ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ: ಬೇನಾಮಿ ಹೆಸರಿಗೆ ನಿವೇಶನ ಮಂಜೂರು

ನಕಲಿ ದಾಖಲೆಗಳ ಸೃಷ್ಟಿ: ಮೈಸೂರಿನ ಈರನಗೆರೆ ಗ್ರಾಮದ ಜಮೀನಿಗೆ ಜೆ.ಪಿ.ನಗರದಲ್ಲಿ ನಿವೇಶನ
Published 9 ಜುಲೈ 2024, 23:01 IST
Last Updated 9 ಜುಲೈ 2024, 23:01 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇನಾಮಿ ವ್ಯಕ್ತಿಗೆ ನಿವೇಶನ ಮಂಜೂರು ಮಾಡಿರುವ ಮತ್ತೊಂದು ಪ್ರಕರಣ ಬಯಲಾಗಿದೆ. ನಿವೇಶನ ಮಂಜೂರಾಗಿರುವ ವ್ಯಕ್ತಿಯದೆಂದು ಮುಡಾ ಉಲ್ಲೇಖಿಸಿರುವ ವಿಳಾಸದಲ್ಲಿ ಅವರು ವಾಸವೇ ಇಲ್ಲ!

ಶೇ 50:50 ಅನುಪಾತದ ಯೋಜನೆಯಲ್ಲಿ ಜಮೀನು ಕಳೆದುಕೊಂಡವರಿಗೆ ಭೂಪರಿಹಾರದ ರೂಪದಲ್ಲಿ ನಿವೇಶನ ಕೊಡಲಾಗಿದೆ. ವ್ಯಕ್ತಿಯು ತಾಲ್ಲೂಕಿನ ಕಸಬಾ ಹೋಬಳಿಯ ಈರನಗೆರೆ ಗ್ರಾಮದಲ್ಲಿ ಜಮೀನು ಕಳೆದುಕೊಂಡಂತೆ ದಾಖಲೆಗಳನ್ನು ಸೃಷ್ಟಿಸಿ, ಜೆ.‍ಪಿ. ನಗರ 1ನೇ ಹಂತದ ‘ಇ’ ಬ್ಲಾಕ್‌ನಲ್ಲಿ ನಿವೇಶನ (ಸಂಖ್ಯೆ 551/1)ವನ್ನು ಕೊಡಲಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಈರನಗೆರೆಯಲ್ಲಿ ಪಡೆದ ಜಮೀನಿಗೆ ಮಾರುಕಟ್ಟೆ ಮೌಲ್ಯ ಜಾಸ್ತಿ ಇರುವ ಜೆ.ಪಿ. ನಗರದಲ್ಲಿ ನಿವೇಶನ ಕೊಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ದೂರು ಸಲ್ಲಿಕೆ:

ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಸ್. ಸೋಮಸುಂದರ್‌ ಅವರು, ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹಾಗೂ ಲಕ್ಷ್ಮೀಪುರಂ ಪೊಲೀಸ್‌ ಠಾಣೆಗೆ ದಾಖಲೆ ಸಹಿತ ದೂರು ನೀಡಿದ್ದಾರೆ. ‘ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ರಾಜೇಂದ್ರ ನಗರದ 2ನೇ ಕ್ರಾಸ್‌ನ ಮನೆ ನಂ.34ರ ನಿವಾಸಿ ಸೈಯದ್ ಯೂಸುಫ್‌ ಎನ್ನುವವರಿಗೆ ನಿವೇಶನ ಮಂಜೂರು ಮಾಡಲಾಗಿದೆ. ಅವರು ಈರನಗೆರೆ ಸರ್ವೇ ನಂ. 85/1ರಲ್ಲಿ 2.6 ಎಕರೆ ಜಮೀನನ್ನು ಕಳೆದುಕೊಂಡಿದ್ದು, ಪರಿಹಾರವನ್ನು ನಿವೇಶನದ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ ಎಂದು ಹಿಂದಿನ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್‌ ಉಲ್ಲೇಖಿಸಿದ್ದಾರೆ. 23,881 ಚದರ ಅಡಿಗೆ ಸಂಬಂಧಿಸಿ ಮಂಜೂರಾತಿ ಮಾಡಿ ಕ್ರಯಪತ್ರಗಳನ್ನು ವಿತರಿಸಲಾಗಿದೆ. ಒಂದು ನಿವೇಶನದ ದಾಖಲೆ ಪ್ರತಿ ಲಭ್ಯವಾಗಿದ್ದು, ಪೊಲೀಸ್ ಆಯುಕ್ತರ ಕಚೇರಿಗೆ ನೀಡಿದ್ದೇವೆ’ ಎಂದು ಸೋಮಸುಂದರ್‌ ಮಾಹಿತಿ ನೀಡಿದರು.

‘ಸೈಯದ್ ಯೂಸುಫ್‌ ಎಂಬುವವರು ಸ್ವೀಕೃತಿ ಶಾಖೆಯಲ್ಲಿ ನೋಂದಣಿಯನ್ನೇ ಮಾಡಿಕೊಂಡಿಲ್ಲ ಹಾಗೂ ಭೂಸ್ವಾಧೀನ ಶಾಖೆಯಲ್ಲಿ ವಿಷಯದ ಕಡತವನ್ನು ನಿರ್ವಹಿಸಿದಿದ್ದರೂ 2023ರ ಜೂನ್‌ 7ರಂದು ಆಯುಕ್ತರು, ಅಭಿವೃದ್ಧಿಪಡಿಸಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನವನ್ನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಮಂಜೂರಾತಿ ಪತ್ರದಲ್ಲಿ ನಮೂದಾಗಿರುವ ವಿಳಾಸದಲ್ಲಿ ಸೈಯದ್ ಯೂಸುಫ್‌ ಎಂಬ ಹೆಸರಿನ ವ್ಯಕ್ತಿ ವಾಸವಿಲ್ಲ! ನಾವು ಸ್ಥಳ ಪರಿಶೀಲಿಸಿದಾಗ ಈ ವಿಷಯ ಖಚಿತವಾಗಿದೆ. ನಿವೇಶನ ಮಂಜೂರಾತಿಗಾಗಿಯೇ ಬೇನಾಮಿ ವ್ಯಕ್ತಿಯನ್ನು ಸೃಷ್ಟಿಸಿ ಕ್ರಯಪತ್ರ ಮಾಡಿಕೊಡಲಾಗಿದೆ’ ಎಂದು ತಿಳಿಸಿದರು.

ನೌಕರನೇ ಸಾಕ್ಷಿದಾರ!

‘ಈ ಪ್ರಕರಣದಲ್ಲಿ ಮುಡಾ ನೌಕರರೊಬ್ಬರನ್ನು ಸಾಕ್ಷಿದಾರ (ಗುರುತಿಸುವವರು) ಎಂದು ನಮೂದಿಸಿ ಅಕ್ರಮ ಎಸಗಲಾಗಿದೆ. ಜಮೀನು ಸ್ವಾಧೀನಪಡಿಸಿಕೊಂಡ ಬಗ್ಗೆ ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳಿಂದ ವರದಿಯನ್ನೂ ಪಡೆದಿಲ್ಲ. ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಬಡಾವಣೆಯ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನಕಲಿ ದಾಖಲೆಗಳ ಆಧಾರದಲ್ಲೇ ಮಂಜೂರು ಮಾಡಲಾಗಿದೆ. ನಕಲಿ  ಸಹಿ ಮಾಡಲಾಗಿದೆ. ಆದ್ದರಿಂದ ಇದು ಗಂಭೀರ ಸ್ವರೂಪದ ಪ್ರಕರಣ. ಶಿಕ್ಷಾರ್ಹ ಅಪರಾಧ‌’ ಎನ್ನುತ್ತಾರೆ ಅವರು.

‘ಜಮೀನು ಭೂಸ್ವಾಧೀನಪಡಿಸಿಕೊಳ್ಳದೇ ರಸ್ತೆ ಮತ್ತು ಬಡಾವಣೆಗಾಗಿ ಉಪಯೋಗಿಸಿಕೊಂಡಿರುವುದರಿಂದ ನಿವೇಶನ ಮಂಜೂರು ಮಾಡಲಾಗಿದೆ ಎಂದು ಮಂಜೂರಾತಿ ಪತ್ರದಲ್ಲಿ ತಿಳಿಸಲಾಗಿದೆ. ಅದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹಲವು ಮಂದಿಗೆ ನಕಲಿ ದಾಖಲೆಗಳನ್ನು ಬೇನಾಮಿಯಾಗಿ ಸೃಷ್ಟಿಸಿಕೊಟ್ಟಿರುವ ಅನುಮಾನವಿದೆ. ಕಾಣದ ಕೈಗಳು ಸಾಕಷ್ಟಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಪೊಲೀಸ್ ಆಯುಕ್ತರಿಗೆ ಜುಲೈ 2ರಂದು ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

848 ನಿವೇಶನ ಹಕ್ಕು ಅಕ್ರಮ ವರ್ಗಾವಣೆ

‘ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದರೂ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಮುಡಾ ಅಕ್ರಮವಾಗಿ 848 ನಿವೇಶನಗಳ ಹಕ್ಕನ್ನು ವರ್ಗಾಯಿಸಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ತಾಂತ್ರಿಕ ಸಮಿತಿ ಹೇಳಿದೆ.

ತಾಲ್ಲೂಕಿನ ಜಯಪುರ ಹೋಬಳಿ ಕೇರ್ಗಳ್ಳಿಯ ವಿವಿಧ ಸರ್ವೆ ಸಂಖ್ಯೆಗಳ 230 ಎಕರೆ 1 ಗುಂಟೆ ಜಮೀನಿನಲ್ಲಿ ಸಹಕಾರ ಸಂಘವು ಬಡಾವಣೆ ರಚಿಸಿತ್ತು. 2ನೇ ಕಂತಿನ ಶೇ 30ರಷ್ಟು ನಿವೇಶನಗಳ ಬಿಡುಗಡೆ ಬಗ್ಗೆ ಮುಡಾ ಸಭೆಯಲ್ಲಿ ಮಂಡಿಸಲಾಗಿತ್ತು. 

2019ರಲ್ಲಿಯೇ ಕೆಲವು ಸರ್ವೆ ಸಂಖ್ಯೆಗಳ ಭೂ ವ್ಯಾಜ್ಯಗಳು ಸಿವಿಲ್‌
ನ್ಯಾಯಾಲಯದಲ್ಲಿದ್ದವು. ಬಡಾವಣೆ ನಿವೇಶನಗಳ ಹಕ್ಕು ವರ್ಗಾವಣೆ ಮಾಡದಂತೆ ಕೋರ್ಟ್‌ ನಿರ್ದೇಶನವಿದ್ದರೂ, ಉಲ್ಲಂಘಿಸಿ, ಆಯುಕ್ತರು ನಿವೇಶನಗಳ ಬಿಡುಗಡೆಗೆ ಸಹಿ ಹಾಕಿದ್ದಾರೆ.

ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿರುವ ಬಗ್ಗೆ ಸಭೆಯ ನಡಾವಳಿಯಲ್ಲಿ ಚರ್ಚಿಸಿಲ್ಲ. ರಾಜ್ಯ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ ಕಲಂ 13 (1)ರ ಅನ್ವಯ ಆಯುಕ್ತರು ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಾಂತ್ರಿಕ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.

ನಿವೇಶನ ಬಿಡುಗಡೆ ಮುನ್ನ ದಂಡ ಶುಲ್ಕ ₹3.97 ಕೋಟಿ ಅನ್ನು ಅರ್ಜಿದಾರರಿಂದ ಪಾವತಿಸಿಕೊಳ್ಳಬೇಕಿತ್ತು. ಅದನ್ನೂ ಮಾಡದ್ದರಿಂದ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವಾಗಿದೆ ಎಂದು ಸಮಿತಿಯು ಹೇಳಿದೆ.

ಸಿ.ಎಂ ಸೇರಿ ಹತ್ತು ಮಂದಿ ವಿರುದ್ಧ ದೂರು

ಮುಡಾ ಡಿನೋಟಿಫೈ ಮಾಡಿದ್ದ ಜಮೀನನ್ನು ಕೃಷಿ ಜಮೀನೆಂದು ನಕಲಿ ದಾಖಲೆ ಸೃಷ್ಟಿಸಿ, ಪರಿಹಾರವಾಗಿ 14 ಬದಲಿ ನಿವೇಶನ ಪಡೆದ ಆರೋಪದ ಮೇರೆಗೆ ಸಿ.ಎಂ. ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾಮೈದ ಮಲ್ಲಿಕಾರ್ಜುನ ಸೇರಿದಂತೆ 10 ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಕಳೆದ ಬುಧವಾರ ಇಲ್ಲಿನ ವಿಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಜಮೀನಿನ ಮೂಲ ಮಾಲೀಕರ ಪುತ್ರ ದೇವರಾಜು, ಪತ್ನಿ ಸರೋಜಮ್ಮ, ಮಕ್ಕಳಾದ ಡಿ.ಶಶಿಧರ್‌, ಡಿ.ಶೋಭಾ, ಡಿ.ದಿನಕರ್‌ ರಾಜ್‌, ಡಿ.ಪ್ರತಿಭಾ, ಡಿ.ಪ್ರಭಾ ಅವರೂ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಜಿಲ್ಲಾಧಿಕಾರಿ, ತಹಶೀಲ್ದಾರ್‌, ಮುಡಾ ಆಯುಕ್ತ ಹಾಗೂ ಉಪನೋಂದಣಾಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

‘ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464 ಜಾಗವು ಮುಡಾ ಸ್ವಾಧೀನಕ್ಕೆ ಒಳಪಟ್ಟಿರುವ ದಾಖಲೆಗಳಿದ್ದರೂ, ಬಡಾವಣೆಯಾಗಿ ಅಭಿವೃದ್ಧಿಗೊಂಡಿದ್ದರೂ 2004ರ ಆ.25ರಂದು ಲಿಂಗ ಉರುಫ್ ಜವರ ಎಂಬುವರ ಪುತ್ರ ದೇವರಾಜು ಕುಟುಂಬದವರಿಂದ ಸಿದ್ದರಾಮಯ್ಯ ಭಾಮೈದ ಬಿ.ಎಂ.ಮಲ್ಲಿಕಾರ್ಜುನ ಅವರು ಭೂಮಿ ಖರೀದಿಸಿದ್ದು, ಕ್ರಯ ಪತ್ರದಲ್ಲಿ ಕೃಷಿ ಭೂಮಿಯೆಂದು ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘2010ರಲ್ಲಿ ಮಲ್ಲಿಕಾರ್ಜುನ ಅವರು ಸೋದರಿ ಬಿ.ಎಂ.ಪಾರ್ವತಿ ಅವರಿಗೆ ದಾನವಾಗಿ ಭೂಮಿ ನೀಡಿದ್ದಾರೆ. ಸಿದ್ದರಾಮಯ್ಯ ಪ್ರಭಾವಕ್ಕೆ ಒಳಗಾಗಿ ಉಪನೋಂದಣಾಧಿಕಾರಿ ಸುಳ್ಳು ಕ್ರಯಪತ್ರ ಹಾಗೂ ದಾನಪತ್ರ ನೋಂದಣಿ ಮಾಡಿಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ. 

ತನಿಖಾ ತಂಡಕ್ಕೆ ದೂರು ಸಲ್ಲಿಕೆ: ‘ಮುಡಾ ನಿವೇಶನ ಅಕ್ರಮ ಹಂಚಿಕೆ ಬಗ್ಗೆ ಸರ್ಕಾರ ತನಿಖಾ ತಂಡ ರಚಿಸಿದ್ದು, ನೀವು ನೀಡಿದ ದೂರು ಅದೇ ವಿಚಾರದ್ದಾಗಿರುವುದರಿಂದ ತನಿಖಾ ತಂಡಕ್ಕೆ ವಿಲೇವಾರಿ ಮಾಡಲಾಗಿದೆ’ ಎಂದು ವಿಜಯನಗರ ಠಾಣಾ ಇನ್‌ಸ್ಪೆಕ್ಟರ್‌, ಕೃಷ್ಣ ಅವರಿಗೆ ಹಿಂಬರಹ ನೀಡಿದ್ದಾರೆ.

ಅದೇ ವಿಚಾರದ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಪ್ರಶ್ನಿಸಿ ರಾಜ್ಯಪಾಲ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಅಧಿಕಾರಿಗೂ ಸ್ನೇಹಮಯಿ ಕೃಷ್ಣ ದೂರು ಅರ್ಜಿ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT