ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಕುಸ್ತಿ: ಸೆಣೆಸಲಿವೆ 250 ಜೋಡಿ

ಏಳು ದಿನಗಳ ಸ್ಪರ್ಧೆ: ರಾಜ್ಯದ ವಿವಿಧ ಭಾಗಗಳ ಕುಸ್ತಿಪಟುಗಳು ಭಾಗಿ
Published : 22 ಸೆಪ್ಟೆಂಬರ್ 2024, 14:27 IST
Last Updated : 22 ಸೆಪ್ಟೆಂಬರ್ 2024, 14:27 IST
ಫಾಲೋ ಮಾಡಿ
Comments

ಮೈಸೂರು: ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ನಾಡಕುಸ್ತಿಯು ಈ ಬಾರಿ ಅ.3ರಿಂದ 9ರವರೆಗೆ ನಡೆಯಲಿದೆ. ಬರೋಬ್ಬರಿ 250 ಜೋಡಿಗಳು ಅಖಾಡದಲ್ಲಿ ತಮ್ಮ ಸಾಮರ್ಥ್ಯ ಒರೆಗೆ ಹಚ್ಚಲಿವೆ.

ನಗರದ ವಸ್ತುಪ್ರದರ್ಶನ ಆವರಣದ ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ ಭಾನುವಾರ ದಸರಾ ಕುಸ್ತಿ ಉಪ ಸಮಿತಿಯಿಂದ ನಾಡ ಕುಸ್ತಿಗೆ ಜೋಡಿ ಕಟ್ಟುವ ಪ್ರಕ್ರಿಯೆ ನಡೆಯಿತು. ವಿವಿಧ ಜಿಲ್ಲೆಗಳ 500ಕ್ಕೂ ಹೆಚ್ಚು ಕುಸ್ತಿಪಟುಗಳು ಉತ್ಸಾಹದಿಂದ ಪಾಲ್ಗೊಂಡರು. ಕುಸ್ತಿಪಟುಗಳ ವಯಸ್ಸು, ತೂಕದ ಆಧಾರದಲ್ಲಿ 250 ಜೊತೆ ಕಟ್ಟಲಾಯಿತು.

7 ದಿನಗಳ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಪ್ರತಿ ದಿನ 35–40 ಜೋಡಿಗಳಂತೆ ಸ್ಪರ್ಧೆ ನಡೆಯಲಿದೆ. ಕಳೆದ ಬಾರಿ 220 ಜೋಡಿಗಳು ಪಾಲ್ಗೊಂಡಿದ್ದವು. ಈ ಬಾರಿ 30 ಹೆಚ್ಚುವರಿ ಜೋಡಿಗಳು ಸೆಣೆಸಾಟಕ್ಕೆ ಸಿದ್ಧವಾಗಿವೆ. ಇದೇ ಮೊದಲ ಬಾರಿಗೆ 17 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ.

ನಾಡ ಕುಸ್ತಿ ಜೊತೆಗೆ ಪಾಯಿಂಟ್‌ ಕುಸ್ತಿ, ಪಂಜಾ ಕುಸ್ತಿ ಸ್ಪರ್ಧೆಗಳೂ ನಡೆಯಲಿವೆ. ಪುರುಷ ಹಾಗೂ ಮಹಿಳೆಯರೂ ಸೇರಿ ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಚಾಲನೆ: ನಾಡಕುಸ್ತಿಯ ಜೋಡಿ ಕಟ್ಟುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಚಾಲನೆ ನೀಡಿದರು.

‘ಮೈಸೂರು ಮಹಾರಾಜರು ಕುಸ್ತಿಯನ್ನು ಪ್ರೊತ್ಸಾಹ ಮಾಡಿದ್ದರಿಂದ ಹಳೇ ಮೈಸೂರು ಭಾಗದಲ್ಲಿ ಜಗಜಟ್ಟಿ ಪೈಲ್ವಾನರು ಬೆಳಕಿಗೆ ಬಂದರು. ರುದ್ರ ಮೂಗ, ಬಾಲಾಜಿ, ಉರಿಬತ್ತಿ ನಂಜಯ್ಯ,‌ ದಿಲ್ದಾರ್ ರಿಯಾಜ್ ಮೊದಲಾದವರು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದರು. ಆದರೆ ಇತ್ತೀಚೆಗೆ ಮೈಸೂರಿನಲ್ಲೇ ಕುಸ್ತಿಪಟುಗಳು ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ಇಲ್ಲಿನ ಗರಡಿ ಮನೆಗಳನ್ನು ಸದೃಢಗೊಳಿಸಿ, ಅಲ್ಲಿ ನುರಿತ ತರಬೇತುದಾರರನ್ನು ನೇಮಕ ಮಾಡಲು ಸರ್ಕಾರ ಕಾರ್ಯಪ್ರವೃತ್ತವಾಗಲಿದೆ’ ಎಂದರು.

ಸ್ಥಳೀಯರಿಗೆ ಆದ್ಯತೆ: ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ, ಎಎಸ್ಪಿ ನಾಗೇಶ್ ಮಾತನಾಡಿ, ‘ ಈ ಬಾರಿಯ ದಸರಾ ಕುಸ್ತಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯುವಕರನ್ನು ಕುಸ್ತಿಯತ್ತ ಸೆಳೆಯಲು 17 ವರ್ಷದ ಒಳಗಿನವರ ವಿಭಾಗವನ್ನೂ ಸೇರ್ಪಡೆಗೊಳಿಸಲಾಗಿದೆ’ ಎಂದು ಹೇಳಿದರು.

ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಎನ್.ಸಿ. ವೆಂಕಟರಾಜು, ರಾಜ್ಯ ಕುಸ್ತಿ ಸಂಘದ ತಾಂತ್ರಿಕ ಅಧಿಕಾರಿ ಕೆ. ವಿನೋದ್‌ಕುಮಾರ್‌, ಹಿರಿಯ ಪೈಲ್ವಾನರಾದ ರಂಗಪ್ಪ, ನಂಜಪ್ಪ, ಛೋಟ ರಫೀಕ್, ಕೆಂಪೇಗೌಡ, ಅಮೃತ ಪುರೋಹಿತ ಇದ್ದರು.

ಕುಸ್ತಿ ಕ್ರೀಡಾಪಟುಗಳಿಗೆ ವಸತಿ ಶಾಲೆ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು
ಟಿ.ಎಸ್. ಶ್ರೀವತ್ಸ ಶಾಸಕ

ಗದೆ ತಿರುಗಿಸಿದ ಮಹದೇವಪ್ಪ

ಕಾರ್ಯಕ್ರಮದ ಗಣ್ಯರೆಲ್ಲರೂ ಗರಡಿಮನೆಯ ಗದೆಯನ್ನು ಹಿಡಿದು ನಿಲ್ಲುವ ಮೂಲಕ ಉದ್ಘಾಟಿಸಿದರು. ಬಳಿಕ ಹಿರಿಯ– ಕಿರಿಯ ಪೈಲ್ವಾನರು ಗದೆಯ ಮೂಲಕ ಸಾಹಸ ಪ್ರದರ್ಶನ ನೀಡಿದರು. ಇದರಿಂದ ಪ್ರೇರಿತರಾದ ಸಚಿವ ಮಹದೇವಪ್ಪ ತಾವೂ ಗದೆಯನ್ನು ಎತ್ತಿ ಹಿಡಿದು ಕತ್ತಿನ ಸುತ್ತ ಬಳಸುತ್ತ ತೋಳ್ಬಲ ಪ್ರದರ್ಶಿಸಿದರು.

ಆಯ್ಕೆಯಾದ ಪ್ರಥಮ ಜೋಡಿಗಳು

ಪುರುಷ ವಿಭಾಗ: ರತನ್ ಆಲನಹಳ್ಳಿ-ಕಿರಣ್ ಗೌಡ ಕನಕಪುರ

ಮಹಿಳಾ ವಿಭಾಗ: ಮರಿಯಾ ಜೆನ್ನಿಫರ್ ಮೈಸೂರು- ಶ್ರೀರಕ್ಷಾ ಕನಕಪುರ

ಮಕ್ಕಳ ವಿಭಾಗ: ಯಕ್ಷಿತ್ ಮಳವಳ್ಳಿ- ವಾಗೇಶ್ ಮೈಸೂರು

17-18 ವರ್ಷದ ವಿಭಾಗ: ಜಹೀರ್- ಮನೋಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT