ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MUDA Scam | ರಾಜ್ಯಪಾಲರ ನಡೆಗೆ ಆಕ್ರೋಶ, ವಾಪಸ್ ಕರೆಸಿಕೊಳ್ಳಲು ಆಗ್ರಹ

Published 17 ಆಗಸ್ಟ್ 2024, 8:33 IST
Last Updated 17 ಆಗಸ್ಟ್ 2024, 8:33 IST
ಅಕ್ಷರ ಗಾತ್ರ

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ಬಿಜೆಪಿ–ಜೆಡಿಎಸ್‌ನವರ ಏಜೆಂಟರಂತೆ ಹಾಗೂ ಕೈಗೊಂಬೆಯಂತೆ ವರ್ತಿಸಿದ್ದಾರೆ. ಅವರನ್ನು ರಾಷ್ಟ್ರಪತಿಗಳು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಒತ್ತಾಯಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವುದು ಬಿಜೆಪಿಯವರ ಹುನ್ನಾರ. ಅವರು ಅಧಿಕಾರ ಸ್ವೀಕರಿಸಿದ ದಿನದಿಂದಲೇ ಇದಕ್ಕಾಗಿ ಯೋಜನೆ ಸಿದ್ಧಪಡಿಸಿದ್ದಾರೆ. ಅವರಿಗೆ ಜೆಡಿಎಸ್‌ನವರು ಕೈಜೋಡಿಸಿದ್ದಾರೆ. ಇದಕ್ಕಾಗಿ ರಾಜಭವನವನ್ನು ತಮ್ಮ ಕಚೇರಿಯನ್ನಾಗಿ ಮಾಡಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಕರ್ನಾಟಕ ಲೋಕಾಯುಕ್ತದಿಂದ ಸಲ್ಲಿಕೆಯಾಗಿರುವ ಅರ್ಜಿಯ ವಿಷಯದಲ್ಲಿ ಹತ್ತು ತಿಂಗಳಾದರೂ ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ.‌ ಬಿಜೆಪಿ ಮಾಜಿ ಸಚಿವರದ ಶಶಿಕಲಾ ಜೊಲ್ಲೆ ಹಾಗೂ ಮುರುಗೇಶ್ ನಿರಾಣಿ ಅವರ ವಿರುದ್ಧದ ಪತ್ರದ ವಿಷಯದಲ್ಲೂ ಕ್ರಮ ಜರುಗಿಸಿಲ್ಲ. ಆದರೆ, ಸಿದ್ದರಾಮಯ್ಯ ಅವರ ವಿರುದ್ಧ ಖಾಸಗಿ ವ್ಯಕ್ತಿಗಳು ನೀಡಿದ ದೂರು ಅರ್ಜಿಯನ್ನು ರಾಜ್ಯಪಾಲರು ತಕ್ಷಣವೇ ಪರಿಗಣಿಸಿದ್ದಾರೆ. ಯಾವ ಸಕ್ಷಮ ಪ್ರಾಧಿಕಾರವು ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿತ್ತು ಎಂಬುದನ್ನು ರಾಜ್ಯಪಾಲರು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

‘ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬ ನಾಯಕ 2ನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಿಕೊಳ್ಳಲಾಗದೆ, ಅವರನ್ನು ಅಧಿಕಾರದಿಂದ ಕೆಳಗಿಳಿಸಲೆಂದು ಎಚ್‌.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ ಬಹಳ ಶ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್‌ ಶಾ ಆಣತಿಯಂತೆ ಕೆಲಸ ಮಾಡಿದ್ದಾರೆ. ಇದಕ್ಕೆಲ್ಲಾ ನಮ್ಮ ಮುಖ್ಯಮಂತ್ರಿಯಾಗಲಿ ಅಥವಾ ನಮ್ಮ ಪಕ್ಷವಾಗಲಿ ಹೆದರುವುದಿಲ್ಲ’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧವೂ ಷಡ್ಯಂತ್ರ ಮಾಡಲು ಬಿಜೆಪಿಯವರು ಉದ್ದೇಶಿಸಿದ್ದಾರೆ. ಇದು ಅವರ ಅಧಿಕಾರದ ದಾಹವನ್ನು ತೋರಿಸುತ್ತದೆ. ಇದೆಲ್ಲವನ್ನೂ ಜನರು ಅರ್ಥ ಮಾಡಿಕೊಳ್ಳಬೇಕು. ಯಾವುದೇ ತನಿಖಾ ಸಂಸ್ಥೆಯೂ ಅನುಮತಿ ಕೇಳದಿದ್ದರೂ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಇಂಥ ರಾಜ್ಯಪಾಲರು ರಾಜ್ಯಕ್ಕೆ ಬೇಕಿಲ್ಲ’ ಎಂದರು.

‘ಬಿಜೆಪಿ ಹಾಗೂ ಜೆಡಿಎಸ್‌ನವರ ಹುನ್ನಾರವನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದು ಕೋರಿದರು.

‘ರಾಜ್ಯಪಾಲರ ನಡೆಯ ವಿರುದ್ಧ ಕಾನೂನಾತ್ಮಕ ಹಾಗೂ ರಾಜಕೀಯವಾಗಿ ನಾವು ಹೋರಾಟ ಮಾಡುತ್ತೇವೆ. ಪಕ್ಷದ ನಿರ್ದೇಶನದಂತೆ ಅಧಿಕೃತವಾಗಿ ಪ್ರತಿಭಟನೆ ನಡೆಸುತ್ತೇವೆ. ಕಾಂಗ್ರೆಸ್ ಹೆಸರು ಹೇಳಿಕೊಂಡು ಯಾರೋ ಪ್ರತಿಭಟಿಸಿ ಆಸ್ತಿಪಾಸ್ತಿ ಹಾನಿ ಮಾಡಿದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಕಾಂಗ್ರೆಸ್ ಹೆಸರು ಹೇಳಿಕೊಂಡು ಬಿಜೆಪಿಯ ಕಿಡಿಗೇಡಿಗಳೇ ಗಲಾಟೆ ಮಾಡಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಹೋರಾಟ ಯಾವುದೇ ಹಂತಕ್ಕೆ ಹೋದರೂ, ಸಿದ್ದರಾಮಯ್ಯ ಅವರ ರಾಜೀನಾಮೆಯ ಪ್ರಶ್ನೆಯೇ ಬರುವುದಿಲ್ಲ’ ಎಂದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಮಾತನಾಡಿ, ‘ಪಕ್ಷದ ನಿರ್ದೇಶನದಂತೆ ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗವರ್ನರ್ ಚಳವಳಿ ನಡೆಸಲಾಗುವುದು. ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳು ತಾರಕಕ್ಕೆ ಏರುತ್ತಿರುವುದನ್ನು ತಡೆಯುವುದಕ್ಕಾಗಿಯೇ, ರಾಜ್ಯಪಾಲರನ್ನು ಬಳಸಿಕೊಳ್ಳಲಾಗಿದೆ; ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಗೆ ಅನುಮತಿ ಕೊಡಿಸಲಾಗಿದೆ’ ಎಂದು ಆರೋಪಿಸಿದರು.

‘ನಾಲ್ಕು ದಶಕಗಳ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ಪ್ರಾಮಾಣಿಕತೆ ವಿಚಾರದಲ್ಲಿ ಅವರು ಎಂದಿಗೂ ರಾಜಿ ಆಗುವುದಿಲ್ಲ. ಕಾರ್ಯಕರ್ತರಾದ ನಾವೆಲ್ಲರೂ ಅವರೊಂದಿಗೆ ಇದ್ದೇವೆ’ ಎಂದರು.

ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್. ಮೂರ್ತಿ ಮಾತನಾಡಿ, ‘ಇಡೀ ಪಕ್ಷ ಮುಖ್ಯಮಂತ್ರಿ ‌ಜೊತೆಗಿದೆ. ರಾಜ್ಯಪಾಲರಿಂದ ನಡೆದಿರುವ ಪ್ರಜಾಪ್ರಭುತ್ವ ಕಗ್ಗೊಲೆಯ ಪ್ರಯತ್ನವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಹೇಳಿದರು.

ನಗರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮುಖಂಡರಾದ ಬಿ.ಎಂ. ರಾಮು, ಕೆ.ವಿ.ಮಲ್ಲೇಶ್, ಎನ್.ಆರ್. ನಾಗೇಶ್, ಹೇಮಂತ್, ನಾಗಭೂಷಣ ತಿವಾರಿ ಹಾಗೂ ಮಹೇಶ್ ಪಾಲ್ಗೊಂಡಿದ್ದರು.muda

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT