ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಮುಲ್: ಚೆಲುವರಾಜು ನೂತನ ಅಧ್ಯಕ್ಷ

ಕಣದಿಂದ ಹಿಂದೆ ಸರಿದ ಗೋಪಾಲಪುರದ ಗುರುಸ್ವಾಮಿ, ಎಚ್‌.ಡಿ. ಕೋಟೆ ತಾಲ್ಲೂಕಿನ ಈರೇಗೌಡ
Published 8 ಆಗಸ್ಟ್ 2024, 4:24 IST
Last Updated 8 ಆಗಸ್ಟ್ 2024, 4:24 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ (ಮೈಮುಲ್) ಅಧ್ಯಕ್ಷರಾಗಿ ಆರ್. ಚೆಲುವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೈಮುಲ್‌ ಆಡಳಿತ ಪರೋಕ್ಷವಾಗಿ ಜೆಡಿಎಸ್‌ನಿಂದ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.

ಮಂಗಳವಾರ ಬೆಳಿಗ್ಗೆ ಮೈಮುಲ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚೆಲುವರಾಜು ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾ ಅಧಿಕಾರಿಗಳು ಅವಿರೋಧ ಆಯ್ಕೆಯ ಘೋಷಣೆ ಮಾಡಿದರು.

ನೂತನ ಅಧ್ಯಕ್ಷರನ್ನು ಒಕ್ಕೂಟದ ನಿರ್ದೇಶಕರು ಅಭಿನಂದಿಸಿದರು. ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ರಕ್ಷಿತ್, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯಕ್ ಇದ್ದರು.

ಈ ಸಂದರ್ಭ ಮಾತನಾಡಿದ ಚೆಲುವರಾಜು, ‘ಮೈಮುಲ್ ಅನ್ನು ರಾಜ್ಯದಲ್ಲಿ ಮಾದರಿ ಒಕ್ಕೂಟವನ್ನಾಗಿ ರೂಪಿಸಲಾಗುವುದು. ರೈತರಿಗೆ ಹೈನುಗಾರಿಕೆಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುವ ಜೊತೆಗೆ ಹಾಲಿನ ಉತ್ಪಾದನೆ ಹೆಚ್ಚಳಕ್ಕೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿ ಸಭೆ: ಮೈಮುಲ್‌ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಆಪ್ತ, ನರಸೀಪುರ ತಾಲ್ಲೂಕಿನ ಚೆಲುವರಾಜು ಜೊತೆಗೆ ಗೋಪಾಲಪುರದ ಗುರುಸ್ವಾಮಿ ಹಾಗೂ ಎಚ್‌.ಡಿ. ಕೋಟೆ ತಾಲ್ಲೂಕಿನ ಈರೇಗೌಡ ಅವರು ಸಹ ಆಕಾಂಕ್ಷಿ ಆಗಿದ್ದರು.

ಮಂಗಳವಾರ ರಾತ್ರಿ ಮಹದೇವಪ್ಪ ಜೊತೆಗೂಡಿ ತಮ್ಮ ನಿವಾಸದಲ್ಲಿ ಮೈಮುಲ್ ನಿರ್ದೇಶಕರ ಜೊತೆ ಸಭೆ ನಡೆಸಿದ ಸಿದ್ದರಾಮಯ್ಯ ಅಂತಿಮವಾಗಿ ಚೆಲುವರಾಜು ಹೆಸರು ಸೂಚಿಸಿದ್ದು, ಉಳಿದ ಇಬ್ಬರು ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ಅವಿರೋಧ ಆಯ್ಕೆ ನಡೆಯಿತು.

ಜೆಡಿಎಸ್‌ನಿಂದ ಕಾಂಗ್ರೆಸ್ ತೆಕ್ಕೆಗೆ ಆಡಳಿತ

ಮೈಮುಲ್ ಚುನಾವಣೆ ಪಕ್ಷಾತೀತವಾಗಿ ನಡೆಯುವ ಆಯ್ಕೆ ಪ್ರಕ್ರಿಯೆ. ಈ ನಡುವೆಯೂ ವಿವಿಧ ಪಕ್ಷಗಳ ಮುಖಂಡರು ತಮ್ಮ ಬಲಾಬಲ ಪ್ರದರ್ಶನಕ್ಕೆ ಇದನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತ ಬಂದಿದ್ದಾರೆ. ಆಡಳಿತ ಮಂಡಳಿ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗಿದ್ದು ಅಧ್ಯಕ್ಷ ಹುದ್ದೆಗಾಗಿ ಜಿ.ಟಿ. ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಬೆಂಬಲಿತ ಬಣಗಳ ನಡುವೆಯೇ ಪೈಪೋಟಿ ನಡೆದು ಪ್ರಸನ್ನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಇವರಲ್ಲಿ ಬಹುತೇಕರು ಈಗ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದು ಆಡಳಿತಾರೂಢ ಪಕ್ಷದ ಬೆಂಬಲಿಗರೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT