ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ’

ನೀರೆತ್ತುವ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಟಿ.ಎಸ್.ಶ್ರೀವತ್ಸ ಸೂಚನೆ
Published 30 ಮೇ 2023, 13:57 IST
Last Updated 30 ಮೇ 2023, 13:57 IST
ಅಕ್ಷರ ಗಾತ್ರ

ಮೈಸೂರು: ಕ್ಷೇತ್ರದ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಹುಲ್ಲಹಳ್ಳಿ ರಸ್ತೆಯಲ್ಲಿರುವ ಬಿದರಗೂಡಿನಲ್ಲಿ ಕಪಿಲಾ ನದಿಯಿಂದ ನೀರೆತ್ತುವ ಘಟಕಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ನೀರೆತ್ತುವ ಘಟಕ, ಪಂಪಿಂಗ್ ಸ್ಟೇಷನ್, ವಿತರಣಾ ಜಾಲದ ಘಟಕಕ್ಕೆ ಭೇಟಿ ನೀಡಿ ನಗರಕ್ಕೆ ಪೂರೈಕೆಯಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

‘ಕಬಿನಿ ಜಲಾಶಯದಿಂದ ಪ್ರಸ್ತುತ 6 ಕೋಟಿ ಲೀಟರ್‌ ನೀರು ಪಂಪ್ ಮಾಡುತ್ತಿದ್ದು, ವಿತರಣೆಯಲ್ಲಿ ಸ್ವಲ್ಪ ತೊಂದರೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಕಪಿಲಾ ನದಿಯಿಂದ 12 ಕೋಟಿ ಲೀಟರ್‌ ನೀರು ಸರಬರಾಜು ಮಾಡಬೇಕಿದೆ. ಶೀಘ್ರದಲ್ಲೇ ಪೈಪ್‌ಲೈನ್ ಕಾಮಗಾರಿ ಮುಗಿದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಸಾಧ್ಯವಾದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಶಾಸಕರು ಸೂಚಿಸಿದರು.

‘ಕ್ಷೇತ್ರದ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಕಬಿನಿ ಮತ್ತು ಕೆಆರ್‌ಎಸ್‌ನಿಂದ ಯಾವ್ಯಾವ ಬಡಾವಣೆಗಳಿಗೆ ನೀರು ಪೂರೈಕೆಯಾಗುತ್ತಿದೆ, ಸಮಸ್ಯೆಗೆ ಕಾರಣವೇನು ಎಂಬುದರ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಮೇಯರ್ ಶಿವಕುಮಾರ್, ಉಪ ಮೇಯರ್‌ ಡಾ.ರೂಪಾ ಯೋಗೇಶ್, ನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಎಸ್.ಮಹೇಶ್, ವಾಣಿವಿಲಾಸ ಕುಡಿಯುವ ನೀರು ಸರಬರಾಜು ಕೇಂದ್ರದ  ಕಾರ್ಯಪಾಲಕ ಎಂಜಿನಿಯರ್‌ ಸುವರ್ಣ ಇದ್ದರು.

ಶಾಲೆಗಳಿಗೆ ಭೇಟಿ

‘ಮಕ್ಕಳ ಹಾಜರಾತಿಯನ್ನು ಹೆಚ್ಚಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಪೋಷಕರ ಮನವೊಲಿಸಿ ಮರಳಿ ಕರೆತರಬೇಕು’ ಎಂದು ಶಾಸಕರು ಸೂಚಿಸಿದರು.

ಕನಕಗಿರಿ ಪ್ರೌಢಶಾಲೆಗೆ ಭೇಟಿ ನೀಡಿ ತರಗತಿಗಳ ಪುನರಾರಂಭದ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

‘ಕ್ಷೇತ್ರದ ವ್ಯಾಪ್ತಿಗೆ ಬರುವ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ–ಕಾಲೇಜುಗಳಲ್ಲಿ ಹಾಜರಾತಿ ಪ್ರಮಾಣ ಜಾಸ್ತಿ ಮಾಡಬೇಕು. ಕನಕಗಿರಿ, ವಿದ್ಯಾರಣ್ಯಪುರಂ, ಅಶೋಕಪುರಂ, ನಾಚನಹಳ್ಳಿಪಾಳ್ಯ ಮೊದಲಾದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಜಾಸ್ತಿ ಇರಬೇಕು. ಮುಖ್ಯೋಪಾಧ್ಯಾಯರು ಮನೆಗೆ ತೆರಳಿ ಮಕ್ಕಳನ್ನು ಕರೆತರಬೇಕು’ ಎಂದರು.

‘ಕನಕಗಿರಿಯಲ್ಲಿ ನಿರ್ಮಿಸಿರುವ ಹೊಸ ಕಟ್ಟಡಗಳನ್ನು ಶೀಘ್ರದಲ್ಲೇ ಉದ್ಘಾಟಿಸುವ ಜೊತೆಗೆ ಬೇಕಾದ ಪರಿಕರಗಳನ್ನು ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT