ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಉಳಿವಿಗೆ ಮೋದಿ ಬೆಂಬಲ: ಜಿ.ಟಿ.ದೇವೇಗೌಡ

ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆ
Published 11 ಏಪ್ರಿಲ್ 2024, 15:43 IST
Last Updated 11 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ‘ರಾಜಕೀಯವಾಗಿ ಎಚ್.ಡಿ.ಕೋಟೆ ತಾಲ್ಲೂಕು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರಿಗೆ ಶಕ್ತಿ ಕೊಟ್ಟ ತಾಲ್ಲೂಕು. ಇದನ್ನು ತಾವು ಎಂದಿಗೂ ಮರೆಯುವುದಿಲ್ಲ’ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು

ಪಟ್ಟಣದ ಕನಕ ಭವನದಲ್ಲಿ ನಡೆದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ದೇಶ ಉಳಿಯಬೇಕಾದರೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ 92 ವರ್ಷದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಜೆಪಿ ಬೆಂಬಲಿಸಿದ್ದಾರೆ. ಸಮಾನತೆ ಹಕ್ಕು ಕೊಡಬೇಕು ಎನ್ನುವ ಉದ್ದೇಶದಿಂದ ರಾಮನಾಥ್ ಕೋವಿಂದ್ ಮತ್ತು ಗಿರಿಜನ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದು, ಇದೇ ಬಿಜೆಪಿ ಪಕ್ಷ’ ಎಂದರು.

‘ದೇಶದಲ್ಲಿ ಬಿಜೆಪಿ ಗೆದ್ದರೆ, ಸಂವಿಧಾನ ಬದಲಾವಣೆ ಮಾಡುತ್ತಾರೆ ಎನ್ನುತ್ತಾರೆ. ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರು. ಇದನ್ನು ಮರೆ ಮಾಚಿದ ಕಾಂಗ್ರೆಸ್ ಪಕ್ಷವು, ಬಿಜೆಪಿ ಸಂವಿಧಾನ ತಿದ್ದುಪಡಿ ಮಾಡುತ್ತದೆ ಎಂದು ಸುಖಾಸುಮ್ಮನೇ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು.

ಚುನಾವಣಾ ಉಸ್ತುವಾರಿ ಮತ್ತು ಮಾಜಿ ಶಾಸಕ ಪ್ರೀತಂಗೌಡ ಮಾತನಾಡಿ, ‘ನಮ್ಮ ಮುಂದಿರುವುದು ದೇಶದ ಚುನಾವಣೆ. ಯಾವುದೋ ಪಂಚಾಯಿತಿ ಚುನಾವಣೆಯಲ್ಲ. ಹತ್ತು ಕೆಜಿ ಅಕ್ಕಿ ಕೊಡುತ್ತೆನೆ ಎಂದು ಹೇಳಿದ ಕಾಂಗ್ರೆಸ್, ಕೇಂದ್ರ ಸರ್ಕಾರ ಐದು ಕೆ.ಜಿ ಅಕ್ಕಿಯನ್ನು ತಾವು ಕೊಡುತ್ತಿರುವುದಾಗಿ ಬಿಂಬಿಸುತ್ತಿದೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಗೆಲ್ಲುವ ವಾತಾವರಣ ಸೃಷ್ಠಿಯಾಗಿದೆ’ ಎಂದರು.

ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು  ಜೆಡಿಎಸ್ ಅಭ್ಯರ್ಥಿಗಳು 97 ಸಾವಿರ ಮತ ಪಡೆದಿದ್ದಾರೆ. ಈ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಿಗೆ ಸೇರಿರುವುದರಿಂದ 1 ಲಕ್ಷಕ್ಕೂ ಹೆಚ್ಚು ಮತಗಳಿಸುವ ಅವಕಾಶ ಇದೆ. ಕಾರ್ಯಕರ್ತರು, ಯಾವುದೇ ಬೇರೆ ರೀತಿಯಲ್ಲಿ ಆಲೋಚನೆ ಮಾಡದೇ, ಲೋಕಸಭಾ ಬಿಜೆಪಿ ಅಭ್ಯರ್ಥಿ ಬಾಲರಾಜು ಅವರಿಗೆ ಮತ ಹಾಕಬೇಕು’ ಎಂದರು.

‌‌‌ಬಿಜೆಪಿ ಮುಖಂಡ ಎಚ್.ಡಿ.ಕೋಟೆ ಬ್ಲಾಕ್ ಅಧ್ಯಕ್ಷ ಶಂಭೂಗೌಡ, ಗುರುಸ್ವಾಮಿ, ಜೆಡಿಎಸ್ ಪಕ್ಷದ ಎಚ್.ಡಿ.ಕೋಟೆ ಬ್ಲಾಕ್ ರಾಜೇಂದ್ರ, ಗೋಪಾಲಸ್ವಾಮಿ, ಬಿಜೆಪಿ ಎಸ್‌ಟಿ ಮೊರ್ಚಾ ರಾಜ್ಯ ಕಾರ್ಯದರ್ಶಿ ಕೆ.ಎಂ.ಕೃಷ್ಣನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ಮೊತ್ತ ಬಸವರಾಜಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT