ಮಂಗಳವಾರ, ನವೆಂಬರ್ 29, 2022
21 °C

ದಸರಾ ‘ಚಲನಚಿತ್ರೋತ್ಸವ’ಕ್ಕೆ ನೀರಸ ಚಾಲನೆ! ಶಿವಣ್ಣ ಬರದಿದ್ದಕ್ಕೆ ಅಭಿಮಾನಿಗಳ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಸರಾ ಅಂಗವಾಗಿ ಆಯೋಜಿಸಿರುವ ಚಲನಚಿತ್ರೋತ್ಸವಕ್ಕೆ ಸೋಮವಾರ ನೀರಸ ಚಾಲನೆ ದೊರೆಯಿತು.

ಕಲಾಮಂದಿರದಲ್ಲಿ ಚಲನಚಿತ್ರೋತ್ಸವ ಉಪ ಸಮಿತಿಯಿಂದ ನಡೆದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ನೆರವೇರಿಸಿದರು. ಒಂದು ತಾಸು ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ, ಕಾಲೇಜುಗಳ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಚಿವರು ಮಾತನಾಡುತ್ತಿದ್ದಾಗಲೇ ಬಹುತೇಕರು, ಸಭಾಂಗಣದಿಂದ ಹೊರ ನಡೆದರು.

ಉತ್ಸವವನ್ನು ನಟ ಶಿವರಾಜ್‌ ಕುಮಾರ್‌ ಉದ್ಘಾಟಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದರು. ಕೊನೆ ಕ್ಷಣದಲ್ಲಿ ರದ್ದಾಗಿದ್ದರಿಂದ ಅಭಿಮಾನಿಗಳು ನಿರಾಸೆ ಅನುಭವಿಸಿದರು.

ಅಪ್ಪು ನಮನ:

ಚಲನಚಿತ್ರೋತ್ಸವದ ಮಾಹಿತಿ ಒಳಗೊಂಡ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ‘ಹಲವು ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಒಂದು ದಿನ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರಗಳನ್ನೇ ಪ್ರದರ್ಶಿಸುವಂತೆ ಸೂಚಿಸಿದ್ದೇನೆ’ ಎಂದರು.

‘ಕೋವಿಡ್ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಸರಳ ದಸರಾ ಆಚರಣೆ ಮಾಡಲಾಗಿತ್ತು. ಆದರೆ, ಈ ವರ್ಷ ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಯುವ ದಸರಾದಲ್ಲಿ ‘ಅಪ್ಪು ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ವಿಶೇಷ ಅತಿಥಿಯಾಗಿದ್ದ ನಟಿ ಅನು ಪ್ರಭಾಕರ್ ಮಾತನಾಡಿ, ‘2007ರಲ್ಲಿ ಪಾರ್ವತಮ್ಮ ರಾಜಕುಮಾರ್, ಎಂ.ಪಿ.ಶಂಕರ್ ಜೊತೆ ಬಂದು ಚಲನಚಿತ್ರೋತ್ಸವ ಉದ್ಘಾಟಿಸಿದ್ದೆ. ಮೈಸೂರಿಗೆ ಅದರಲ್ಲೂ ದಸರಾ ಸಂದರ್ಭದಲ್ಲಿ ಬರಲು ಬಹಳ ಖುಷಿಯಾಗುತ್ತದೆ’ ಎಂದರು.

ಅಪ್ಪು ಅಮರ:

‘ಅಪ್ಪು ಸದಾ ನಮ್ಮೆಲ್ಲರ ಹೃದಯದಲ್ಲಿ ಇರುತ್ತಾರೆ. ಅವರು ಅಮರ. ಚಲನಚಿತ್ರೋತ್ಸವದಲ್ಲಿ ಒಂದು ದಿನವನ್ನು ಅವರಿಗೆ ಅರ್ಪಿಸಿರುವುದು‌ ಅಭಿನಂದನಾರ್ಹ. ಕನ್ನಡ ಚಲನಚಿತ್ರ ರಂಗಕ್ಕೆ ಜನರು ಪ್ರೋತ್ಸಾಹ ಮುಂದುವರಿಸಬೇಕು’ ಎಂದು ಹೇಳಿದರು.

‘ಇದೇ ಮೊದಲ ಬಾರಿಗೆ ಈ‌ ಚಲನಚಿತ್ರೋತ್ಸವ ಉದ್ಘಾಟನೆಯಲ್ಲಿ ಭಾಗವಹಿಸಿದ್ದೇನೆ. ಮೈಸೂರಿಗೆ ಬರುವುದಕ್ಕೆ ಖುಷಿಯಾಗುತ್ತದೆ’ ಎಂದು ನಟಿ ಕಾವ್ಯಾ ಶೆಟ್ಟಿ ತಿಳಿಸಿದರು.

ನಟಿ ಅಮೃತಾ ಅಯ್ಯಂಗಾರ್ ಮಾತನಾಡಿ, ‘4–5 ವರ್ಷಗಳ ಹಿಂದೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೆ. ಈಗ, ಅತಿಥಿಯಾಗಿ ಪಾಲ್ಗೊಂಡಿರುವುದಕ್ಕೆ ಹೆಮ್ಮೆ ಇದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ‘ನಟ ಯಶ್ ಕಾರಣದಿಂದ ಕನ್ನಡ ಚಿತ್ರವನ್ನು ಇಡೀ ವಿಶ್ವವೇ ನೋಡುವಂತಾಯಿತು. ಬಾಲನಟನಾಗಿ ವೃತ್ತಿ ಆರಂಭಿಸಿ ಎತ್ತರಕ್ಕೆ ಬೆಳೆದ ಅಪ್ಪುಗೆ ದಸರೆಯಲ್ಲಿ ವಿಶೇಷ ಗೌರವವನ್ನು ಸಲ್ಲಿಸುತ್ತಿದ್ದೇವೆ’ ಎಂದರು.

ಮೈಲ್ಯಾಕ್ ಅಧ್ಯಕ್ಷ ರಘು ಕೌಟಿಲ್ಯ ‘ಅಪ್ಪು’ ಕುರಿತು ಎರಡು ಹನಿಗವನ ವಾಚಿಸಿದರು.

ಚಲನಚಿತ್ರ ನಿರ್ದೇಶಕ ಪ್ರವೀಣ್ ಕೃಪಾಕರ್ ಅವರನ್ನು ಸನ್ಮಾನಿಸಲಾಯಿತು.

ಮೇಯರ್ ಶಿವಕುಮಾರ್, ಉಪ ಮೇಯರ್‌ ಡಾ.ರೂಪಾ ಯೋಗೇಶ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಮಂಜುನಾಥಸ್ವಾಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಇದ್ದರು.

ಇದಕ್ಕೂ ಮುನ್ನ ಸುಮಂತ್ ವಶಿಷ್ಠ, ಅಮೂಲ್ಯಾ ಹಾಗೂ ತಂಡದವರು ಚಲನಚಿತ್ರ ಗೀತೆಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಅಪ್ಪು ಗೀತೆಗಳಿಗೆ ಮೊಬೈಲ್‌ ಫೋನ್‌ ಟಾರ್ಚ್‌ ಲೈಟ್‌ ಆನ್ ಮಾಡಿ ನಮನ ಸಲ್ಲಿಸಿದರು.

ಸೆ.27ರಿಂದ ಡಿಆರ್‌ಸಿ ಮತ್ತು ಐನಾಕ್ಸ್‌ನ 3 ಪರದೆಗಳಲ್ಲಿ ಕನ್ನಡ, ಭಾರತೀಯ ಹಾಗೂ ವಿಶ್ವಚಿತ್ರಗಳು ಪ್ರದರ್ಶನಗೊಳ್ಳಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು