ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಲ್ಮನೆ ಪ್ರವೇಶ: ಸಿಎಂ ಮಗನಿಗೆ ‘ಅಸ್ತು’

ಯತೀಂದ್ರಗೆ ಟಿಕೆಟ್‌, ಅವಕಾಶ ಬಯಸಿದ್ದ ವಿಜಯ್‌ಕುಮಾರ್‌ ಸೇರಿ ಹಲವರಿಗೆ ನಿರಾಸೆ
Published 3 ಜೂನ್ 2024, 6:47 IST
Last Updated 3 ಜೂನ್ 2024, 6:47 IST
ಅಕ್ಷರ ಗಾತ್ರ

ಮೈಸೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ 12 ಸದಸ್ಯರ ಆಯ್ಕೆಗೆ ಜೂನ್‌ 13ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಪಡೆದುಕೊಳ್ಳುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಅವರು ಮೇಲ್ಮನೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಇನ್ನೊಂದೆಡೆ, ಅವಕಾಶ ಬಯಸಿದ್ದ ಜಿಲ್ಲೆಯ ಹಲವರಿಗೆ ನಿರಾಸೆಯಾಗಿದೆ.

ಕೆಲವು ನಾಯಕರು ಪೈಪೋಟಿ ನಡೆಸಿದ್ದರು. ಹೈಕಮಾಂಡ್ ಗಮನಕ್ಕೆ ತರುವ ಜೊತೆಗೆ ಸಂಘಟನೆಗಳ ಮನವಿ, ಸಮಾಜದವರ ಒತ್ತಾಯ ಮೊದಲಾದ ರೂಪದಲ್ಲಿ ಒತ್ತಡ ಹೇರುವ ಕೆಲಸವನ್ನು ಮಾಡಿದ್ದರು. ಆದರೆ, ನಿರೀಕ್ಷೆಯಂತೆಯೇ ಯತೀಂದ್ರ ಅವರನ್ನು ಬಿಟ್ಟರೆ ಜಿಲ್ಲೆಯ ಬೇರಾರಿಗೂ ಅವಕಾಶ ಸಿಕ್ಕಿಲ್ಲ.

ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದ ಮಗನಿಗೆ, ನಿರೀಕ್ಷೆಯಂತೆಯೇ ‘ಅಧಿಕಾರ’ ದೊರೆಯುವಂತೆ ನೋಡಿಕೊಳ್ಳುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಯತೀಂದ್ರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. 2018ರಲ್ಲಿ ನಡೆದ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಅವರು 2023ರ ಚುನಾವಣೆಯಲ್ಲಿ ತಂದೆ ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದರು. ಅವರನ್ನು ಬಳಿಕ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ‘ನಿಮ್ಮನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲಾಗುವುದು’ ಎಂದು ಅವರಿಗೆ ಪಕ್ಷದ ವರಿಷ್ಠರು ವಿಧಾನಸಭೆ ಚುನಾವಣೆ ಪೂರ್ವದಲ್ಲೇ ಭರವಸೆ ನೀಡಿದ್ದರು ಎನ್ನಲಾಗಿದೆ. ಇದಕ್ಕೆ ಪಕ್ಷದಲ್ಲಿ ವಿರೋಧವೂ ಇರಲಿಲ್ಲ. ಜತೆಗೆ ಅವರಿಗೆ ಸ್ಥಾನ ಕೊಡಬೇಕು ಎಂದು ಬಹಳಷ್ಟು ಮಂದಿ ದನಿಗೂಡಿಸಿದ್ದರು. ಹೀಗಾಗಿ, ಅವರ ಹಾದಿ ಸುಗಮವಾಯಿತು ಎಂದು ಹೇಳಲಾಗುತ್ತಿದೆ.

ಟಿಕೆಟ್‌ ಸಿಕ್ಕಿರಲಿಲ್ಲ: ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಸತತ ಮೂರು ಅವಧಿಯಿಂದ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದಾರೆ. ಹೋದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಆಗಿದ್ದರು. ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ಬಯಸಿದ್ದರು. ಅವರ ಹೆಸರು ಶಿಫಾರಸು ಕೂಡ ಆಗಿತ್ತು. ಆದರೆ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರಿಗೆ ಟಿಕೆಟ್‌ ದೊರೆತಿದ್ದರಿಂದ, ವಿಜಯ್‌ಕುಮಾರ್‌ ಅವರಿಗೆ ಅವಕಾಶ ಆಗಲಿಲ್ಲ. ಬಳಿಕವೂ ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯ ನಡೆಸಿದ್ದರು. ‘ವಿಧಾನ ಪರಿಷತ್‌ಗೆ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ವರಿಷ್ಠರು ಅವರಿಗೆ ಭರವಸೆ ನೀಡಿದ್ದರು ಎನ್ನಲಾಗಿದೆ. ಒಕ್ಕಲಿಗ ಕೋಟಾದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ದ ಅವರಿಗೆ ಟಿಕೆಟ್‌ ಸಿಗದಿದ್ದರಿಂದ ನಿರಾಸೆಯಾಗಿದೆ.

ಅವರನ್ನು ಮೇಲ್ಮನೆಗೆ ಆಯ್ಕೆ ಮಾಡುವಂತೆ ಆಗ್ರಹಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಪ್ರಗತಿಪರರ ಸಂಘಟನೆ ಹಾಗೂ ವಿವಿಧ ಸಮುದಾಯಗಳ ಮುಖಂಡರು, ಸಾಹಿತಿಗಳು ದುಂಡು ಮೇಜಿನ ಸಭೆ ನಡೆಸಿ ಹಕ್ಕೊತ್ತಾಯ ಮಂಡಿಸಿದ್ದರು. ಪಿರಿಯಾಪಟ್ಟಣದಲ್ಲಿ ಒಕ್ಕಲಿಗ ಸಮಾಜದವರು ಸಭೆ ನಡೆಸಿ ಒತ್ತಡ ಹೇರಿದ್ದರು.

ಬಿಜೆಪಿಯಿಂದ ವಿಭಾಗ ಪ್ರಭಾರಿ ಮೈ.ವಿ. ರವಿಶಂಕರ್‌ ಅವರನ್ನು ಆಯ್ಕೆ ಮಾಡಬೇಕು ಎಂದು ಆ ಪಕ್ಷದವರು ಒತ್ತಾಯಿಸಿದ್ದರು. ಮಾಜಿ ಮೇಯರ್‌, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸಂದೇಶ್‌ ಸ್ವಾಮಿ ಕೂಡ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷದ ಹೈಕಮಾಂಡ್‌ನಿಂದ ಮನ್ನಣೆ ದೊರೆತಿಲ್ಲ.

ಯತೀಂದ್ರ ಆಯ್ಕೆಯಾಗುವುದು ಬಹುತೇಕ ಖಚಿತ ಜಿಲ್ಲೆಯ ಬೇರಾರಿಗೂ ಅವಕಾಶವಿಲ್ಲ ಒಕ್ಕಲಿಗ ಕೋಟಾದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿ.ಜೆ. ವಿಜಯ್‌ಕುಮಾರ್‌

ಯಾರ‍್ಯಾರು ಆಕಾಂಕ್ಷಿಗಳಾಗಿದ್ದರು?

‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆಯೂ ಆಗಿರುವ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ದಲಿತ ಹಾಗೂ ಮಹಿಳಾ ಕೋಟಾದಲ್ಲಿ ಸ್ಥಾನದ ಬೇಡಿಕೆ ಇಟ್ಟಿದ್ದರು. ಮತ್ತೊಬ್ಬ ಉಪಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಅಧ್ಯಕ್ಷ ಆರ್.ಮೂರ್ತಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾಜಿ ಮೇಯರ್ ನಾರಾಯಣ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ. ಸೀತಾರಾಂ ಹಾಗೂ ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್‌ ವಿವಿಧ ‘ಕೋಟಾ’ದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ವರಿಷ್ಠರಿಗೆ ಮನವಿಯನ್ನೂ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT