ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅನುಮತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ಖಚಿತಪಡಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್. ಕೆ. ಅತೀಕ್ ಅವರಿಗೆ ರಾಜ್ಯಪಾಲರು ರವಾನಿಸಿದ್ದಾರೆ.
ದೂರುದಾರರಾದ ವಕೀಲ ಟಿ.ಜೆ. ಅಬ್ರಹಾಂ, ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಅವರನ್ನು ರಾಜಭವನಕ್ಕೆ ಬರುವಂತೆ ಆಹ್ವಾನಿಸಲಾಗಿದೆ. ಈಗಾಗಲೇ ಪ್ರದೀಪ್ ರಾಜಭವನಕ್ಕೆ ಆಗಮಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಸಿ.ಎಂ ವಿರುದ್ಧ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ಅನುಮತಿ ಕೋರಿ ಜುಲೈ 26ರಂದು ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಮರುದಿನವೇ, ಮುಖ್ಯಮಂತ್ರಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದರು.
ಆಗಸ್ಟ್ 1ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಪರಿಷತ್ ಸಭೆ, ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ನೋಟಿಸ್ ಹಿಂದಕ್ಕೆ ಪಡೆಯಬೇಕು ಮತ್ತು ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ರಾಜ್ಯಪಾಲರಿಗೆ ಸಲಹೆ ನೀಡುವ ತೀರ್ಮಾನ ಕೈಗೊಂಡಿತ್ತು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ಅವರಿಗೆ ರಾಜ್ಯಪಾಲರು ರವಾನಿಸಿರುವ ಪತ್ರ
ರಾಜ್ಯಪಾಲರು ದೂರುದಾರರಿಗೆ ನೀಡಿರುವ ನೋಟಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.