ನಂಜನಗೂಡು: ನಗರಸಭೆ ಉಳಿದ ಅವದಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸೆ.03ರಂದು ಚುನಾವಣೆ ನಡೆಯಲಿದ್ದು, ಭಾನುವಾರ ಬಿಜೆಪಿ ತನ್ನ 4 ಮಂದಿ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.
1ನೇ ವಾರ್ಡ್‌ನ ನಗರಸಭೆ ಸದಸ್ಯ ಗಿರೀಶ್, 12ನೇ ವಾರ್ಡ್‌ನ ಗಾಯಿತ್ರಿ ಮುರುಗೇಶ್, 22ನೇ ವಾರ್ಡ್‌ನ ಮೀನಾಕ್ಷಿ ನಾಗರಾಜು ಹಾಗೂ 27ನೇ ವಾರ್ಡ್‌ನ ಸದಸ್ಯೆ ವಿಜಯ್ ಲಕ್ಷ್ಮಿ ಅವರುಗಳ ಅನುಪಸ್ಥಿತಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಸಿದ್ದರಾಜು ನೇತೃತ್ವದಲ್ಲಿ ಅವರ ಮನೆ ಬಾಗಿಲಿಗೆ ವಿಪ್ ಪ್ರತಿಗಳನ್ನು ಅಂಟಿಸಲಾಯಿತು.
ನಗರ ಬಿಜೆಪಿ ಅಧ್ಯಕ್ಷ ಸಿದ್ದರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಭೆಗೆ ಹಾಜರಾಗದ ಹಾಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ 4 ಮಂದಿ ನಗರಸಭೆ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ ಎಂದರು.
ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, 31 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿಯ 15, ಮಿತ್ರ ಪಕ್ಷ ಜೆಡಿಎಸ್ 3 ಮಂದಿ ಸದಸ್ಯರಿದ್ದಾರೆ. ಪಕ್ಷದ ಚಿಹ್ನೆಯ ಮೇಲೆ ಆರಿಸಿ ಬಂದಿರುವ ಬಿಜೆಪಿ ಸದಸ್ಯರು, ನಗರಸಭೆ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಪಿ.ದೇವ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಜೆಡಿಎಸ್‌ನ ರಿಹಾನ ಬಾನು ಅವರಿಗೆ ಮತ ಚಲಾಯಿಸಬೇಕು. ತಪ್ಪಿದರೆ ಪಕ್ಷಾಂತರ ವಿರೋಧಿ ಕಾನೂನಿನಂತೆ ಚುನಾವಣೆಗೆ ನಿಲ್ಲದಂತೆ 5 ವರ್ಷಗಳ ಕಾಲ ಅನರ್ಹತೆ ಶಿಕ್ಷಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.