ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೇಶಪೂರ್ವಕವಾಗಿಯೇ ಟಿಪ್ಪು ಸುಲ್ತಾನ್ ಹೆಸರು ತೆಗೆಸುತ್ತಿದ್ದೇನೆ: ಪ್ರತಾಪ ಸಿಂಹ

Last Updated 12 ಅಕ್ಟೋಬರ್ 2022, 7:22 IST
ಅಕ್ಷರ ಗಾತ್ರ

ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್‌ ರೈಲಿಗೆ ಒಡೆಯರ್‌ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡ ಸಂಸದ ಪ್ರತಾಪ ಸಿಂಹ, ‘ನಾನು ಉದ್ದೇಶಪೂರ್ವಕವಾಗಿಯೇ ಟಿಪ್ಪು ಸುಲ್ತಾನ್‌ ಹೆಸರನ್ನು ತೆಗೆಸುತ್ತಿದ್ದೇನೆ’ ಎಂದು ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಮಹಾರಾಜರು ಮೈಸೂರಿಗೆ ಕೊಟ್ಟಿರುವ ನೂರು ಕೊಡುಗೆಗಳನ್ನು ನಾನು ತಿಳಿಸಬಲ್ಲೆ. ಹಾಗೆಯೇ, ಟಿಪ್ಪು ಬೆಂಬಲಿಸುವವರು ಆತ ಕೊಟ್ಟ ಕೇವಲ ಮೂರು ಕೊಡುಗೆಗಳನ್ನಾದರೂ ತಿಳಿಸಲಿ ಸಾಕು. ಟಿಪ್ಪುಗೂ– ಮೈಸೂರಿಗೂ ಏನು ಸಂಬಂಧ? ಆತ ಮೈಸೂರಿನವನಾ? ಶ್ರೀರಂಗಪಟ್ಟಣದವನು’ ಎಂದರು.

‘ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿಯಲ್ಲಿ ರಾಜರ ಕೊಡುಗೆ ಇದೆ. ಒಂದು ರೈಲಿಗೆ ಇಟ್ಟಿದ್ದ ಹೆಸರನ್ನು ಬದಲಾಯಿಸಿದ ಉದಾಹರಣೆಗಳೇ ಇಲ್ಲ. ಆದರೆ, ಇದನ್ನು ಉದ್ದೇಶಪೂರ್ವಕವಾಗಿಯೇ ಪ್ರಯತ್ನ ಪಟ್ಟು ಮಾಡಿಸಿದ್ದೇನೆ. ಇದಕ್ಕೆ ಸಾರ್ವಜನಿಕ ವಲಯದಿಂದಲೂ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ನನ್ನ ಕ್ರಮವನ್ನು ವಿರೋಧಿಸುವವರು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಲಿ’ ಎಂದು ತಿಳಿಸಿದರು.

‘ಮೈಸೂರು ಮಹಾರಾಜರ ಬಗ್ಗೆ ಕೇವಲವಾಗಿ, ಉಡಾಫೆಯಿಂದ ಮಾತನಾಡುವ ಸಿದ್ದರಾಮಯ್ಯ ಅವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ. ಟಿಪ್ಪು ಹೆಸರನ್ನು ಜನರ ಮನಸ್ಸಿನಿಂದ ತೆಗೆಯಲು ಆಗುವುದಿಲ್ಲ ಎನ್ನುವವರ ಹೆಸರನ್ನೇ ಜನ ಮರೆಯುತ್ತಿದ್ದಾರೆ. ಅವರನ್ನು ಮನೆಗೆ ಕಳುಹಿಸಿದ್ದಾರೆ’ ಎಂದು ಟೀಕಿಸಿದರು.

‘ಟಿಪ್ಪು ಕನ್ನಡ ವಿರೋಧಿ. ಆತ ಪರ್ಷಿಯನ್‌ ಭಾಷೆಯನ್ನು ನಮ್ಮ ಮೇಲೆ ಹೇರಿದ್ದಾನೆ. ಕಂದಾಯ ಇಲಾಖೆಯಲ್ಲಿರುವ ಬಹಳಷ್ಟು ಪದಗಳು ಆ ಭಾಷೆಯವು. ಇವೆಲ್ಲ ಕಾರಣದಿಂದಾಗಿಯೇ ನಮ್ಮ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ನಿಲ್ಲಿಸಿತು’ ಎಂದರು.

‘ದಸರಾದಲ್ಲಿ ಅಧ್ವಾನಗಳು ನಡೆದವು’ ಎಂಬ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ, ‘ಇದು ಲಕ್ಷಾಂತರ ಜನರು ಬಂದು ಹೋದ ಕಾರ್ಯಕ್ರಮ. ಒಂದೆರೆಡು ತಪ್ಪುಗಳು ಸಹಜ. ಮೊಸರಲ್ಲಿ ಕಲ್ಲು ಹುಡುಕುವವರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ’ ಎಂದು ನುಡಿದರು.

ಕ್ರಿಕೆಟ್ ಮೈದಾನಕ್ಕೆ ಜಾಗ:‘ಮೈಸೂರಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅಗತ್ಯವಾಗಿರುವ 19 ಎಕರೆ ಜಾಗದ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಅನುಮೋದನೆ‌‌ ಕೋರಲಾಗಿದೆ. ಸಾತಗಳ್ಳಿ ಬಳಿ ಕೋರಿರುವ ಜಾಗಕ್ಕೆ ಸಂಬಂಧಿಸಿದ ಕಡತವನ್ನು ಮುಂದಿನ ಸಚಿವ ಸಂಪುಟ ಸಭೆಗೆ ಮಂಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸೂಚಿಸಿದ್ದಾರೆ. ಅನುಮೋದನೆ ಸಿಗುತ್ತಿದ್ದಂತೆಯೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಜಾಗವನ್ನು ಹಸ್ತಾಂತರಿಸಲಾಗುವುದು. ತ್ವರಿತವಾಗಿ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT