ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮೈಸೂರು ಚಲೋ’ ಪಾದಯಾತ್ರೆಗೆ ತೆರೆ

ಬಿಜೆಪಿ– ಜೆಡಿಎಸ್‌ ಮುಖಂಡರ ಒಗ್ಗಟ್ಟು ಪ್ರದರ್ಶನ, ಹಾರಾಡಿದ ಪಕ್ಷದ ಬಾವುಟಗಳು
Published 11 ಆಗಸ್ಟ್ 2024, 6:06 IST
Last Updated 11 ಆಗಸ್ಟ್ 2024, 6:06 IST
ಅಕ್ಷರ ಗಾತ್ರ

ಮೈಸೂರು: ಮುಡಾ, ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಬಿಜೆಪಿ– ಜೆಡಿಎಸ್‌ ಪಕ್ಷಗಳು ಹಮ್ಮಿಕೊಂಡಿದ್ದ ‘ಮೈಸೂರು ಚಲೋ’ ಪಾದಯಾತ್ರೆ ಶನಿವಾರ ನಗರದಲ್ಲಿ ಕೊನೆಗೊಂಡಿತು.

ಜೆ.ಕೆ.ಮೈದಾನದಲ್ಲಿ ಶುಕ್ರವಾರ ಕೊನೆಗೊಂಡಿದ್ದ ಪಾದಯಾತ್ರೆಯು ನಾರಾಯಣ ಶಾಸ್ತ್ರಿ ರಸ್ತೆಯ ರಾಘವೇಂದ್ರ ಮಠದ ಬೃಂದಾವನದಿಂದ ಆರಂಭವಾಗಿ ಸಮಾರೋಪ ಸಮಾವೇಶ ನಡೆಯುತ್ತಿದ್ದ ಮಹಾರಾಜ ಕಾಲೇಜು ಮೈದಾನಕ್ಕೆ ಮಧ್ಯಾಹ್ನದ ವೇಳೆಗೆ ತಲುಪಿತು.

ಅದಕ್ಕೂ ಮುನ್ನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ನಂತರ ಕೆ.ಆರ್.ವೃತ್ತದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರೊಂದಿಗೆ ನಾರಾಯಣಶಾಸ್ತ್ರಿ ರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಬೃಂದಾವನದಲ್ಲಿ ಪೂಜೆ ಸಲ್ಲಿಸಿ ಕೊನೆ ದಿನದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. 

ಅಪಾರ ಬೆಂಬಲಿಗರು, ಮೈತ್ರಿ ‍ಪಕ್ಷಗಳ ಕಾರ್ಯಕರ್ತರು ಪಕ್ಷಗಳ ಬಾವುಟ ಹಿಡಿದು, ಕೇಸರಿ– ಹಸಿರು ಶಾಲುಗಳನ್ನು ಧರಿಸಿದ್ದರು. ಕೋಲಾರದ ಕಲಾವಿದರ ಅಬ್ಬರದ ನಗಾರಿ– ತಮಟೆ ಸದ್ದುಗಳಿಗೆ ಕುಣಿಯುತ್ತ ಸಾಗಿದರು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹಗರಣಗಳ ‍ಪ್ಲೆಕಾರ್ಡ್‌ಗಳನ್ನು ಹಿಡಿದು ಘೋಷಣೆ ಮೊಳಗಿಸಿದರು.

ಅಂಬೇಡ್ಕರ್ ಕಟೌಟ್‌ಗೆ ಪುಷ್ಪನಮನ: ರಾಮಸ್ವಾಮಿ ವೃತ್ತದಲ್ಲಿ ಕ್ರೇನ್‌, ಬುಲ್ಡೋಜರ್‌ಗಳನ್ನು ನಿಲ್ಲಿಸಲಾಗಿತ್ತು. ಕ್ರೇನ್‌ನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 40 ಅಡಿ ಕಟೌಟ್‌ಗೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಬೆಂಬಲಿಗರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ನಾಯಕರು, ಮುಖಂಡರಿಗೆ ಪುಷ್ಪವೃಷ್ಟಿ ಮಾಡಿದರು. ತುಂತುರು ಮಳೆಯಲ್ಲಿ ಕೊಡೆ ಹಿಡಿದ ಕಾರ್ಯಕರ್ತರು ಉತ್ಸಾಹ ಪ್ರದರ್ಶಿಸಿದರು.

ಸೇಬು, ಮೊಸಂಬಿ ಹಾರ: ಮೂರು ಕ್ರೇನ್‌ಗಳಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್‌.ನಾಗೇಂದ್ರ ಹಾಗೂ ಜೆಡಿಎಸ್ ಕಾರ್ಯಕರ್ತರು ಬಿ.ವೈ.ವಿಜಯೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಮೊಸಂಬಿ, ಸೇಬಿನ ಹಾರವನ್ನು ಹಾಕಿದರು. ಬುಲ್ಡೋಜರ್‌ಗಳ ಮೇಲೇರಿ ಪುಷ್ಪವೃಷ್ಟಿ ಮಾಡಿದರು. ನಂತರ ಸೇಬು, ಮೊಸಂಬಿಗಾಗಿ ಜನರು ಮುಗಿಬಿದ್ದರು. 

ಪಾದಯಾತ್ರೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಸಿ.ಎನ್. ಅಶ್ವತ್ಥ‌ ನಾರಾಯಣ, ಟಿ.ಎಸ್.ಶ್ರೀವತ್ಸ, ಜಿ.ಡಿ‌.ಹರೀಶ್ ಗೌಡ, ಅರವಿಂದ ಬೆಲ್ಲದ, ಸಿ.ಕೆ.ರಾಮಮೂರ್ತಿ, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಮಹೇಶ್, ಮುಖಂಡರಾದ ಭಗವಂತ ಖೂಬಾ, ಬಿ.ಶ್ರೀರಾಮುಲು, ಜನಾರ್ಧನ ರೆಡ್ಡಿ, ಸಿ.ಎಸ್.ನಿರಂಜನಕುಮಾರ್, ಎಂ.ಪಿ.ರೇಣುಕಾಚಾರ್ಯ, ಸುರೇಶ್ ಗೌಡ, ಹೇಮಂತ್ ಕುಮಾರ್ ಗೌಡ, ಕೆ.ಟಿ.ಚೆಲುವೇಗೌಡ, ಪ್ರೇಮಾ ಶಂಕರೇಗೌಡ ಹಾಜರಿದ್ದರು. 

ಒಂದೂವರೆ ಗಂಟೆ ತಡ, ದಟ್ಟಣೆ: ನಿಗದಿಯಂತೆ 10 ಗಂಟೆಗೆ ಜೆ.ಕೆ.ಮೈದಾನದಲ್ಲಿ ಪಾದಯಾತ್ರೆಗೆ ಚಾಲನೆ ದೊರೆಯಬೇಕಿತ್ತು. ನಾರಾಯಣಶಾಸ್ತಿ ರಸ್ತೆಯ ರಾಘವೇಂದ್ರ ಮಠದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದಲೇ ಪಾದಯಾತ್ರೆ ಆರಂಭಕ್ಕೆ ಮುಖಂಡರು ನಿರ್ಧರಿಸಿದರು. 11.30ರ ವೇಳೆಗೆ ಚಾಲನೆ ಸಿಕ್ಕಿತು. ರಾಮಸ್ವಾಮಿ ವೃತ್ತ, ಏಕಲವ್ಯ ವೃತ್ತದಲ್ಲಿ ಸಾಗಿ 12.30ರ ಸುಮಾರು ಮಹಾರಾಜ ಕಾಲೇಜು ಮೈದಾನ ತಲುಪಿತು. ಈ ವೇಳೆ ನಗರದ ಹೃದಯ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

300 ಪೊಲೀಸರ ನಿಯೋಜನೆ: ಪಾದಯಾತ್ರೆಯ ಒಂದು ಕಿ.ಮೀ ಮಾರ್ಗದಲ್ಲಿ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಕಾರ್ಯಕರ್ತರು ಸೇಬಿನ ಹಾರ ಹಾಕಿದರು 
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಕಾರ್ಯಕರ್ತರು ಸೇಬಿನ ಹಾರ ಹಾಕಿದರು 
ಮಹಾರಾಜ ಕಾಲೇಜು ಮೈದಾನದ ಹೊರ ಆವರಣದಲ್ಲಿ ರಾಶಿ ಬಿದ್ದಿದ್ದ ಆಹಾರ ಪೊಟ್ಟಣಗಳ ಪ್ಲಾಸ್ಟಿಕ್‌ ತ್ಯಾಜ್ಯ
ಮಹಾರಾಜ ಕಾಲೇಜು ಮೈದಾನದ ಹೊರ ಆವರಣದಲ್ಲಿ ರಾಶಿ ಬಿದ್ದಿದ್ದ ಆಹಾರ ಪೊಟ್ಟಣಗಳ ಪ್ಲಾಸ್ಟಿಕ್‌ ತ್ಯಾಜ್ಯ
ಶಾಸಕ ಸಿ.ಕೆ.ರಾಮಮೂರ್ತಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಪಾದಯಾತ್ರೆಯಲ್ಲಿ ತಮಟೆ ಸದ್ದಿಗೆ ಕುಣಿದರು
ಶಾಸಕ ಸಿ.ಕೆ.ರಾಮಮೂರ್ತಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಪಾದಯಾತ್ರೆಯಲ್ಲಿ ತಮಟೆ ಸದ್ದಿಗೆ ಕುಣಿದರು
ಏಕಲವ್ಯ ವೃತ್ತದಲ್ಲಿ ರಾರಾಜಿಸಿದ ಕಟೌಟ್‌ ಫ್ಲೆಕ್ಸ್‌ಗಳಲ್ಲಿ ಕಾಂಗ್ರೆಸ್‌ ಹಗರಣಗಳ ಫ್ಲೆಕ್ಸ್ ಕೂಡ ಇತ್ತು
ಏಕಲವ್ಯ ವೃತ್ತದಲ್ಲಿ ರಾರಾಜಿಸಿದ ಕಟೌಟ್‌ ಫ್ಲೆಕ್ಸ್‌ಗಳಲ್ಲಿ ಕಾಂಗ್ರೆಸ್‌ ಹಗರಣಗಳ ಫ್ಲೆಕ್ಸ್ ಕೂಡ ಇತ್ತು

ರಾರಾಜಿಸಿದ ಕಟೌಟ್‌ ಫ್ಲೆಕ್ಸ್‌ 

ನಗರದೆಲ್ಲೆಡೆ ಕಟೌಟ್‌ ಫ್ಲೆಕ್ಸ್‌ಗಳು ರಾರಾಜಿಸಿದವು. ಬಿಜೆಪಿ– ಜೆಡಿಎಸ್‌ ಚಿಹ್ನೆ ಬಂಟಿಂಗ್ಸ್‌ಗಳ ತೋರಣವನ್ನು ಪ್ರಮುಖ ವೃತ್ತ ರಸ್ತೆಗಳಿಗೆ ಹಾಕಲಾಗಿತ್ತು. ಜೊತೆಗೆ ಪಾದಯಾತ್ರೆಗೆ ಸ್ವಾಗತಿಸಿ ಶುಭಕೋರಿದ ಫ್ಲೆಕ್ಸ್‌ಗಳನ್ನು ಎಲ್ಲೆಡೆ ಬೆಂಬಲಿಗರು ಹಾಕಿಸಿದ್ದರು. ಫ್ಲೆಕ್ಸ್ ನಗರಿಯಾಗಿತ್ತು. ಎಲ್ಲ ಫ್ಲೆಕ್ಸ್‌ಗಳಲ್ಲಿ ಕೇಸರಿ ಹಸಿರು ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿತ್ತು. ಎಚ್‌.ಡಿ.ಕುಮಾರಸ್ವಾಮಿ ನಿಖಿಲ್‌ ಕುಮಾರಸ್ವಾಮಿ ಬಿ.ವೈ.ವಿಜಯೇಂದ್ರ ಬಿ.ಎಸ್‌.ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಅರವಿಂದ ಬೆಲ್ಲದ ಆರ್‌.ಅಶೋಕ ಸೇರಿದಂತೆ ಎರಡೂ ಪಕ್ಷಗಳ ಮುಖಂಡರ ಬೃಹತ್ ಕಟೌಟ್‌ಗಳನ್ನು  ಜೆಎಲ್‌ಬಿ ರಸ್ತೆ ಚಾಮರಾಜ ಜೋಡಿ ರಸ್ತೆಯ ವಿದ್ಯುತ್‌ ಕಂಬಗಳಿಗೆ ಹಾಕಲಾಗಿತ್ತು. ಪ್ರೀತಂ ಗೌಡ ಎಚ್‌.ಡಿ.ರೇವಣ್ಣ ಚಿತ್ರಗಳು ಫ್ಲೆಕ್ಸ್‌ನಲ್ಲಿ ಇರಲಿಲ್ಲ. ಪೆನ್‌ಡ್ರೈವ್‌ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಜೆಡಿಎಸ್‌– ಬಿಜೆಪಿ ಶಾಲು ಧರಿಸಿ ಸಮಾವೇಶದ ಹೊರಗೆ ಕಾಣಿಸಿಕೊಂಡರು. ಫ್ಲೆಕ್ಸ್‌ ತಿರುಗೇಟು: ಕಾಂಗ್ರೆಸ್‌ ಜನಾಂದೋಲನದ ವೇಳೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿರುದ್ದದ ಫ್ಲೆಕ್ಸ್‌ ಅನ್ನು ಅಳವಡಿಸಿದ್ದಕ್ಕೆ ಜೆಡಿಎಸ್‌ ಮುಖಂಡರು ವಿರೋಧಿಸಿದ್ದರು. ಅದಕ್ಕೆ ಪ್ರತಿಯಾಗಿ ಏಕಲವ್ಯ ವೃತ್ತ ರಾಮಸ್ವಾಮಿ ವೃತ್ತ ಸೇರಿದಂತೆ ಹಲವಡೆ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ನಡೆಸಿದ ಆರೋಪಗಳಿದ್ದ ಫ್ಲೆಕ್ಸ್ ಹಾಕಿ ಮೈತ್ರಿ ‍ಪಕ್ಷದವರು ತಿರುಗೇಟು ಕೊಟ್ಟರು. ಕಾರ್ಯಕರ್ತರು ಬೆಂಬಲಿಗರು ಅದರ ಫೋಟೊ ವಿಡಿಯೊ ಮಾಡಿಕೊಂಡರು. ಕೆಲವರು ಕಾರ್ಯಕ್ರಮ ಮುಗಿದ ನಂತರ ಬೇಸಾಯದ ಕೆಲಸಕ್ಕೆ ಬಳಸಬಹುದೆಂದು ಫ್ಲೆಕ್ಸ್ ಹರಿದು ಕೊಂಡೊಯ್ದರು. ‍ಪಟ್ಟಿಗಳು ಬಿದಿರು ಹಚ್ಚೆಗಳನ್ನು ಹೊತ್ತೊಯ್ದರು.

ಪಾದಯಾತ್ರೆಗೆ ಸೇರಿದ್ದವರು ವೇದಿಕೆಗೆ ಬರಲಿಲ್ಲ!

‘ಮೈಸೂರು ಚಲೋ’ ಪಾದಯಾತ್ರೆಗೆ ಸೇರಿದ್ದ ಜನರು ಸಮಾವೇಶ ನಡೆಯುತ್ತಿದ್ದ ವೇದಿಕೆಯತ್ತ ಬರಲಿಲ್ಲ. ಅದರಿಂದ ಸಮಾವೇಶ ಖಾಲಿ ಕುರ್ಚಿಮಯವಾಗಿತ್ತು. ಮಧ್ಯಾಹ್ನದ ಊಟದ ಹೊತ್ತಿಗೆ ಕಾರ್ಯಕ್ರಮ ಆರಂಭವಾದ್ದರಿಂದ ನಾಗರಿಕರು ನಿರಾಶರಾದರು. ಈ ವೇಳೆ ಭೋಜನದ ವ್ಯವಸ್ಥೆ ಮಾಡಿದ್ದರಿಂದ ಊಟದ ಪೊಟ್ಟಣಗಳನ್ನು ಪಡೆಯಲು ಸಮಾವೇಶದಿಂದ ಹೊರ ನಡೆದರು. ಕಾರ್ಯಕ್ರಮದ ಕೊನೆ ವೇಳೆಗೆ ವೇದಿಕೆ ಮುಂಭಾಗ ಹಾಕಿದ್ದ ಕುರ್ಚಿಗಳು ಬಿಟ್ಟರೆ ಹಿಂದಿನ ಸಾಲುಗಳ ಕುರ್ಚಿಗಳು ಖಾಲಿಯಾಗಿದ್ದವು. ಕೃಷ್ಣರಾಜ ಬುಲೆವಾರ್ಡ್ (ಕೋರ್ಟ್‌ ರಸ್ತೆ) ರಸ್ತೆ ವಿಭಜಕದ ಮಧ್ಯದಲ್ಲಿಯೇ ಹಲವರು ಕುಳಿತರು. ಮತ್ತೆ ಹಲವರು ಊಟ ಪಡೆದು ಕರೆತಂದ ಬಸ್‌ಗಳತ್ತ ಹೆಜ್ಜೆ ಹಾಕಿದರು.

ಊಟದ ಪೊಟ್ಟಣಕ್ಕೆ ಮುಗಿಬಿದ್ದರು‌

ತರಕಾರಿ ಬಾತ್‌ ಹಾಗೂ ಮೈಸೂರು ಪಾಕ್‌ ಇದ್ದ ಆಹಾರ ಪೊಟ್ಟಣಕ್ಕೆ ಜನರು ಮುಗಿಬಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಹಲವರು ಪೊಟ್ಟಣಗಳನ್ನು ತಂದ ವಾಹನಗಳೇರಿ ಕೊಂಡೊಯ್ದರು. ಆಹಾರವೂ ಚೆಲ್ಲಿತು.  ಕೃಷ್ಣಬುಲೇವಾರ್ಡ್ ರಸ್ತೆಯುದ್ಧಕ್ಕೂ ಪೊಟ್ಟಣದ ರಾಶಿ ಬಿದ್ದಿತ್ತು. ಆಹಾರ ಹಂಚಿದ ನಂತರ ರಟ್ಟಿನ ಬಾಕ್ಸ್‌ಗಳನ್ನು ಜನರತ್ತಲೇ ಎಸೆದರು. ಪೌರಕಾರ್ಮಿಕರು ಸಮಾವೇಶದ ನಂತರ ಇಡೀ ರಸ್ತೆಯನ್ನೇ ಗುಡಿಸಬೇಕಾಯಿತು.  ನೀರಿನ ಬಾಟಲಿಗಳು ಮಜ್ಜಿಗೆ ಪ್ಯಾಕೆಟ್‌ ಆಹಾರ ಪೊಟ್ಟಣಗಳ ತ್ಯಾಜ್ಯ ರಾಶಿರಾಶಿಯಾಗಿ ಮೈದಾನವಿಡೀ ಬಿದ್ದಿತ್ತು. ಕಸದ ಡಬ್ಬಿಗಳ ವ್ಯವಸ್ಥೆ ಮಾಡದಿದ್ದರಿಂದ ಎಲ್ಲೆಂದರಲ್ಲಿ ಬಿಸಾಡಿದರು.

ವ್ಯಾಪಾರಿಗಳಿಗೆ ಸುಗ್ಗಿ

ಚಾಮರಾಜ ಜೋಡಿ ರಸ್ತೆ ಜೆಎಲ್‌ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಮಳಿಗೆಗಳ ವ್ಯಾಪಾರ ಎಂದಿನಂತೆ ನಡೆಯಿತು. ಬೇಕರಿ ನಂದಿನಿ ಬೂತ್ ಟೀ ಅಂಗಡಿಗಳಿಗೆ ಕುರಕಲು ತಿಂಡಿ ಪಾನೀಯ ಕೊಳ್ಳಲು ಜನರು ಲಗ್ಗೆಯಿಟ್ಟರು. ಮಹಾರಾಜ ಕಾಲೇಜು ಮೈದಾನದ ನಂದಿನಿ ಬೂತ್ ಲಸ್ಸಿ ಮಜ್ಜಿಗೆ ಪೊಟ್ಟಣಗಳು ಬೇಗನೆ ಖಾಲಿಯಾದವು. ಚುರುಮುರಿ ನೆಲಗಡಲೆ ಸೌತೆಕಾಯಿ ಐಸ್‌ಕ್ರೀಂ ಕಬ್ಬಿನ ಜ್ಯೂಸ್‌ ಎಳನೀರು ತಂಪು ಪಾನೀಯಗಳು ಸೇರಿದಂತೆ ವಿವಿಧ ತಿನಿಸುಗಳ ಮಾರಾಟಗಾರರಿಗೆ ಭರ್ಜರಿ ವ್ಯಾಪಾರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT