ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ: ಪ್ರಭಾವಿಗಳ ಆಪ್ತರಿಗೆ ‘ಸೆಟ್ಲ್‌ಮೆಂಟ್’ ಬಳುವಳಿ

ಭಾರಿ ಮೌಲ್ಯದ ನಿವೇಶನಗಳ ಉಡುಗೊರೆ; ಸರ್ಕಾರಕ್ಕೂ ತೆರಿಗೆ ವಂಚನೆ ಆರೋಪ
Published : 15 ಆಗಸ್ಟ್ 2024, 1:49 IST
Last Updated : 15 ಆಗಸ್ಟ್ 2024, 1:49 IST
ಫಾಲೋ ಮಾಡಿ
Comments

ಮೈಸೂರು: ಪ್ರಾಧಿಕಾರದಿಂದ ಪಡೆದ ನಿವೇಶನಗಳನ್ನೇ ಪ್ರಭಾವಿಗಳ ಆಪ್ತರಿಗೆ ಲಂಚದ ರೂಪದಲ್ಲಿ ವಾಪಸ್‌ ನೀಡುವುದು, ಅದಕ್ಕೆ ‘ಸೆಟ್ಲ್‌ಮೆಂಟ್ ಡೀಡ್’ ಎಂದು ಹೆಸರು ಕೊಟ್ಟು ಸರ್ಕಾರಕ್ಕೂ ತೆರಿಗೆ ವಂಚಿಸುವುದು ಮುಡಾದಲ್ಲಾಗಿರುವ ಹೊಸ ಅಕ್ರಮ.

ಹೀಗೆ, ಕೋಟಿ ರೂಪಾಯಿ ಮೌಲ್ಯದ ನಿವೇಶನಗಳನ್ನು ಬಳುವಳಿಯಾಗಿ ಪಡೆದವರಲ್ಲಿ ಮುಡಾ ಅಧ್ಯಕ್ಷ ಕೆ.ಮರೀಗೌಡ ಸಂಬಂಧಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಸಂಬಂಧಿಯ ಹೆಸರೂ ಇದೆ.

ಮರೀಗೌಡರ ಹತ್ತಿರದ ಸಂಬಂಧಿ, ಮೈಸೂರು ತಾಲ್ಲೂಕಿನ ಬೀರಿಗೌಡನಹುಂಡಿ ನಿವಾಸಿ ಎಸ್‌. ಶಿವಣ್ಣ ಅವರಿಗೆ ರಿಯಲ್‌ ಎಸ್ಟೇಟ್ ಉದ್ಯಮಿ ಎನ್‌. ಮಂಜುನಾಥ್‌ ವಿಜಯನಗರ 4ನೇ ಹಂತದಲ್ಲಿ 12X18 ಚದರ ಮೀಟರ್‌ ಅಳತೆಯ ನಿವೇಶನವನ್ನು (ನಂ. 11809/ಎ) ನೋಂದಣಿ ಮಾಡಿಕೊಟ್ಟಿದ್ದಾರೆ. 2024ರ ಮೇ 22ರಂದು ಈ ಸೆಟ್ಲ್‌ಮೆಂಟ್ ಡೀಡ್ ನೋಂದಣಿ ಆಗಿದ್ದು, ಸರ್ಕಾರಕ್ಕೆ ಒಟ್ಟು ₹5.03 ಲಕ್ಷ ಶುಲ್ಕ ಪಾವತಿಸಲಾಗಿದೆ. ‘ಸೆಟ್ಲ್‌ಮೆಂಟ್’ ಆಗಿರುವ ಕಾರಣ ನಿವೇಶನದ ಮೌಲ್ಯವನ್ನು ನಮೂದಿಸಿಲ್ಲ.

ಮಹದೇವಪ್ಪ ಅವರ ಸಹೋದರನ ಪುತ್ರ ನವೀನ್ ಬೋಸ್‌ ಎಂಬವರಿಗೂ ವಿಜಯನಗರ 4ನೇ ಹಂತದಲ್ಲಿ ಹೀಗೆ ನಿವೇಶನವೊಂದನ್ನು ನೋಂದಣಿ ಮಾಡಿಕೊಡಲಾಗಿದೆ. ಒಂದೊಂದು ನಿವೇಶನದ ಮೌಲ್ಯವೂ ಕೋಟಿ ರೂಪಾಯಿಗಳ ಲೆಕ್ಕದಲ್ಲಿದೆ.

ಮುಡಾದಿಂದಲೇ ಬಳುವಳಿ:

ಹೀಗೆ ಪ್ರಭಾವಿಗಳ ಆಪ್ತರಿಗೆ ನೋಂದಣಿ ಆಗುತ್ತಿರುವ ನಿವೇಶನಗಳು ಈ ಹಿಂದೆ ಮುಡಾದಿಂದಲೇ ರಿಯಲ್‌ ಎಸ್ಟೇಟ್ ಉದ್ಯಮಿಗೆ ಮಂಜೂರಾದ ಬದಲಿ ನಿವೇಶನಗಳು ಎಂಬುದು ವಿಶೇಷ. ಬೆಂಗಳೂರಿನ ಡಾಲರ್ಸ್ ಕಾಲೊನಿ ನಿವಾಸಿ ಮಂಜುನಾಥ್ ಮುಡಾದಿಂದ ಒಟ್ಟು 24 ಬದಲಿ ನಿವೇಶನಗಳನ್ನು ಪಡೆದಿದ್ದರು. ಅದರಲ್ಲಿ ಕೆಲವನ್ನು ರಾಜಕಾರಣಿಗಳ ಆಪ್ತರಿಗೆ ‘ಸೆಟ್ಲ್‌ಮೆಂಟ್‌ ಡೀಡ್‌’ ಹೆಸರಿನಲ್ಲಿ ಹಂಚಿದ್ದಾರೆ ಎನ್ನಲಾಗಿದೆ.

ಸರ್ಕಾರಕ್ಕೆ ತೆರಿಗೆ ವಂಚನೆ:

‘ಸೆಟ್ಲ್‌ಮೆಂಟ್ ಡೀಡ್‌’ ಹೆಸರಿನಲ್ಲಿ ಭಾರಿ ಅಕ್ರಮ ನಡೆದಿದ್ದು, ಅದರಿಂದ ಸರ್ಕಾರಕ್ಕೂ ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚನೆಯಾಗುತ್ತಿದೆ. ಉಪ ನೋಂದಣಾಧಿಕಾರಿ ಕಚೇರಿಯ ಅಧಿಕಾರಿಗಳೂ ಶಾಮೀಲಾಗಿದ್ದು, ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.

‘ಇಲ್ಲಿ, ಸರ್ಕಾರಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನಷ್ಟೇ ಕಟ್ಟಲಾಗುತ್ತದೆ. ನಿವೇಶನ ಖರೀದಿಸುವವರ ಆದಾಯದ ಮೂಲವಾಗಲಿ, ಮಾರಾಟ ಮಾಡುವವರಿಗೆ ಬರುವ ಹಣಕ್ಕೆ ತೆರಿಗೆಯಾಗಲಿ ಬೀಳುವುದಿಲ್ಲ. ಉಪನೋಂದಣಿ ಕಚೇರಿ ಅಧಿಕಾರಿಗಳು ಏನನ್ನೂ ಪರಿಶೀಲಿಸದೇ ನೋಂದಣಿ ಮಾಡಿಕೊಡುತ್ತಿದ್ದಾರೆ. ಮುಡಾದಲ್ಲಿ ನಡೆದಿರುವ ಇಂತಹ ಎಲ್ಲ ಸೆಟ್ಲ್‌ಮೆಂಟ್ ಡೀಡ್‌ಗಳನ್ನು ತನಿಖೆಗೆ ಒಳಪಡಿಸಬೇಕು. ಆದಾಯ ತೆರಿಗೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು’ ಎಂದು ಮುಡಾದ ನಿವೃತ್ತ ಅಧಿಕಾರಿಯೊಬ್ಬರು ಆಗ್ರಹಿಸಿದ್ದಾರೆ. 

ಈ ಸಂಬಂಧ ಮೈಸೂರಿನ ಕೆಲವು ನಾಗರಿಕರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದಾರೆ.

ಏನಿದು ಸೆಟ್ಲ್‌ಮೆಂಟ್‌ ಡೀಡ್‌?
ಸೆಟ್ಲ್‌ಮೆಂಟ್‌ ಡೀಡ್‌ ಎನ್ನುವುದು ಆಸ್ತಿ ನೋಂದಣಿಗೆ ದಾನಪತ್ರದಂತೆಯೇ ಇರುವ ಇನ್ನೊಂದು ಮಾರ್ಗ. ಇಲ್ಲಿ ಒಬ್ಬ ವ್ಯಕ್ತಿಯು ತನ್ನ ಹತ್ತಿರದ ಬಂಧುಗಳಿಗೆ ತನ್ನ ಆಸ್ತಿಯ ಹಕ್ಕನ್ನು ವರ್ಗಾಯಿಸಬಹುದು. ಕೆಲವೊಮ್ಮೆ ಆಸ್ತಿಯ ಪಾಲುದಾರಿಕೆ ಸಂಬಂಧಿಸಿದಂತೆಯೂ ಒಬ್ಬರು ಇನ್ನೊಬ್ಬರಿಗೆ ಆಸ್ತಿಯ ಹಕ್ಕನ್ನು ಬಿಟ್ಟುಕೊಡಬಹುದು. ಇದರಲ್ಲಿ ಹಣಕಾಸಿನ ವ್ಯವಹಾರದ ಪ್ರಸ್ತಾವ ಇರುವುದಿಲ್ಲ. ‘ಆದರೆ ಈ ಮಾರ್ಗವನ್ನೇ ದುರ್ಬಳಕೆ ಮಾಡಿಕೊಂಡು ಕೊಡು–ಕೊಳ್ಳುವ ಹಣಕಾಸಿನ ವ್ಯವಹಾರವನ್ನೇ ಉಲ್ಲೇಖಿಸದೇ ವಂಚಿಸಲಾಗುತ್ತದೆ’ ಎಂದು ಹೇಳುತ್ತಾರೆ ನಿವೃತ್ತ ಅಧಿಕಾರಿಯೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT