರಾ ಹಾಗೂ ದಮ್ಮ ದೀಕ್ಷಾ ಕಾರ್ಯಕ್ರಮ’ ಪೊಲೀಸ್‌ ಭದ್ರತೆಯಲ್ಲಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಮಂದಿ ಭಾಗವಹಿಸಿದ್ದರು. ಮಹಿಷಾಸುರನಿಗೆ ಜೈಕಾರ ಮೊಳಗಿದವು.

ಮಹಿಷ ದಸರಾ ಆಚರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪುರಭವನದ ಆವರಣದಲ್ಲಿ ಮಾತ್ರ ಕಾರ್ಯಕ್ರಮಕ್ಕೆ ಪೊಲೀಸರು ಅವಕಾಶ ನೀಡಿದ್ದರು. ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡಲಿಲ್ಲ. ಬೆಟ್ಟದ ಪ್ರವೇಶಕ್ಕೆ ಸಾರ್ವಜನಿಕರಿಗೂ ನಿರ್ಬಂಧ ವಿಧಿಸಲಾಗಿತ್ತು.

ನಿಷೇಧಾಜ್ಞೆ ನಡುವೆಯೂ ವಿವಿಧೆಡೆಯಿಂದ ನೀಲಿ ಪಟ್ಟಿಗಳನ್ನು ತೊಟ್ಟು ತಂಡೋಪತಂಡವಾಗಿ ಬೈಕ್‌ ಜಾಥಾದಲ್ಲಿ ಜನ ಬಂದು ಸೇರಿದ್ದರು. ಸ್ತಬ್ಧಚಿತ್ರವನ್ನೂ ತಂದಿದ್ದರು. ಜೈ ಭೀಮ್ ಘೋಷಣೆಗಳೂ ಮೊಳಗಿದವು.

‘ಮೈಸೂರಿನ ಅಸ್ಮಿತೆಗಾಗಿ ಮಹಿಷ ದಸರಾ’ ಫಲಕ ಹಾಕಲಾಗಿತ್ತು. ಮಾತನಾಡಿದವರಲ್ಲಿ ಕೆಲವರು ಇದು ‘ಮಹಿಷ ಉತ್ಸವ’ ಎಂದರು. ದಮ್ಮ ದೀಕ್ಷಾ ಕಾರ್ಯಕ್ರಮವೂ ನಡೆಯಿತು. ಮಹಿಷಾಸುರನ ಕಟೌಟ್‌, ಬುದ್ಧ, ಬಸವ ಹಾಗೂ ಮಹಿಷನ ಚಿಕ್ಕ ಪ್ರತಿಮೆಗಳಿಗೆ ಪುಷ್ಪಾರ್ಚನೆಯಾಯಿತು. ನೆರೆದಿದ್ದವರಿಗೆ ಭಾರತದ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.

ದಾಖಲೆ:

ಹಿಂದೆ, ಚಾಮುಂಡಿ ಬೆಟ್ಟದ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ, ಅಶೋಕಪುರಂನಲ್ಲಿ ಮೆರವಣಿಗೆಯಂತಹ ಸಣ್ಣ ಕಾರ್ಯಕ್ರಮವಷ್ಟೇ ನಡೆಯುತ್ತಿತ್ತು. ಇದೇ ಮೊದಲ ಬಾರಿಗೆ ಅರಮನೆ ಎದುರಿನ ಪುರಭವನದ ಆವರಣದಲ್ಲಿ ಅದ್ಧೂರಿಯಾಗಿ ನಡೆದ ಕಾರ್ಯಕ್ರಮ ದಾಖಲೆ ಬರೆಯಿತು. ಮಧ್ಯಾಹ್ನದವರೆಗೂ ಕಾರ್ಯಕ್ರಮ ನಡೆಯಿತು. ಪುರಭವನದ ಒಳಾವರಣ ಹಾಗೂ ಸುತ್ತಮುತ್ತಲೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಹಾಗೂ ಬಿಜೆಪಿ ಮುಖಂಡ ಗಿರಿಧರ್‌ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವಿವಿಧ ಸಂಘಟನೆ, ಜಾತಿಗಳ ಮುಖಂಡರು ‍ಪಾಲ್ಗೊಂಡಿದ್ದರು.

ಗಾಂಧಿ ನಗರದ ಸುರೇಶ್ ಹಾಗೂ ವಿನೋದ್ ಮಹಿಷಾಸುರನ ವೇಷ ಧರಿಸಿ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲೆಡೆಯೂ ಈ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಕರೆ ನೀಡಲಾಯಿತು. ಮಹಿಷಾಸುರನನ್ನು ವಿರೋಧಿಸುವವರನ್ನು ಖಂಡಿಸಲಾಯಿತು. ಮಾತನಾಡಿದ ಪ್ರಮುಖರಲ್ಲಿ ಕೆಲವರು ನೇರವಾಗಿ ಹಾಗೂ ಕೆಲವರು ಹೆಸರು ಪ್ರಸ್ತಾಪಿಸಿದೇ ಬಿಜೆಪಿ ಸಂಸದ ಪ್ರತಾಪ ಸಿಂಹ ವಿರುದ್ಧ ಕಿಡಿಕಾರಿದರು.

ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಭೋದಿದತ್ತ ಭಂತೇಜಿ, ಕೆ.ಎಸ್. ಭಗವಾನ್, ಮಹೇಶ್ ಚಂದ್ರಗುರು, ತಲಕಾಡು ಚಿಕ್ಕರಂಗೇಗೌಡ, ಜೆ.ಎಸ್. ಪಾಟೀಲ, ಪುರುಷೋತ್ತಮ, ಮಹಿಷ ಮಂಡಲ ಕೃತಿಯ ಲೇಖಕ ಸಿದ್ದಸ್ವಾಮಿ ಪಾಲ್ಗೊಂಡಿದ್ದರು. ಆವರಣದಲ್ಲೇ ಊಟದ ವ್ಯವಸ್ಥೆ ಮಾಡಲಾಗಿತ್ತು.

[object Object]
ಮೈಸೂರಿನ ಪುರಭವನದ ಆವರಣದಲ್ಲಿ ಮಹಿಷ ದಸರಾ ಆಚರಣೆ ಸಮಿತಿಯಿಂದ ಶುಕ್ರವಾರ ನಡೆದ ಮಹಿಷ ದಸರಾ– ದಮ್ಮ ದೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಮಹಿಷಾಸುರನ ಫೋಟೊ ಪ್ರದರ್ಶಿಸಿದರು/ ಪ್ರಜಾವಾಣಿ ಚಿತ್ರ

ಎರಡು ನಿರ್ಣಯಗಳು

ಪ್ರತಿ ವರ್ಷ ಅ.14ರಂದು ನಮ್ಮ ಪೂರ್ವಿಕರನ್ನು ನೆನೆಯುತ್ತಾ ದಮ್ಮ ದೀಕ್ಷೆ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಲಾಯಿತು. ರಾಜ್ಯ ಸರ್ಕಾರವು ಬೌದ್ಧ ಅಭಿವೃದ್ಧಿ ಪ್ರಾಧಿಕಾರವನ್ನು ತ್ವರಿತವಾಗಿ ರಚಿಸಬೇಕು ಎಂದು ಆಗ್ರಹಿಸಲಾಯಿತು. ಇದಕ್ಕೆ ನೆರೆದಿದ್ದವರು ಕೈಮೇಲೆತ್ತಿ ಸಹಮತ ವ್ಯಕ್ತಪಡಿಸಿದರು.

ಕೊಲೆಯಾದವರನ್ನು ನಾವು ಸ್ಮರಿಸಬೇಡವೇ?

‘ಕೊಂದವರನ್ನು ನೀವು ಮೆರೆಸಿ ವಿಜೃಂಭಿಸುತ್ತೀರೆಂದರೆ ಕೊಲೆಯಾದ ನಮ್ಮ ಚಕ್ರವರ್ತಿಯನ್ನು ನಾವು ಸ್ಮರಿಸಬೇಡವೇ? ಮನುವಾದಿಗಳ ಹಬ್ಬಗಳು ಹಾಗೂ ಅವರ ದೇವರುಗಳು ನಮಗೆ ಬೇಕಿಲ್ಲ. ನಮಗೆ ಬೇಕಿರುವುದು ಸಂವಿಧಾನ ಮಾತ್ರ’ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ‘ಅಂಬೇಡ್ಕರ್‌ ಅವರ ಮೂಲಕ ನಾವು ಪೆನ್ನಿನ ಭಾರತವನ್ನು ಕಟ್ಟಿದ್ದೇವೆಯೇ ಹೊರತು ಗನ್ನಿನ ಭಾರತವನ್ನಲ್ಲ. ಕೊಲೆಗಾರನನ್ನು ಮನುಷ್ಯನನ್ನಾಗಿ ಮಾಡಿದ ಬೌದ್ಧ ಧರ್ಮ ನಮ್ಮದು. ನಾವು ಬೆಂಕಿ ಹಚ್ಚುವವರಲ್ಲ; ನಂದಿಸುವವರು’ ಎಂದರು. ‘ಬಹುಜನರಾದ ನಮ್ಮ ಶಕ್ತಿ ಪ್ರದರ್ಶನಕ್ಕೆ ಸಹಕಾರ ನೀಡಿದವರಿಗೆ ಧನ್ಯವಾದಗಳನ್ನು ಹೇಳುತ್ತೇವೆ’ ಎಂದಾಗ ಕಾರ್ಯಕ್ರಮದಲ್ಲಿ ಚಪ್ಪಾಳೆಗಳ ಸುರಿಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT