ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ನಿರ್ಲಕ್ಷ್ಯ ವಹಿಸಿದರೆ ಡಿಸಿ, ಎಸ್ಪಿಗಳೇ ಹೊಣೆ: ಮಹದೇವಪ್ಪ ಎಚ್ಚರಿಕೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ
Published 24 ನವೆಂಬರ್ 2023, 13:01 IST
Last Updated 24 ನವೆಂಬರ್ 2023, 13:01 IST
ಅಕ್ಷರ ಗಾತ್ರ

ಮೈಸೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಇದರಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಎಚ್ಚರಿಕೆ ನೀಡಿದರು.

ಇಲ್ಲಿನ ಕೆಎಸ್‌ಒಯು ಆಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ನಿಗಮ, ಮಂಡಳಿ, ಆಯೋಗಗಳಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಮೈಸೂರು ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಯಾರ ಮೇಲೋ ಪ್ರಕರಣ ದಾಖಲಿಸಬೇಕು, ಅವರನ್ನು ಜೈಲಿಗೆ ಕಳುಹಿಸಬೇಕು ಎಂಬುದು ಕಾಯ್ದೆಯ ಉದ್ದೇಶವಲ್ಲ. ಮಾನವ ಹಕ್ಕು ರಕ್ಷಣೆಗಾಗಿ ಇರುವುದು ಎಂಬುದನ್ನು ಅರಿಯಬೇಕು. ಜಾತಿ ನಿಂದನೆ, ದೌರ್ಜನ್ಯ ನಡೆಯದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಮಾಜದಲ್ಲಿ ಮನಪರಿವರ್ತನೆಗೆ ಆದ್ಯತೆ ಕೊಡಬೇಕು. ಅಂತೆಯೇ, ಜಾತಿನಿಂದನೆ ಪ್ರಕರಣಗಳಾದಾಗ ವಿಳಂಬ ಮಾಡಬಾರದು’ ಎಂದು ಸೂಚಿಸಿದರು.

ಅಮಾನತು ಮಾಡಿದರೆ ಎಚ್ಚೆತ್ತುಕೊಳ್ಳುತ್ತಾರೆ: ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಮಾತನಾಡಿ, ‘ಜಾತಿನಿಂದನೆ ಪ್ರಕರಣದಲ್ಲಿ ಎಫ್‌ಐಆರ್ ಮಾಡುವಲ್ಲಿ, ತನಿಖೆ ನಡೆಸುವಲ್ಲಿ ವಿಳಂಬ ಸೇರಿದಂತೆ ಯಾವುದೇ ರೀತಿಯ ನಿರ್ಲಕ್ಷ್ಯ ‌ಕಂಡುಬಂದಲ್ಲಿ ಎಸ್ಪಿಗಳು ಸಂಬಂಧಿಸಿದ ಐಒಗಳ (ತನಿಖಾಧಿಕಾರಿ) ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರಗತಿ ಆಗುವುದಿಲ್ಲ. ಕ್ರಮ ವಹಿಸದಿದ್ದರೆ ಅವರು ಎಚ್ಚೆತ್ತುಕೊಳ್ಳುವುದಿಲ್ಲ. ಕಾನೂನಿನ ಭಯವೇ ಇಲ್ಲವಾಗಿದೆ’ ಎಂದು ಹೇಳಿದರು.

‘ಎಸ್ಪಿಗಳು ಸಂಬಂಧಿಸಿದವರನ್ನು ಅಮಾನತು ಮಾಡಿದರೆ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ. ಆ ಸಂದೇಶ ಇಡೀ ರಾಜ್ಯಕ್ಕೆ ಹೋಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿ, ಎಸ್ಪಿಗಳು ದಲಿತ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರನ್ನು ಆಹ್ವಾನಿಸಿ ಕುಂದುಕೊರತೆ ಹಾಗೂ  ವಿಚಕ್ಷಣಾ ಸಮಿತಿ ಸಭೆಗಳನ್ನು ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಬೇಕು. ಎಸಿಗಳು ಉಪ ವಿಭಾಗದಲ್ಲಿ ನಡೆಸಬೇಕು. ಇದರಲ್ಲಿ ಲೋಪವಾಗಬಾರದು’ ಎಂದು ಸಚಿವರು ಸೂಚಿಸಿದರು.

ಅಂತರ್ಜಾತಿ ವಿವಾಹ ಪ್ರೋತ್ಸಾಹಿಸಿ: ‘ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಬೇಕು. ಚಾಮರಾಜನಗರ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರದ ಪ್ರಕರಣಗಳು ಕಂಡುಬರುತ್ತಿವೆ. ಅವು ನಡೆಯದಂತೆ ನೋಡಿಕೊಳ್ಳಬೇಕು. ಅಂತರ್ಜಾತಿ ವಿವಾಹವಾದವರನ್ನು ರಕ್ಷಿಸಬೇಕು. ಪ್ರೋತ್ಸಾಹ ಧನವನ್ನು ಸಕಾಲಕ್ಕೆ ಬಿಡುಗಡೆ ಮಾಡಬೇಕು. ದಲಿತರ ಹತ್ಯೆ ಪ್ರಕರಣದಲ್ಲಿ ಕುಟುಂಬದವರಿಗೆ ಪರಿಹಾರವನ್ನು ತ್ವರಿತವಾಗಿ ಕೊಡಿಸಬೇಕು. ಅವರಿಗೆ ಆರ್ಥಿಕವಾಗಿ ಬೆಂಬಲವಾಗಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು’ ಎಂದು ಸಚಿವರು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್‌ ಕುಮಾರ್‌ ಕೆ., ಎಸ್‌ಸಿಎಸ್‌ಪಿ–ಟಿಎಸ್‌ಪಿ ನೋಡಲ್ ಏಜೆನ್ಸಿ ಸಲಹೆಗಾರ ಇ.ವೆಂಕಟಯ್ಯ, ಡಾ.ಬಿ.ಆರ್. ಅಂಬೇಡ್ಕರ್‌ ಸಂಶೋಧನಾ ಸಂಸ್ಥೆ ನಿರ್ದೇಶಕಿ ಭಾಗ್ಯಲಕ್ಷ್ಮಿ, ಸಲಹೆಗಾರ ಬಸವರಾಜು ದೇವನೂರು, ಕೆಆರ್‌ಐಇಎಸ್‌ ಸಲಹೆಗಾರ ಎಸ್.ತುಕಾರಾಂ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಸೀಮಾ ಲಾಟ್ಕರ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ ಇದ್ದರು. ವಿಭಾಗದ ಜಿಲ್ಲಾಧಿಕಾರಿಗಳು, ಎಸ್ಪಿಗಳು ಆನ್‌ಲೈನ್‌ನಲ್ಲಿ ಪಾಲ್ಗೊಂಡರು.

ಹಾಸ್ಟೆಲ್‌ಗಳಲ್ಲಿನ ಮಕ್ಕಳಿಗೆ ಇಂಗ್ಲಿಷ್ ಗಣಿತ ಹಾಗೂ ವಿಜ್ಞಾನದ ಜ್ಞಾನವನ್ನು ಹೆಚ್ಚಾಗಿ ಕೊಡಬೇಕು.
ಡಾ.ಎಚ್‌.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

‘ನೀತಿ ರೂಪಿಸುವ ಜಾಗಕ್ಕೆ ಬರಬೇಕು’

‘ನಾವು ನೀತಿ‌ ರೂಪಿಸುವ ಜಾಗದಲ್ಲಿ ಕೂರಬೇಕು. ಅದಕ್ಕಾಗಿಯೇ ಅಂಬೇಡ್ಕರ್ ಮೀಸಲಾತಿಯನ್ನು ನೀಡಿದ್ದಾರೆ. ಕಾರ್ಯಾಂಗದಲ್ಲಿ ಇರುವವರು ಬುದ್ಧ ಬಸವ ಅಂಬೇಡ್ಕರ್ ಅರ್ಥವಾಗದಿದ್ದರೆ ಹಾಗೂ ಸಂವಿಧಾನವನ್ನು ತಿಳಿದುಕೊಳ್ಳದಿದ್ದರೆ ಏನೂ ಪ್ರಯೋಜನ ಆಗುವುದಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವವರು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಸಚಿವ ಮಹದೇವಪ್ಪ ಪಾಠ ಮಾಡಿದರು.

‘ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಹೆಚ್ಚಿದ್ದು ಇಲಾಖೆಯ ಹಾಸ್ಟೆಲ್‌ಗಳ ಮಕ್ಕಳಿಗೆ ಇಂಗ್ಲಿಷ್ ಅನ್ನು ಸಂವಹನ ಭಾಷೆಯಾಗಿ ಕಲ್ಪಿಸಬೇಕು. ಯೂಟ್ಯೂಬ್ ಮೇಲೆ ಅವಲಂಬನೆ ಮಾಡಿಸಬೇಡಿ. ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದುವಂತೆ ಮಾಡಬೇಕು. ಸಾಮಾಜಿಕ ಮಾಧ್ಯಮ ಯೂಟ್ಯೂಬ್ ಹಾಗೂ ಎಐ (ಕೃತಕ ಬುದ್ಧಿಮತ್ತೆ) ಒಂದಲ್ಲಾ ಒಂದು ದಿನ ಇಡೀ ಸಮಾಜವನ್ನು ಹಾಳು ಮಾಡುತ್ತದೆ. ಸದ್ಯಕ್ಕೆ ಅದರಿಂದ ಅನುಕೂಲ ಆಗುತ್ತಿರಬಹುದಷ್ಟೆ. ಆದ್ದರಿಂದ ಅವುಗಳ ಮೇಲೆ ಅವಲಂಬನೆ ಸಲ್ಲದು’ ಎಂದು ತಿಳಿಸಿದರು.

‘ಪ್ರತಿ ವರ್ಷ ಹಾಸ್ಟೆಲ್‌ ಡೇ’

‘ಪ್ರತಿ ವರ್ಷ ಎಲ್ಲ ಕಡೆಯೂ ಒಂದೇ ದಿನ ಹಾಸ್ಟೆಲ್ ಡೇ ಆಚರಿಸಬೇಕು. ಇದಕ್ಕಾಗಿ ದಿನಾಂಕ ನಿಗದಿಪಡಿಸಲಾಗುವುದು. ಪ್ರತ್ಯೇಕವಾಗಿ ಅನುದಾನವನ್ನೂ ನೀಡಲಾಗುವುದು’ ಎಂದು ‍ಪಿ. ಮಣಿವಣ್ಣನ್ ತಿಳಿಸಿದರು.

‘ಇಲಾಖೆಯಿಂದ ನೀಡಿದ ಮೆನು ಪ್ರಕಾರ ಆಹಾರ ಕೊಡಬೇಕು. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಮಕ್ಕಳಿಗೆ ನೈತಿಕತೆಯನ್ನು ಕಲಿಸಬೇಕು. ಮಕ್ಕಳ ಆರೋಗ್ಯದಲ್ಲಿ ಹೆಚ್ಚು–ಕಡಿಮೆಯಾದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಸಚಿವ ಮಹದೇವಪ್ಪ ಎಚ್ಚರಿಕೆ ನೀಡಿದರು.

‘ನಮ್ಮ ಹಾಸ್ಟೆಲ್‌ಗಳಲ್ಲಿ ಓದಿದವರು ಏನಾದರು ಈಗ ಎಲ್ಲಿದ್ದಾರೆ ಎಂಬುದನ್ನು ತಂತ್ರಾಂಶದಲ್ಲಿ ಅಳವಡಿಸವೇಕು. ಹಳೆಯ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT