ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ‘ಪ್ಲಾಸ್ಟಿಕ್‌ ಮುಕ್ತ ವಸ್ತುಪ್ರದರ್ಶನ’ಕ್ಕೆ ಯೋಜನೆ

ಕೆಇಎನಿಂದ ಪ್ರವಾಸಿಗರಿಗೆ ಗೇಟ್‌ನಲ್ಲೇ ಬಟ್ಟೆ ಬ್ಯಾಗ್‌ ವಿತರಣೆ
Published : 9 ಸೆಪ್ಟೆಂಬರ್ 2024, 6:43 IST
Last Updated : 9 ಸೆಪ್ಟೆಂಬರ್ 2024, 6:43 IST
ಫಾಲೋ ಮಾಡಿ
Comments

ಮೈಸೂರು: ನಾಡಹಬ್ಬ ಮೈಸೂರು ದಸರೆಯ ಆಕರ್ಷಣೆಗಳಲ್ಲಿ ಒಂದಾದ ಹಾಗೂ ಉತ್ಸವದ ನಂತರವೂ ಮುಂದುವರಿದು ಪ್ರವಾಸಿಗರನ್ನು ಆಕರ್ಷಿಸುವ ವಸ್ತುಪ್ರದರ್ಶನವನ್ನು ಈ ಬಾರಿ ‘‍ಪ್ಲಾಸ್ಟಿಕ್‌ ಮುಕ್ತ’ವಾಗಿ ನಡೆಸಲು ಯೋಜಿಸಲಾಗಿದೆ.

ಈ ಬಾರಿಯೂ 90 ದಿನಗಳವರೆಗೆ ‘ದಸರಾ ವಸ್ತುಪ್ರದರ್ಶನ’ ಇರಲಿದ್ದು, ಪ್ರವಾಸಿಗರನ್ನು ಸೆಳೆಯಲು ಹಲವು ಆಕರ್ಷಣೆಗಳನ್ನು ಜೋಡಿಸಲು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ನಿರ್ಧರಿಸಿದೆ. ಮುಖ್ಯವಾಗಿ ಪ್ಲಾಸ್ಟಿಕ್‌ ಹಾವಳಿಗೆ ಕಡಿವಾಣ ಹಾಕಿ ‘‍ಪರಿಸರ ಸ್ನೇಹಿ’ಯನ್ನಾಗಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಎಂದಿನಂತೆ ಆಯೋಜನೆಯನ್ನು ಖಾಸಗಿ ಕಂಪನಿಗೆ ವಹಿಸಲು ಟೆಂಡರ್‌ ಆಹ್ವಾನಿಸಲಾಗಿದೆ. ₹9.77 ಕೋಟಿ ಬಿಡ್ ಮಾಡಲಾಗಿದೆ. ಹೋದ ವರ್ಷ ‘ಫನ್‌ವರ್ಲ್ಡ್‌’ ಕಂಪನಿಯು ₹11.52 ಕೋಟಿಗೆ ಟೆಂಡರ್‌ ಪಡೆದುಕೊಂಡಿತ್ತು. ಈ ಬಾರಿ ನಾಡಹಬ್ಬವನ್ನು ‘ಅಧಿಕೃತವಾಗಿಯೇ ಅದ್ದೂರಿಯಾಗಿ’ ಆಯೋಜಿಸಲು ಸರ್ಕಾರ ನಿರ್ಧರಿಸಿರುವುದರಿಂದಾಗಿ ಹೆಚ್ಚಿನ ಪ್ರವಾಸಿಗರನ್ನು ನಿರೀಕ್ಷಿಸಲಾಗುತ್ತಿದೆ. ಪ್ರತಿ ವರ್ಷ ಸರಾಸರಿ 15 ಲಕ್ಷ ಮಂದಿ ಪ್ರವಾಸಿಗರು ಭೇಟಿ ಕೊಡುತ್ತಾರೆ.

ವಿವಿಧ ಮಳಿಗೆಗಳಲ್ಲಿ ರಾಜ್ಯ ಸರ್ಕಾರದ ಜನಪರ ಯೋಜನೆಗಳು, ‘ಅನ್ನಭಾಗ್ಯ’, ‘ಗೃಹಲಕ್ಷ್ಮಿ’, ‘ಗೃಹಜ್ಯೋತಿ’, ‘ಶಕ್ತಿ’, ‘ಯುವನಿಧಿ’ಯಂತಹ ‘ಗ್ಯಾರಂಟಿ’ ಕಾರ್ಯಕ್ರಮಗಳಿಂದ ಆಗಿರುವ ಪ್ರಯೋಜನವನ್ನು ಬಿಂಬಿಸುವುದಕ್ಕೆ ಯೋಜಿಸಲಾಗಿದೆ. ಮರಳು ಶಿಲ್ಪಗಳು ಈ ಬಾರಿಯೂ ಇರಲಿವೆ.

ಬಟ್ಟೆ ಬ್ಯಾಗ್ ವಾಗ್ದಾನ: ‘ಈ ಬಾರಿಯ ದಸರಾ ವಸ್ತುಪ್ರದರ್ಶನದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆಗೆ ಅವಕಾಶ ಕೊಡುವುದಿಲ್ಲ. ಏಕ ಬಳಕೆಯ ಪ್ಲಾಸ್ಟಿಕ್‌ ಕವರ್‌ ಹಾಗೂ ಬಾಟಲಿ ಮೊದಲಾದವುಗಳನ್ನು ಪ್ರವಾಸಿಗರಿಂದ ಗೇಟ್‌ನಲ್ಲೇ ಸಂಗ್ರಹಿಸಲಾಗುತ್ತಿದೆ. ಪ್ರತಿಯಾಗಿ, ಅವರಿಗೆ ಬಟ್ಟೆ ಚೀಲಗಳನ್ನು ನೀಡಲಾಗುವುದು. ಇದಕ್ಕಾಗಿ ಸಂಘ–ಸಂಸ್ಥೆಗಳು, ಪ್ರವಾಸೋದ್ಯಮ ಭಾಗೀದಾರರೊಂದಿಗೆ ಚರ್ಚಿಸಲಾಗಿದೆ. ರೋಟರಿ ಕ್ಲಬ್‌ನವರು 50 ಸಾವಿರ ಹಾಗೂ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಿಂದ ಒಂದು ಲಕ್ಷ ಬಟ್ಟೆ ಬ್ಯಾಗ್‌ಗಳನ್ನು ಉಚಿತವಾಗಿ ಕೊಡುತ್ತಿದ್ದಾರೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವಸ್ತುಪ್ರದರ್ಶನದಲ್ಲಿ ನಿತ್ಯ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಆದ್ದರಿಂದ ಸಮರ್ಪಕ ಸ್ವಚ್ಛತೆಗೆ ಈ ಬಾರಿ ಆದ್ಯತೆ ಕೊಡಲಾಗುವುದು. ಹಗಲು ಹಾಗೂ ರಾತ್ರಿ ಎರಡು ಬಾರಿ ಸ್ವಚ್ಛತಾ ಕಾರ್ಯ ನಡೆಯಲಿದೆ. ವಿದ್ಯುತ್‌ ದೀಪಾಲಂಕಾರವನ್ನು ಈ ಬಾರಿ ದೊಡ್ಡ ಮಟ್ಟದಲ್ಲಿ ಮಾಡಲಾಗುವುದು. ಸುರಕ್ಷತೆಗೂ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಮೈಸೂರು ಬ್ರ್ಯಾಂಡ್‌’ ಪ್ರಚಾರಕ್ಕಾಗಿ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ವೀಳ್ಯದೆಲೆ, ಮೈಸೂರು ಪಾಕ್, ಮೈಸೂರು ಪೇಟ, ಮೈಸೂರು ಬಣ್ಣ ಮತ್ತು ಅರಗು ಉತ್ಪನ್ನಗಳು, ಮೈಸೂರು ಚಿತ್ರಕಲೆ, ಕರಕುಶಲ ವಸ್ತುಗಳು, ಮೈಸೂರು ರೇಷ್ಮೆ, ಶ್ರೀಗಂಧದ ಉತ್ಪನ್ನಗಳು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು. ಅದನ್ನು ಹೊರರಾಜ್ಯ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವಂತೆ ಸಜ್ಜುಗೊಳಿಸಲಾಗುವುದು. ಮಕ್ಕಳ ಮನರಂಜನೆಗೆ ವರ್ಚ್ಯುಯಲ್‌ ಗೇಮ್ಸ್‌ ಪರಿಚಯಿಸಲಾಗುವುದು. ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುವುದು’ ಎಂದು ಅಯೂಬ್‌ಖಾನ್‌ ಹೇಳಿದರು.

ವೈವಿಧ್ಯಮಯವಾಗಿ ಆಯೋಜಿಸಲು ತೀರ್ಮಾನ ಪ್ರತಿ ವರ್ಷದಂತೆ ಈ ಬಾರಿಯೂ 90 ದಿನ ಆಯೋಜನೆ ಪ್ರಗತಿಯಲ್ಲಿ ಟೆಂಡರ್‌ ಪ್ರಕ್ರಿಯೆ
ಪ್ರವಾಸಿಗರಿಂದ ಪ್ರವೇಶ ದ್ವಾರದಲ್ಲೇ ಪ್ಲಾಸ್ಟಿಕ್‌ ಬ್ಯಾಗ್‌ ತೆಗೆದುಕೊಂಡು ಬಟ್ಟೆ ಬ್ಯಾಗ್‌ ಉಚಿತವಾಗಿ ಕೊಡಲಾಗುವುದು. ಇದಕ್ಕಾಗಿ ಮಾರ್ಷಲ್‌ಗಳು ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು
ಅಯೂಬ್ ಖಾನ್ ಅಧ್ಯಕ್ಷ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ
‘ಪ್ರವೇಶ ಶುಲ್ಕ ₹5 ಹೆಚ್ಚಳ’
‘ದಸರಾ ಉದ್ಘಾಟನೆ ದಿನದಂದೇ ವಸ್ತುಪ್ರದರ್ಶನಕ್ಕೂ ಚಾಲನೆ ನೀಡಲಾಗುತ್ತದೆ. ಎಲ್ಲ ಮಳಿಗೆಗಳೂ ಭರ್ತಿ ಆಗುವಂತೆ ನೋಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ಈಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕವೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಿಸಲಾಗಿದೆ’ ಎಂದು ಅಯೂಬ್‌ಖಾನ್‌ ಪ್ರತಿಕ್ರಿಯಿಸಿದರು. ‘ಬೆಲೆ ಏರಿಕೆ ಕಾರಣದಿಂದಾಗಿ ಈ ಬಾರಿ ಪ್ರವೇಶ ಶುಲ್ಕವನ್ನು ವಯಸ್ಕರಿಗೆ ₹5 ಜಾಸ್ತಿ ಮಾಡುವ ಉದ್ದೇಶವಿದೆ. ಮಕ್ಕಳ ಟಿಕೆಟ್‌ ದರದಲ್ಲಿ ವ್ಯತ್ಯಾಸವೇನಿರುವುದಿಲ್ಲ’ ಎಂದರು. ಹೋದ ವರ್ಷ ವಯಸ್ಕರಿಗೆ ₹30 ಹಾಗೂ ಮಕ್ಕಳಿಗೆ ₹20 ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರವೇಶ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT