ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಶ್ರೀಕಂಠದತ್ತ ಹಾದಿಯಲ್ಲಿ ಯದುವೀರ್‌

1,39,262 ಮತಗಳ ಅಂತರದಿಂದ ಭರ್ಜರಿ ಜಯ; ಬಿಜೆಪಿ–ಜೆಡಿಎಸ್‌ ಕೂಟಕ್ಕೆ ಯಶಸ್ಸು
Published 4 ಜೂನ್ 2024, 14:12 IST
Last Updated 4 ಜೂನ್ 2024, 14:12 IST
ಅಕ್ಷರ ಗಾತ್ರ

ಮೈಸೂರು: ಬರೋಬ್ಬರಿ 1,39,262 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿರುವ 32 ವರ್ಷ ವಯಸ್ಸಿನ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ‘ಜನಾದೇಶ’ದ ಮೂಲಕ ಆಯ್ಕೆಯಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ದೋಸ್ತಿಗೆ ಫಲ ಸಿಕ್ಕಿರಲಿಲ್ಲ. ಈ ಬಾರಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ–ಜೆಡಿಎಸ್‌ ಕೂಟಕ್ಕೆ ಅಭೂತಪೂರ್ವ ಜಯ ದೊರೆತಿದೆ.

ಮೈಸೂರು ರಾಜವಂಶಸ್ಥ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಾಲ್ಕು ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಎರಡು ಬಾರಿ ಪರಾಜಿತರಾಗಿದ್ದರು. ಅವರ ನಿಧನದ ಬಳಿಕ ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ಅವರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದತ್ತು ತೆಗೆದುಕೊಂಡಿದ್ದರು. ಯದುವೀರ್ ಅವರು ಶ್ರೀಕಂಠದತ್ತ ಅವರಂತೆಯೇ ಮೊದಲ ಯತ್ನದಲ್ಲಿಯೇ ಲೋಕಸಭೆ ಪ್ರವೇಶಿಸಿದ್ದಾರೆ. ಮೈಸೂರು ರಾಜಮನೆತನದವರ ಬಗ್ಗೆ ಜನರಲ್ಲಿರುವ ಗೌರವದ ಭಾವನೆಯು ಅವರನ್ನು ಗೆಲುವಿನತ್ತ ಕರೆದೊಯ್ದಿದೆ.

5ನೇ ಬಾರಿಗೆ ಅರಳಿದ ಕಮಲ: ‘ನಮ್ಮ ಪಕ್ಷದವರು ಗೆಲ್ಲದಿದ್ದರೂ ಪರವಾಗಿಲ್ಲ, ನಮ್ಮ ಕಡು ವೈರಿ ಸಿದ್ದರಾಮಯ್ಯ ಅವರಿಗೆ ಮುಖಭಂಗ ಆಗಬೇಕು’ ಎಂಬ ಜೆಡಿಎಸ್‌ ವರಿಷ್ಠರ ಉದ್ದೇಶವು ಈಡೇರಿದೆ.

ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಪಕ್ಷಕ್ಕೆ ಲೀಡ್ ದೊರೆಯುವಂತೆ ನೋಡಿಕೊಳ್ಳುವಲ್ಲಿ ತಮ್ಮ ತಂಡದೊಂದಿಗೆ ಶ್ರಮಿಸಿದ್ದಾರೆ. ಅಂತೆಯೇ, ಜೆಡಿಎಸ್‌ ಶಾಸಕರಿರುವ ಚಾಮುಂಡೇಶ್ವರಿ (ಜಿ.ಟಿ.ದೇವೇಗೌಡ) ಹಾಗೂ ಹುಣಸೂರು (ಜಿ.ಡಿ. ಹರೀಶ್‌ ಗೌಡ) ಕ್ಷೇತ್ರಗಳಲ್ಲೂ ಯದುವೀರ್‌ ಲೀಡ್ ಪಡೆದಿದ್ದಾರೆ. ಬಿಜೆಪಿಯ ಸಂಘಟನೆಯು ಅಷ್ಟೊಂದು ಬಲವಾಗಿಯೇನೂ ಇರಲಿಲ್ಲ; ಆದರೆ, ಅದಕ್ಕೆ ಕೈಜೋಡಿಸಿದ ಜೆಡಿಎಸ್‌ ಹೆಚ್ಚಿನ ಶಕ್ತಿ ತುಂಬಿದೆ. ಸಿದ್ದರಾಮಯ್ಯ ವಿರೋಧಿ ಬಣವು ‘ಗುಪ್ತಗಾಮಿನಿ’ಯಂತೆ ಹರಿದು ಕೆಲಸ ಮಾಡಿದೆ!

ಈ ಬಾರಿಯ ಗೆಲುವಿನೊಂದಿಗೆ ಬಿಜೆಪಿಯು ಕ್ಷೇತ್ರದಲ್ಲಿ 5ನೇ ಬಾರಿಗೆ ಗೆದ್ದಂತಾಗಿದೆ. ಈ ಹಿಂದೆ ಸಿ.ಎಚ್. ವಿಜಯಶಂಕರ್ ಹಾಗೂ ಪ್ರತಾಪ ಸಿಂಹ ತಲಾ ಎರಡು ಬಾರಿ ಬಿಜೆಪಿಯಿಂದ ಕಣಕ್ಕಿಳಿದು ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT