ಮೈಸೂರು: ‘ಬಿಜೆಪಿ– ಜೆಡಿಎಸ್ ನಡೆಸುತ್ತಿರುವ ಹುನ್ನಾರದ ವಿರುದ್ಧದ ಧರ್ಮಯುದ್ಧದ ಭಾಗವಾಗಿ ನಗರದಲ್ಲಿ ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರವನ್ನು ರಕ್ಷಿಸಿಕೊಳ್ಳಲು ಕಾರ್ಯಕರ್ತರೆಲ್ಲರೂ ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ತಿಳಿಸಿದರು.
ಆ.9ರಂದು ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪಕ್ಷದಿಂದ ಆಯೋಜಿಸಿರುವ ಜನಾಂದೋಲನ ಸಮಾವೇಶದ ಪೂರ್ವಭಾವಿಯಾಗಿ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಕಳಂಕರಹಿತ ರಾಜಕಾರಣಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲೊಡ್ಡುವ ವ್ಯಕ್ತಿತ್ವದ ನಾಯಕರಿದ್ದರೆ ಅವರು ಸಿದ್ದರಾಮಯ್ಯ ಮಾತ್ರ. ಹೀಗಾಗಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಲೇ ಇದೆ. ಯಾವುದೇ ಕಳಂಕವಿಲ್ಲದಿದ್ದರೂ, ಸುಳ್ಳುಗಳನ್ನೇ ಹೇಳುತ್ತಾ ಪಾದಯಾತ್ರೆ ಮಾಡುವ ಕೆಲಸದಲ್ಲಿ ಬಿಜೆಪಿ–ಜೆಡಿಎಸ್‌ನವರು ತೊಡಗಿದ್ದಾರೆ. ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನಾವು ಕೊಡಲೇಬೇಕಾಗಿದೆ’ ಎಂದರು.
ಎಚ್‌ಡಿಕೆ ಅವಕಾಶವಾದಿ: ‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವಕಾಶವಾದಿ ಹಾಗೂ ವಚನ ಭ್ರಷ್ಟರಾಗಿದ್ದಾರೆ. ಚುನಾವಣೆ ಪೂರ್ವದಲ್ಲಿ ಕಾವೇರಿ ಹಾಗೂ ಮೇಕೆದಾಟು ಯೋಜನೆ ಬಗ್ಗೆ ದೊಡ್ಡದಾಗಿ ಮಾತನಾಡಿದ್ದರು. ಅಧಿಕಾರಕ್ಕೆ ಬಂದ ಮೇಲೆ ಅದನ್ನು ಮರೆತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಬಳಿ ಹೋಗಿ ಮಾತನಾಡಿ ಎಂದು ನಮಗೆ ಹೇಳುವ ಮೂಲಕ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ಭ್ರಷ್ಟಾಚಾರಿಗಳೇ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡುತ್ತಿರುವುದಕ್ಕೆ ಏನೆಂದು ಹೇಳಬೇಕು?’ ಎಂದು ಟೀಕಿಸಿದರು.
‘ಸಿದ್ದರಾಮಯ್ಯ ಅವರ ಮೇಲೆ ಕಳಂಕ ತರುವ ಹುನ್ನಾರದಿಂದ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರು, ಸಣ್ಣ–ಪುಟ್ಟ ಭಿನ್ನಾಭಿಪ್ರಾಯಗಳೇನೇ ಇದ್ದರೂ ಅವುಗಳನ್ನೆಲ್ಲಾ ಬಿಟ್ಟು ಸಮಾವೇಶಕ್ಕೆ ಬರಬೇಕು. ಜತೆಗೆ ಜನರನ್ನೂ ಕರೆತರಬೇಕು. ಏಕೆಂದರೆ ಇದು ಕಾಂಗ್ರೆಸ್ ಪಕ್ಷದ ಅಳಿವು– ಉಳಿವಿನ ಪ್ರಶ್ನೆಯಾಗಿದೆ. ರಾಜ್ಯಪಾಲರು ಮುಖ್ಯಮಂತ್ರಿಗೆ ಕೊಟ್ಟಿರುವ ನೋಟಿಸ್ ಅನ್ಯಾಯದಿಂದ ಕೂಡಿರುವಂಥದ್ದು ಎಂಬ ಸಂದೇಶವನ್ನು ಇಡೀ ದೇಶಕ್ಕೆ ಕೊಡಬೇಕಾಗಿದೆ’ ಎಂದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಮಾತನಾಡಿ, ‘ಆ.9ರಂದು ಮಹಾರಾಜ ಕಾಲೇಜಿನ ಮೈದಾನದಲ್ಲಿ ದೊಡ್ಡ ಮಟ್ಟದ ಜನಾಂದೋಲನ ಆಯೋಜಿಸಲಾಗಿದೆ. ಇದು ಸಿದ್ದರಾಮಯ್ಯ ಅವರ ವಿಚಾರದಲ್ಲಿ ನಡೆಯುತ್ತಿರುವ ಹೋರಾಟವಲ್ಲ, ಕಾಂಗ್ರೆಸ್ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ ಹಾಗೂ ಬಿಜೆಪಿ–ಜೆಡಿಎಸ್‌ನವರಿಗೆ ತಕ್ಕಪಾಠ ಕಲಿಸುವುದಾಗಿದೆ’ ಎಂದು ಹೇಳಿದರು.
ಬಿಜೆಪಿಯಿಂದ ಪಿತೂರಿ: ‘ಮುಡಾದಲ್ಲಿ ಹಗರಣ ಆಗಿರುವುದು ಸತ್ಯ. ಆದರೆ, ಯಾವ ಸರ್ಕಾರದ ಅವಧಿಯಲ್ಲಿ ನಡೆದಿದೆ ಎಂಬುದು ಮುಖ್ಯವಾದುದು. ಅದನ್ನು ಪತ್ತೆ ಹಚ್ಚಲೆಂದೇ ತನಿಖೆಗೆ ಆದೇಶಿಸಲಾಗಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. ಅವರ ಪತ್ನಿಗೆ ಪರಿಹಾರವಾಗಿ ಪರ್ಯಾಯ ನಿವೇಶನವನ್ನು ಕೊಡಲಾಗಿದೆ. ಇದೆಲ್ಲವೂ ಕಾನೂನಾತ್ಮಕವಾಗಿಯೇ ಆಗಿದೆ. ಆದರೂ ವಿರೋಧ ಪಕ್ಷದವರು ಹಗರಣ ಎಂದು ಬಿಂಬಿಸುತ್ತಿದ್ದಾರೆ. ಪಿತೂರಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕರ್ನಾಟಕ ವಸ್ತಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಭಾರತೀಶಂಕರ್, ಮಾಜಿ ಮೇಯರ್‌ಗಳಾದ ಬಿ.ಕೆ. ಪ್ರಕಾಶ್, ಮೋದಾಮಣಿ, ಬಿ.ಎಲ್. ಭೈರಪ್ಪ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮುಖಂಡರಾದ ಕೆ.ವಿ.ಮಲ್ಲೇಶ್, ಎಂ.ಶಿವಣ್ಣ, ಈಶ್ವರ ಚಕ್ಕಡಿ, ಎಚ್.ಎ. ವೆಂಕಟೇಶ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪಕ್ಷದ ಸಂಘಟನೆ ಬಲಪಡಿಸಲು ಶ್ರಮಿಸಿದ ಕಾರ್ಯಕರ್ತರಿಗೆ ನಿಗಮ–ಮಂಡಳಿಗಳಲ್ಲಿ ಸ್ಥಾನ ಕೊಡಲಾಗುವುದು.–ಜಿ.ಸಿ. ಚಂದ್ರಶೇಖರ್, ರಾಜ್ಯಸಭಾ ಸದಸ್ಯ
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ದುರ್ಬಲಗೊಳಿಸಿದರೆ ಪಕ್ಷವನ್ನು ಮುಗಿಸಬಹುದು ಎಂಬುದು ಬಿಜೆಪಿಯ ಪಿತೂರಿಯಾಗಿದೆ.–ಕೆ.ಹರೀಶ್ ಗೌಡ, ಶಾಸಕ
‘ಹಿಂದಿನ ಸಚಿವರ ಬಂಧನ’
‘ವಾಲ್ಮೀಕಿ ಹಗರಣದಲ್ಲಿ ಹಿಂದೆ ಇದ್ದ ಸಚಿವರನ್ನು ಬಂಧಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ. ಸೇಡಿನ ರಾಜಕಾರಣ ಮಾಡಬಾರದೆಂದು ನಾವು ಅಭಿವೃದ್ಧಿ ಕಡೆಗೆ ಗಮನ ಕೊಟ್ಟಿದ್ದೆವು. ಆದರೆ ತನಿಖೆಯ ವರದಿ ಬರುವವರೆಗೆ ಕಾಯುವ ವ್ಯವದಾನವೂ ವಿರೋಧ ಪಕ್ಷದವರಿಗೆ ಇಲ್ಲವಾಗಿದೆ’ ಎಂದು ಜಿ.ಸಿ. ಚಂದ್ರಶೇಖರ್ ಹೇಳಿದರು.
‘ನಾನಾಗಿದ್ದರೆ ಕೋರ್ಟ್‌ಗೆ ಹೋಗುತ್ತಿದ್ದೆ’
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ ‘ಮುಡಾ ಸದಸ್ಯನಾಗಿ ಅಲ್ಲಿನ ವ್ಯವಹಾರ ನೋಡಿದ್ದೇನೆ. ಕಾನೂನಾತ್ಮಕವಾಗಿ ನೋಡಿದರೆ ಮುಖ್ಯಮಂತ್ರಿ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕಾಗಿತ್ತು. ನಾನು ಅವರ ಜಾಗದಲ್ಲಿದ್ದರೆ ಖಂಡಿತವಾಗಿಯೂ ನ್ಯಾಯಾಲಯದ ಮೊರೆ ಹೋಗುತ್ತಿದ್ದೆ. ಜಮೀನಿಗೆ ಜಮೀನನ್ನೇ ಕೊಡುವಂತೆ ಕೇಳುತ್ತಿದ್ದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಕಿಂಚಿತ್ತೂ ಇಲ್ಲ’ ಎಂದು ಹೇಳಿದರು.
‘ಮೈಸೂರು ಸಮಾವೇಶಕ್ಕೆ ನಮ್ಮೆಲ್ಲ 136 ಶಾಸಕರು ಎಂಎಲ್‌ಸಿಗಳು ಸಂಸದರನ್ನೆಲ್ಲ ಕರೆಸುವಂತೆ ಕೋರಿದ್ದೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.