ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರಾ: ಮಾಹಿತಿ ಕೊರತೆಯ ‘ವೆಬ್‌ಸೈಟ್’ ಅನಾವರಣ!

Published : 22 ಸೆಪ್ಟೆಂಬರ್ 2024, 5:56 IST
Last Updated : 22 ಸೆಪ್ಟೆಂಬರ್ 2024, 5:56 IST
ಫಾಲೋ ಮಾಡಿ
Comments

ಮೈಸೂರು: ದಸರೆಗೆ ಕೆಲವೇ ದಿನಗಳು ಇರುವಾಗ ಜಿಲ್ಲಾಡಳಿತದಿಂದ ವಿನ್ಯಾಸಗೊಳಿಸಿ ಅನಾವರಣಗೊಳಿಸಿರುವ ಅಧಿಕೃತ ಜಾಲತಾಣದಲ್ಲಿ (https://www.mysoredasara.gov.in) ಮಾಹಿತಿ ಕೊರತೆ ಎದ್ದು ಕಾಣುತ್ತಿದೆ.

ಜಾಲತಾಣವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ದಸರಾ ಬಗ್ಗೆ ಹಾಗೂ ಪ್ರವಾಸಿ ತಾಣಗಳ ಕುರಿತು ಕಿರುಪರಿಚಯ ಹಾಕಲಾಗಿದೆ.

ಗಜಪಡೆಯ ಪರಿಚಯವನ್ನು ಫೋಟೊಸಹಿತ ನೀಡಲಾಗಿದೆ. ಉಪ ಸಮಿತಿಗಳ ವಿವರವಿದೆ. ಏನೇನು ಕಾರ್ಯಕ್ರಮಗಳು ನಡೆಯುತ್ತವೆ ಎಂಬುದರ ಮಾಹಿತಿಯನ್ನು ಇನ್ನೂ ಹಾಕಿಲ್ಲ. ಕಾರ್ಯಕ್ರಮಗಳು ನಡೆಯುವ ಸ್ಥಳಗಳ ಪಟ್ಟಿ ನೀಡಲಾಗಿದ್ದು, ಫಲಪುಷ್ಪ ಪ್ರದರ್ಶನ ಎಲ್ಲಿ ನಡೆಯುತ್ತದೆ ಎಂಬ ಮಾಹಿತಿ ಹಾಕಿಲ್ಲ.

ವೈಮಾನಿಕ ಪ್ರದರ್ಶನವು ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಆದರೆ, ದಿನಾಂಕ ನಮೂದಿಸಿಲ್ಲ.

ಗೋಲ್ಡ್‌ ಕಾರ್ಡ್‌ ಹಾಗೂ ವಿವಿಧ ಟಿಕೆಟ್‌ಗಳ ಬುಕ್ಕಿಂಗ್ ವಿಭಾಗವಿದೆ. ಆದರೆ, ಅದರಲ್ಲಿ ಹೋದ ವರ್ಷದ ದಸರಾ ಮಾಹಿತಿಯ ಪೇಜ್‌ ತೆರೆದುಕೊಳ್ಳುತ್ತಿದೆ! ಕೆಳಭಾಗದಲ್ಲಿ ‘ಕಾರ್ಯಕ್ರಮದ ವಿವರ ಲಭ್ಯವಿಲ್ಲ’ ಎಂದು ಪ್ರದರ್ಶನಗೊಳ್ಳುತ್ತಿದೆ.

ದಸರಾ ಅ.3ಕ್ಕೆ ಆರಂಭವಾಗಿ ಅ.12ರಂದು ಮುಕ್ತಾಯವಾಗುತ್ತದೆ. ಆದರೆ, ಜಾಲತಾಣದಲ್ಲಿನ ‘ಚಿತ್ರ ಸಂಪುಟ’ ವಿಭಾಗದಲ್ಲಿ ಅ.16ರ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂಬ ಮಾಹಿತಿಯನ್ನು ಹಾಕಲಾಗಿದೆ! ಯಾವುದೇ ಫೋಟೊಗಳು ಕೂಡ ಅದರಲ್ಲಿಲ್ಲ. ಅಂತೆಯೇ ವಿವಿಧ ವಿಭಾಗಗಳ ಮಾಹಿತಿ ಖಾಲಿಯೇ ಇದೆ. ನಾಡಹಬ್ಬವನ್ನು ಉದ್ಘಾಟಿಸಲಿರುವ ಸಾಹಿತಿ ಹಂ.ಪ. ನಾಗರಾಜಯ್ಯ ಅವರ ಫೋಟೊ ಮತ್ತು ಹೆಸರನ್ನಷ್ಟೆ ಹಾಕಲಾಗಿದೆ.

ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಅರಮನೆ, ಚಾಮುಂಡೇಶ್ವರಿ ದೇವಸ್ಥಾನ, ಜಿಲ್ಲಾ ಜಾಲತಾಣ ಹಾಗೂ ಮೃಗಾಲಯದ ಜಾಲತಾಣಗಳ ಲಿಂಕ್‌ಗಳನ್ನು ಕೊಡಲಾಗಿದೆ.

‘ತರಾತುರಿಯಲ್ಲಿ ಸಿದ್ಧಪಡಿಸಿರುವ ಅಪೂರ್ಣ ಜಾಲತಾಣದಿಂದ ಪ್ರಯೋಜನವಿಲ್ಲ. ಪ್ರವಾಸಿಗರಿಗೆ ಸಂಪೂರ್ಣ ಮಾಹಿತಿ ದೊರೆತರೆ ಅವರು ಪ್ಲಾನ್‌ ಮಾಡಿಕೊಳ್ಳುವುದಕ್ಕೆ ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರವಾಸಿ ಸ್ನೇಹಿಯಾಗಿ ವೆಬ್‌ಸೈಟ್ ಸಿದ್ಧಪಡಿಸಬೇಕು’ ಎನ್ನುವುದು ಪ್ರವಾಸೋದ್ಯಮ ಭಾಗೀದಾರರ ಒತ್ತಾಯವಾಗಿದೆ.

‘ಹಂತ ಹಂತವಾಗಿ ಅಪ್‌ಡೇಟ್’
‘ಉತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳು ಇನ್ನೂ ಅಂತಿಮಗೊಂಡಿಲ್ಲ. ಆಹ್ವಾನ ಪತ್ರಿಕೆಯ ಮುದ್ರಣ ಕಾರ್ಯವೂ ಆಗಿಲ್ಲ. ಇದರಿಂದಾಗಿ ಸಂಪೂರ್ಣ ಮಾಹಿತಿಯನ್ನು ಹಾಕುವುದಕ್ಕೆ ಸಾಧ್ಯವಾಗಿಲ್ಲ. ಕಾರ್ಯಕ್ರಮ ಪಟ್ಟಿಯನ್ನು ಹಂತ ಹಂತವಾಗಿ ಅಪ್‌ಡೇಟ್ ಮಾಡಲಾಗುವುದು’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT