ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಪಾಲಿಕೆ ಅಧಿಕಾರಾವಧಿ ಅಂತ್ಯಕ್ಕೆ ದಿನಗಣನೆ

Published 10 ನವೆಂಬರ್ 2023, 7:28 IST
Last Updated 10 ನವೆಂಬರ್ 2023, 7:28 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮಹಾನಗರಪಾಲಿಕೆಯ ಸದಸ್ಯರ ಅಧಿಕಾರದ ಅವಧಿ ನ.16ಕ್ಕೆ ಕೊನೆಗೊಳ್ಳಲಿದ್ದು, ಚುನಾವಣೆಯ ಚರ್ಚೆಗಳು ಆರಂಭಗೊಂಡಿವೆ.

65 ಸದಸ್ಯ ಬಲದ (ವಾರ್ಡ್‌) ಈ ನಗರ ಸ್ಥಳೀಯ ಸಂಸ್ಥೆಗೆ 2018ರ ಆ.31ರಂದು ಚುನಾವಣೆ ಜರುಗಿತ್ತು. ಆಗ, ಯಾವೊಂದು ಪಕ್ಷವೂ ಸಂಪೂರ್ಣ ಬಹುಮತ ಗಳಿಸಿರಲಿಲ್ಲ. ಹೀಗಾಗಿ, ‘ಮೈತ್ರಿ’ಯದ್ದೇ ಅಧಿಕಾರ ನಡೆದಿದೆ. ಲೋಕಸಭಾ ಚುನಾವಣೆಗೆ ಬಿಜೆಪಿ–ಜೆಡಿಎಸ್ ಮೈತ್ರಿ ಘೋಷಣೆ ಆಗಿರುವುದರಿಂದ, ಪಾಲಿಕೆ ಚುನಾವಣೆಯಲ್ಲಿ ಈ ಪಕ್ಷಗಳ ಯಾವ ನಿಲುವು ತೆಗೆದುಕೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

ಐದು ವರ್ಷಗಳ ಆಡಳಿತದಲ್ಲಿ ಪಾಲಿಕೆಯು ಹಲವು ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಮೂರು ಪ್ರಮುಖ ಪಕ್ಷಗಳಿಗೂ ಅಧಿಕಾರ ಸಿಕ್ಕಿದ್ದು ವಿಶೇಷ.

ಮೇಯರ್‌–ಉಪ ಮೇಯರ್‌ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಬಿಜೆಪಿಯು ಇತಿಹಾಸ ಸೃಷ್ಟಿಸಿತು. ಮುಸ್ಲಿಂ ಮಹಿಳೆ ಮೇಯರ್‌ ಆಗುವ ಅವಕಾಶ ಒದಗಿಬಂದಿತು. ಮುಸ್ಲಿಂ ಮಹಿಳೆ ಉಪ ಮೇಯರ್‌ ಆಗುವುದು ಕೊನೆ ಕ್ಷಣದಲ್ಲಿ ಕೈತಪ್ಪಿತು. ಈ ಅವಧಿಯಲ್ಲಿ ಎರಡು ಉಪ ಚುನಾವಣೆಗಳು ನಡೆದವು. ಕೋವಿಡ್‌–19 ಸಂಕಷ್ಟ, ಲಾಕ್‌ಡೌನ್‌ ಅನ್ನೂ ಕಂಡಿತು.

ಮುಂದುವರಿದಿದ್ದಾರೆ: ಸದ್ಯ ಮೇಯರ್‌ ಆಗಿರುವ ಶಿವಕುಮಾರ್ ಹಾಗೂ ಉಪ ಮೇಯರ್‌ ಆಗಿರುವ ಜಿ.ರೂಪಾ ಯೋಗೇಶ್ ಅವರ ಅಧಿಕಾರದ ಅವಧಿ ಸೆ.5ಕ್ಕೆ ಮುಕ್ತಾಯಗೊಂಡಿದೆ. ಆದರೆ, ಸದಸ್ಯರ ಅಧಿಕಾರದ ಅವಧಿ ನ.16ರವರೆಗೆ ಇರುವುದರಿಂದ ಮೇಯರ್ ಹಾಗೂ ಉಪ ಮೇಯರ್‌ ಅಧಿಕಾರದಲ್ಲಿ ಮುಂದುವರಿದಿದ್ದಾರೆ.

2018ರ ನ.17ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅಂದು ಪಾಲಿಕೆ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಆದ್ದರಿಂದ, ಕೌನ್ಸಿಲ್‌ನ ಅಧಿಕಾರಾವಧಿ ನ.16ಕ್ಕೆ ಮುಕ್ತಾಯಗೊಳ್ಳುತ್ತಿದೆ. ಬಿಜೆಪಿಯ 22, ಕಾಂಗ್ರೆಸ್ 20, ಜೆಡಿಎಸ್ 17, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರ ಅಧಿಕಾರದ ಅವಧಿ ಕೊನೆಗೊಳ್ಳಲು ದಿನಗಣನೆ ಆರಂಭವಾಗಿದೆ.

ಬಿಜೆಪಿಗೆ ಅಧಿಕಾರದ ದಾಖಲೆ: ಪಾಲಿಕೆ ಇತಿಹಾಸದಲ್ಲಿ ಬಿಜೆಪಿ ಮೇಯರ್ ಗಾದಿ ಪಡೆದಿರಲಿಲ್ಲ. ಆದರೆ, ಈ ಬಾರಿಯ ಕೌನ್ಸಿಲ್‌ನಲ್ಲಿ ಎರಡು ಬಾರಿ ಆ ಸ್ಥಾನ ಗಳಿಸಿ ಅಧಿಕಾರದ ಗದ್ದುಗೆಗೇರಿದ್ದು ವಿಶೇಷ. ಆ ಪಕ್ಷದ ಸುನಂದಾ ಪಾಲನೇತ್ರ ಹಾಗೂ ಶಿವಕುಮಾರ್ ಅವಕಾಶ ಪಡೆದುಕೊಂಡರು.

ಪಾಲಿಕೆಯ ಇತಿಹಾಸದಲ್ಲಿ ಮೇಯರ್–ಉಪ ಮೇಯರ್ ಸ್ಥಾನ ಬಿಜೆಪಿಗೆ ಒಂದೇ ಅವಧಿಯಲ್ಲಿ ಸಿಕ್ಕಿರಲಿಲ್ಲ. ಈ ಬಾರಿಯ ರಾಜಕೀಯ ವಿದ್ಯಮಾನದಲ್ಲಿ ಎರಡೂ ಸ್ಥಾನಗಳು ಬಿಜೆಪಿಯ ಪಾಲಾದವು. ಮೇಯರ್ ಸ್ಥಾನವನ್ನು  ಶಿವಕುಮಾರ್ ಹಾಗೂ ಉಪ ಮೇಯರ್ ಸ್ಥಾನವನ್ನು ಜಿ. ರೂಪಾ ಯೋಗೇಶ್‌ ಗಳಿಸಿದರು. 4ನೇ ಅವಧಿಯಲ್ಲಿ ಉಪ ಮೇಯರ್ ಸ್ಥಾನವನ್ನು ಬಿಜೆಪಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಆದರೆ, ಬಿಸಿಎ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜೆಡಿಎಸ್‌ನ ರೇಷ್ಮಾ ಬಾನು ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರು ನಾಮಪತ್ರದ ಜತೆಗೆ ಜಾತಿ ಪ್ರಮಾಣಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕೃತಗೊಂಡಿತು. ಹೀಗಾಗಿ ಉಪ ಮೇಯರ್‌ ಗಾದಿ ರೂಪಾ ಪಾಲಾಯಿತು. ‘ಮೈತ್ರಿ’ಯಾದರೂ ಒಂದು ಸ್ಥಾನವನ್ನೂ ‍ಗಿಟ್ಟಿಸಿಕೊಳ್ಳಲಾಗದ ಸ್ಥಿತಿ ಜೆಡಿಎಸ್‌ನದಾಯಿತು! ಶಿವಕುಮಾರ್‌ ಅವರು ಎರಡು ದಸರೆಯ ವಿಜಯದಶಮಿ ಮೆರವಣಿಗೆಯಲ್ಲಿ ಕುದುರೆ ಸವಾರಿಯ ಅವಕಾಶವನ್ನೂ ಪಡೆದುಕೊಂಡರು.

ಮುಸ್ಲಿಂ ಮಹಿಳೆಗೆ ಗಾದಿ: ಈ ಪಾಲಿಕೆ ಇತಿಹಾಸದಲ್ಲಿ ಮುಸ್ಲಿಂ ಮಹಿಳೆ ಮೇಯರ್ ಸ್ಥಾನ ಅಲಂಕರಿಸಿದ ದಾಖಲೆಗೆ ಈ ಅವಧಿ ಸಾಕ್ಷಿಯಾಯಿತು. ಪ್ರಥಮ ಬಾರಿಗೆ ಜೆಡಿಎಸ್‌ನ ತಸ್ಲಿಂ ಮೇಯರ್‌ ಗಾದಿ ಪಡೆದು ಇತಿಹಾಸ ನಿರ್ಮಿಸಿದರು. ಆದರೆ, ಅವರ ಅಧಿಕಾರದ ಅವಧಿಯ ಮೇಲೆ ಕೋವಿಡ್ ಲಾಕ್‌ಡೌನ್‌ ಕಾರ್ಮೋಡವೇ ಕವಿಯಿತು.

ವಾರ್ಡ್ ನಂ.18ರಿಂದ (ಯಾದವಗಿರಿ) ಆಯ್ಕೆಯಾಗಿದ್ದ ಬಿಜೆಪಿಯ ಗುರುವಿನಾಯಕ ನಕಲಿ ಜಾತಿ ಪ್ರಮಾಣಪತ್ರ ನೀಡಿದ್ದರಿಂದ ಸದಸ್ಯತ್ವ ಕಳೆದುಕೊಂಡರು. ಇದರಿಂದ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಬಿ.ವಿ. ರವೀಂದ್ರ ಗೆದ್ದರು. ಚುನಾವಣೆಯ ಪ್ರಮಾಣಪತ್ರದಲ್ಲಿ ಆಸ್ತಿ ವಿವರ ಮರೆಮಾಚಿದ್ದರಿಂದ 36ನೇ ವಾರ್ಡ್‌ನ (ಯರಗನಹಳ್ಳಿ  ಅಂಬೇಡ್ಕರ್ ಕಾಲೊನಿ) ಆಯ್ಕೆಯಾಗಿದ್ದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಸದಸ್ಯತ್ವ ಕಳೆದುಕೊಂಡರು. ತೆರವಾದ ಸ್ಥಾನಕ್ಕೆ 2021ರ ಸೆ.3ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಜನಿ ಅಣ್ಣಯ್ಯ ಜಯಿಸಿದರು.

ಬಿ.ಎಸ್. ಸುರೇಶ್‌
ಬಿ.ಎಸ್. ಸುರೇಶ್‌
ಶಿವಕುಮಾರ್
ಶಿವಕುಮಾರ್
2018ರಲ್ಲಿ ನಡೆದಿದ್ದ ಚುನಾವಣೆ ಮೂರು ಪಕ್ಷಗಳಿಗೂ ಸಿಕ್ಕ ಅಧಿಕಾರ 4ನೇ ಅವಧಿಯಲ್ಲಿ ಮೇಯರ್–ಉಪ ಮೇಯರ್ ಗಾದಿ ಬಿಜೆಪಿ ಪಾಲು
ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡ ಸಮಾಧಾನವಿದೆ. ಇನ್ನೂ ಒಂದಿಷ್ಟು ಕೆಲಸಗಳನ್ನು ಮಾಡಬಹುದಿತ್ತು. ಚುನಾವಣೆಗೆ ಬಿಜೆಪಿ ಸಿದ್ಧವಿದೆ
ಶಿವಕುಮಾರ್ ಮೇಯರ್‌
ಪಾಲಿಕೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇವೆ. ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ. ಈಗಾಗಲೇ ಸಿದ್ಧತೆ ನಡೆಸುತ್ತಿದ್ದೇವೆ
ಬಿ.ಎಸ್. ಸುರೇಶ್ ನಗರಾಭಿವೃದ್ಧಿ ಸಚಿವ
ಯಾರ‍್ಯಾರಿಗೆ ಅಧಿಕಾರ?
* ಮೊದಲ ಅವಧಿಯಲ್ಲಿ ಕಾಂಗ್ರೆಸ್‌ನ ಪುಷ್ಪಾಲತಾ ಜಗನ್ನಾಥ್ ಮೇಯರ್ ಜೆಡಿಎಸ್‌ನ ಶಫಿ ಅಹಮ್ಮದ್ ಉಪ ಮೇಯರ್. * 2ನೇ ಅವಧಿಯಲ್ಲಿ ಜೆಡಿಎಸ್‌ನ ತಸ್ಲಿಂ ಮೇಯರ್ ಕಾಂಗ್ರೆಸ್‌ನ ಸಿ.ಶ್ರೀಧರ್ ಉಪ ಮೇಯರ್. * 3ನೇ ಅವಧಿಯಲ್ಲಿ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಮೇಯರ್ ಕಾಂಗ್ರೆಸ್‌ನ ಅನ್ವರ್ ಬೇಗ್ ಉಪ ಮೇಯರ್ ಆಗಿದ್ದರು. ಅಫಿಡವಿಟ್‌ನಲ್ಲಿ ಆಸ್ತಿ ವಿವರ ಮರೆಮಾಚಿದ್ದ ರುಕ್ಮಿಣಿ ಮಾದೇಗೌಡ ಸದಸ್ಯತ್ವವನ್ನು ಹೈಕೋರ್ಟ್ ವಜಾಗೊಳಿಸಿದ್ದರಿಂದ ಉಪ ಮೇಯರ್‌ ಅನ್ವರ್ ಬೇಗ್ ಅವರಿಗೆ ಮೇಯರ್‌ ಆಗುವ ಅವಕಾಶ ಸಿಕ್ಕಿತು. ನಂತರ ಮೇಯರ್ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಯ ಸುನಂದಾ ಪಾಲನೇತ್ರ ಗೆದ್ದರು. * 4ನೇ ಅವಧಿಗೆ ಬಿಜೆಪಿಯ ಶಿವಕುಮಾರ್ ಮೇಯರ್ ಬಿಜೆಪಿಯ ಜಿ. ರೂಪಾ ಉಪ ಮೇಯರ್ ಅಗಿ ಆಯ್ಕೆಯಾದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದ ವೇಳೆ ಪಾಲಿಕೆಯ ಮೊದಲ ಎರಡು ಅವಧಿಯಲ್ಲಿ ಈ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಆಗಿತ್ತು. ಆಗ ಕ್ರಮವಾಗಿ ಪುಷ್ಪಾಲತಾ ಜಗನ್ನಾಥ್ (ಕಾಂಗ್ರೆಸ್)– ಶಫಿ ಅಹಮ್ಮದ್ (ಜೆಡಿಎಸ್) ಹಾಗೂ ತಸ್ಲಿಂ (ಜೆಡಿಎಸ್) ಮತ್ತು ಸಿ.ಶ್ರೀಧರ್ (ಕಾಂಗ್ರೆಸ್) ಮೇಯರ್‌ ಉಪ ಮೇಯರ್‌ ಆಗಿದ್ದರು. 3ನೇ ಅವಧಿಯ ಮೇಯರ್–ಉಪ ಮೇಯರ್ ಚುನಾವಣೆ ವೇಳೆಗೆ ಮೈತ್ರಿ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಒಪ್ಪಂದದ ಪ್ರಕಾರ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್ ಆಸಕ್ತಿ ತೋರಲಿಲ್ಲ. ಕಾಂಗ್ರೆಸ್‌ಗೆ ಮೇಯರ್ ಸ್ಥಾನ ನೀಡದಿದ್ದರೆ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳಬಾರದು ಎಂದು ಆಗಿನ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚಿಸಿದ್ದರೂ ಶಾಸಕ ತನ್ವೀರ್ ಸೇಠ್ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟರು. ಈ ಬೆಳವಣಿಗೆಯಿಂದ ಸಿದ್ದರಾಮಯ್ಯ ಅವರು ತವರಿನಲ್ಲೇ ಮುಖಭಂಗ ಅನುಭವಿಸಬೇಕಾಯಿತು. 3ನೇ ಅವಧಿಯಲ್ಲಿ ಮೇಯರ್ ಆಗಿ ಆಯ್ಕೆಗೊಂಡಿದ್ದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಅವರು ಚುನಾವಣೆ ಪ್ರಮಾಣಪತ್ರದಲ್ಲಿ ಆಸ್ತಿ ವಿವರ ಮರೆ ಮಾಚಿದ್ದರಿಂದ ಸದಸ್ಯತ್ವ ಕಳೆದುಕೊಂಡರು. ನಂತರ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಜೆಡಿಎಸ್‌ ಜೊತೆಗೆ ಅಂತರ ಕಾಯ್ದುಕೊಂಡರು. ಹೀಗಾಗಿ ಮೇಯರ್ ಸ್ಥಾನಕ್ಕೆ ಜೆಡಿಎಸ್ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಹೆಚ್ಚು ಮತ ಗಳಿಸಿದ ಬಿಜೆಪಿಯ ಸುನಂದಾ ಪಾಲನೇತ್ರ ಮೇಯರ್ ಗಾದಿಗೇರಿದ್ದರು. 4ನೇ ಅವಧಿಯ ಮೇಯರ್ ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದು ಹಿಡಿದು ಜೆಡಿಎಸ್ ಸಹಯೋಗದಲ್ಲಿ ಅಧಿಕಾರ ಪಡೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT