ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ವಿಜ್ಞಾನ ಸಂಶೋಧಕರಿಗೆ ಹಲವು ಅವಕಾಶ’

ರೇಷ್ಮೆ ವಿಜ್ಞಾನ ದಿನಾಚರಣೆಯಲ್ಲಿ ವಿಜ್ಞಾನಿ ಡಾ.ಎನ್‌.ಬಿ.ರಾಮಚಂದ್ರ ಹೇಳಿಕೆ
Last Updated 23 ಫೆಬ್ರುವರಿ 2023, 4:44 IST
ಅಕ್ಷರ ಗಾತ್ರ

ಮೈಸೂರು: ‘ವಿಜ್ಞಾನ ಸಂಶೋಧಕರಿಗೆ ಐಐಎಸ್‌ಸಿ, ಐಐಎಸ್‌ಇಆರ್‌ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಸಂಶೋಧನೆ ಕೈಗೊಳ್ಳುವ ವಿಫುಲ ಅವಕಾಶಗಳಿದ್ದು, ಸಂಶೋಧನಾ ಮಾರ್ಗವನ್ನು ಕಂಡುಕೊಳ್ಳಬೇಕು’ ಎಂದು ವಿಜ್ಞಾನಿ ಡಾ.ಎನ್‌.ಬಿ.ರಾಮಚಂದ್ರ ಹೇಳಿದರು.

ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ ವತಿಯಿಂದ ‘ರೇಷ್ಮೆ ವಿಜ್ಞಾನ ದಿನ’ದ ಪ್ರಯುಕ್ತ ಬುಧವಾರ ಆಯೋಜಿಸಿದ್ದ ರೇಷ್ಮೆ ಕೃಷಿ ಪ್ರದರ್ಶನ ಹಾಗೂ ಶಾಲಾ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಸಂಶೋಧನೆಗೆ ಪ್ರೋತ್ಸಾಹವಿಲ್ಲ ಎಂದು ಆರೋಪಿಸುವುದು ಸರಿಯಲ್ಲ. ಸಂಶೋಧನಾ ಕ್ಷೇತ್ರದತ್ತ ವಿದ್ಯಾರ್ಥಿಗಳು ಬರಬೇಕು. ಹೀಗಾದಾಗ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಳೆಯಲಿದೆ’ ಎಂದು ಅಭಿಪ್ರಾಯಪಟ್ಟರು.

‘ಭಾರತೀಯ ವಿಜ್ಞಾನ ಅಕಾಡೆಮಿ ಪ್ರತಿ ವರ್ಷ 25 ವಿಜ್ಞಾನಿಗಳನ್ನು ಗುರುತಿಸಿ ಫೆಲೋಶಿಪ್‌ ನೀಡುತ್ತಿದೆ. ಅದಲ್ಲದೇ ದೇಶದೆಲ್ಲೆಡೆ ವಿವಿಧ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಹತ್ತಾರು ಸಂಶೋಧನಾ ಸಂಸ್ಥೆಗಳಿದ್ದು, ಅಲ್ಲಿ ‌ತೊಡಗಿಸಿಕೊಳ್ಳಬಹುದು’ ಎಂದರು.

‘ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನ ಸಂಸ್ಥೆಯು (ಐಐಎಸ್‌ಇಆರ್) ಪುಣೆ, ಕೊಲ್ಕತ್ತ, ಮೊಹಾಲಿ, ಭೋಪಾಲ್, ತಿರುವನಂತಪುರಂ, ತಿರುಪತಿ ಹಾಗೂ ಬೆಹ್ರಾಂಪುರದಲ್ಲಿದ್ದು, ಅಲ್ಲಿಗೆ ಆಯ್ಕೆಯಾಗುವ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಹಾಗೂ ಪ್ರೋತ್ಸಾಹಧನಗಳಿವೆ’ ಎಂದು ಮಾಹಿತಿ ನೀಡಿದರು.

‘ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು. ಸ್ವ ಆಲೋಚನಾ ಕ್ರಮವನ್ನು ಇಷ್ಟದ ವಿಷಯದಲ್ಲಿ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಭಿನ್ನ ಆಲೋಚನೆಗಳು ನಮ್ಮನ್ನು ಕಾಯುತ್ತವೆ. ವಿಷಯ ಜ್ಞಾನವು ಆತ್ಮವಿಶ್ವಾಸವನ್ನು ಕೊಡುತ್ತದೆ. ಸಾಧನೆ ಮಾಡಿದಾಗ ಪ್ರಶಸ್ತಿ ಹುಡುಕಿಕೊಂಡು ಬರುತ್ತವೆ. ಎಲ್ಲ ಸಾಧನೆಗೂ ಪರಿಶ್ರಮ ಪಡಲೇಬೇಕು’ ಎಂದು ಸಲಹೆ ನೀಡಿದರು.

‘ರೇಷ್ಮೆ ವಿಜ್ಞಾನ: ಅಸಾಧಾರಣ ಪ್ರಗತಿ’: ‘ದೇಶವು ರೇಷ್ಮೆ ತಂತ್ರಜ್ಞಾನದಲ್ಲಿ ಅಸಾಧಾರಣ ಪ್ರಗತಿ ಸಾಧಿಸಿದೆ. ರೈತರಿಗೆ ಅನುಕೂಲವಾಗುವಂತೆ ಸಂಶೋಧನೆಗಳು ನಡೆದಿವೆ’ ಎಂದು ವಿಜ್ಞಾನಿ ಡಾ.ಎನ್‌.ಬಿ.ರಾಮಚಂದ್ರ ಹೇಳಿದರು.

‘ರೇಷ್ಮೆ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸಿಗುತ್ತಿದೆ. ಟೊಮೆಟೊ ಹಾಗೂ ಇತರ ತರಕಾರಿ ಬೆಲೆಗಳು ಏರಿಳಿತವಿರಬಹುದು. ಆದರೆ, ರೇಷ್ಮೆ ಬೆಳೆಗಾರರಿಗೆ ತೀರ ನಷ್ಟವಾಗಿಲ್ಲ. ಅದಕ್ಕೆ ವಿಜ್ಞಾನಿಗಳ ಪರಿಶ್ರಮ ಕಾರಣ. ರೇಷ್ಮೆ ದಾರವನ್ನು ಶಸ್ತ್ರಚಿಕಿತ್ಸೆಯಲ್ಲೂ ಬಳಕೆ ಮಾಡಲಾಗುತ್ತಿದೆ. ಔಷಧವಾಗಿಯೂ ಬಂದಿದೆ’ ಎಂದು ಹೇಳಿದರು.

‘ದೇಶವನ್ನು ನಿಜವಾಗಿ ಕಾಯವವರು ಶ್ರೀಮಂತರಲ್ಲ. ಬಡವರು, ರೈತರು ಹಾಗೂ ಉದ್ಯೋಗಿಗಳು. ಸಂಬಳದಲ್ಲಿ, ವಸ್ತುಗಳ ಖರೀದಿಯಲ್ಲೇ ಪರೋಕ್ಷ ತೆರಿಗೆ ನೀಡುತ್ತಿದ್ದೇವೆ. ಶ್ರೀಮಂತರು, ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ತೆರಿಗೆ ವಂಚಿಸುವ ಮಾರ್ಗದಲ್ಲೇ ಇರುತ್ತಾರೆ’ ಎಂದರು.

ಗಮನ ಸೆಳೆದ ವಸ್ತುಪ್ರದರ್ಶನ, ಸ್ಪರ್ಧೆಗಳು : ವಿವಿಧ ಶಾಲೆಗಳಿಂದ ಬಂದ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಸದ್ವಿದ್ಯಾ ಶಾಲೆ ಹಾಗೂ ಜೆಎಸ್‌ಎಸ್‌ ಪಬ್ಲಿಕ್‌ ಶಾಲೆ ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳಿಗೆ ಮೊದಲ ಬಹುಮಾನ ಗೆದ್ದರೆ, ಕನ್ನಡ ಭಾಷಣ ಸ್ಪರ್ಧೆಯಲ್ಲಿ ಮರಿಮಲ್ಲಪ್ಪ ಪ್ರೌಢಶಾಲೆಯ ಸುಪ್ರಿಯಾ ಎಸ್‌.ಕೇಲ್ಕರ್‌, ಇಂಗ್ಲಿಷ್‌ ಭಾಷಣ ಸ್ಪರ್ಧೆಯಲ್ಲಿ ಸುಪ್ರಿತಾ ಜಿ.ಗೌಡ ಪ್ರಶಸ್ತಿ ಗೆದ್ದರು. ಕೊಲಾಜ್‌ ಸ್ಪರ್ಧೆಯ ಬಹುಮಾನ ಗೋಪಾಲಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳು ಪಡೆದರು.

ವಿದ್ಯಾರ್ಥಿಗಳು ರೇಷ್ಮೆ ವಸ್ತುಪ್ರದರ್ಶನದಲ್ಲಿ ನೀರು, ಮರಳಿನಲ್ಲಿ ಬೆಳೆಯುವ ಹಿಪ್ಪುನೇರಳೆ ಗಿಡ, ರೇಷ್ಮೆ ಹುಳ ಗೊಬ್ಬರ ತಯಾರಿ, ರೇಷ್ಮೆ ಉತ್ಪನ್ನಗಳು, ಔಷಧಗಳು, ಬಿಸ್ಕೆಟ್‌, ಪಾಸ್ತಾ, ಎಣ್ಣೆ ತಯಾರಿಯನ್ನು ಕುತೂಹಲದಿಂದ ವೀಕ್ಷಿಸಿದರು.

ಸಂಸ್ಥೆಯ ನಿರ್ದೇಶಕಿ ಮೇರಿ ಜೋಸೆಫ್‌ ಶೆರಿ, ಕಲಾವಿದ ಶಿವಕುಮಾರ್, ವಿಜ್ಞಾನಿಗಳಾದ ಡಾ.ರವೀಂದ್ರ, ಡಾ.ರಂಜಿನಿ, ಎಸ್‌.ಎಂ.ಹುಕ್ಕೇರಿ, ಡಾ.ಗಾಯತ್ರಿ, ಅರುಣ್‌ ಕುಮಾರ್, ಚಂದ್ರಶೇಖರ್, ರಘುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT