ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬದುಕಿಗೆ ಬರೆ ಎಳೆದ ಬರ: ಕೈ ತಪ್ಪಿದ ಫಸಲು, ಅನ್ನದಾತರಿಗೆ ತಪ್ಪದ ಬವಣೆ

Published 26 ಸೆಪ್ಟೆಂಬರ್ 2023, 5:22 IST
Last Updated 26 ಸೆಪ್ಟೆಂಬರ್ 2023, 5:22 IST
ಅಕ್ಷರ ಗಾತ್ರ

ತಿ.ನರಸೀಪುರ: ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕುಸಿತಗೊಂಡಿದ್ದು, ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿ ಹುಲುಸಾಗಿ ಸಿಗಬೇಕಿದ್ದ ಫಸಲು ರೈತರ ಕೈ ತಪ್ಪಿದೆ.

ತಾಲ್ಲೂಕಿನಲ್ಲಿ ವಾಡಿಕೆ ಮಳೆಯ ಪ್ರಮಾಣ ಜನವರಿಯಿಂದ ಸೆಪ್ಟಂಬರ್ ಅಂತ್ಯದವರೆಗೆ 51.5 ಸೆ.ಮೀ ಇರಬೇಕಿತ್ತು. ಆದರೆ ಇಲ್ಲಿಯವರೆಗೆ 39.3 ಸೆ.ಮೀ ಮಳೆಯಾಗಿ, 12.2 ಸೆ.ಮೀನಷ್ಟು ಕೊರತೆಯಾಗಿದೆ. ಕಳೆದ  ವರ್ಷ ಈ ವೇಳೆಗೆ ಸುಮಾರು 96.4 ಸೆ.ಮೀ ನಷ್ಟು ಮಳೆಯಾಗಿತ್ತು.

ಈ ವರ್ಷ ಪೂರ್ವ ಮುಂಗಾರು ಕೈಕೊಟ್ಟಿದ್ದು, ನಂತರದ ಮುಂಗಾರಿನಲ್ಲಿ ಮಳೆ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ತಾಲ್ಲೂಕಿನ ಮೂಗೂರು, ಕಸಬಾ ಹಾಗೂ ಸೋಸಲೆ ಹೋಬಳಿಗಳಲ್ಲಿ ಫಸಲು ಹಾನಿಗೊಳಗಾಗಿದೆ. ಕೃಷಿ ಇಲಾಖೆ, ಕಂದಾಯ ಇಲಾಖೆ‌ಯ ಸಹಯೋಗದೊಂದಿಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ವರದಿಯ ಪ್ರಕಾರ, ಮೂಗೂರು ಹೋಬಳಿಯಲ್ಲಿ 222 ಹೆಕ್ಟೇರ್, ಕಸಬಾದಲ್ಲಿ 310, ಸೋಸಲೆ ಹೋಬಳಿಯಲ್ಲಿ 540 ಹೆಕ್ಟೇರ್ ಬೆಳೆ ಬರಕ್ಕೆ ಸಿಲುಕಿ ಫಸಲು ನಷ್ಟವಾಗಿದೆ. ಮುಖ್ಯವಾಗಿ ಕಡಲೆಕಾಯಿ, ಮುಸುಕಿನ ಜೋಳ, ರಾಗಿ ಬೆಳೆ ಬರಕ್ಕೆ ತುತ್ತಾಗಿದೆ. ಜತೆಗೆ ಜಾನುವಾರುಗಳಿಗೆ ಮೇವು ಸಿಗದ ಪರಿಸ್ಥಿತಿ ಬಂದೊದಗಿದೆ.

ಸಾಮಾನ್ಯವಾಗಿ ಪೂರ್ವ ಮುಂಗಾರಿನಲ್ಲಿ ಹುರುಳಿ, ಉದ್ದು, ಹೆಸರು ಕಾಳು ಬಿತ್ತಿ ಬೆಳೆದು ರೈತರು ಒಂದಷ್ಟು ಆದಾಯ ಕಾಣುತ್ತಿದ್ದರು. ಆದರೆ ಈ ಬಾರಿ ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಕೂಡ ಕೈಕೊಟ್ಟಿದೆ. ಇದರಿಂದ ರೈತರು ಆ ಬೆಳೆ ಕೂಡ ತೆಗೆಯಲಾಗಲಿಲ್ಲ. ‌ಮತ್ತೊಂದೆಡೆ ಭತ್ತದ ಕೃಷಿಗೆ ಕಾಯುತ್ತಿದ್ದ ರೈತರಿಗೆ ನಿರಾಸೆಯಾಗಿದೆ.‌

ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗದ ಕಾರಣ ಸರ್ಕಾರ ಹಾಲಿ ಜಮೀನಿನಲ್ಲಿದ್ದ ಬೆಳೆಗಳ ರಕ್ಷಣೆಗೆ ಮಾತ್ರ ನಾಲೆಗಳಿಗೆ ನೀರು ಕೊಟ್ಟಿದೆ.‌ ಕಬಿನಿ ಜಲಾಶಯದಿಂದ ಕಬಿನಿ ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿಯ ರೈತರಿಗೆ ನಾಲೆಗಳ ಮೂಲಕ ನೀರು ಪೂರೈಕೆಯಾಗಬೇಕಿತ್ತು. ಆದರೆ, ಮಳೆ ಕೊರತೆಯಿಂದ ಜಲಾಶಯ ಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಕಟ್ಟು ನೀರಿನ‌ ಪೂರೈಕೆ ಜಾರಿಯಾಗಿದೆ. ಇದರಿಂದ, ಜಮೀನಿನಲ್ಲಿ ಒಣಗುವ ಬೆಳೆಗಳ ರಕ್ಷಣೆಗೆ ಮಾತ್ರ ನೀರು ಪೂರೈಸಲು ನಿರ್ಧರಿಸಿದೆ. ಹೀಗಾಗಿ, ಈ ಬಾರಿ ನಾಲೆಗಳ ನೀರನ್ನು ನಂಬಿ ರೈತರು ಭತ್ತ ಬೆಳೆಯುವಂತಿಲ್ಲ. ಭತ್ತ ಬೆಳೆಗಾಗಿಯೇ ‘ಒಟ್ಟಿನ ಮಡಿ’ ಸಿದ್ಧಪಡಿಸಿಕೊಳ್ಳುತ್ತಿದ್ದ ರೈತರನ್ನು ಈಗ ಮತ್ತಷ್ಟು ಆತಂಕಕ್ಕೆ ದೂಡಿದೆ. ಕೃಷಿ ಪಂಪ್ ಸೆಟ್ ಗಳಿರುವ ರೈತರು ಭತ್ತ ಬೆಳೆಯುತ್ತಿದ್ದಾರೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅವಕಾಶವಿಲ್ಲವಾಗಿದೆ.

ಬೆಳೆ ನಷ್ಟಕ್ಕೆ ಎನನ್‌ಡಿಆರ್‌ಎಫ್ ನಿಯಮದಡಿ ಒಂದು ಗುಂಟೆಗೆ ₹25 ಹಾಗೂ ನೀರಾವರಿ ಜಮೀನಿನಲ್ಲಾದರೆ ಗುಂಟೆಗೆ ₹180 ಮಾತ್ರ ಪರಿಹಾರ ಸಿಗಲಿದೆ ಎಂಬ ಮಾಹಿತಿ ಇದೆ. ಈ ವಿಚಾರದಿಂದ ರೈತರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

‘ಕಳೆದ ಜೂನ್‌ನಿಂದ ಸೆಪ್ಟಂಬರ್‌ ತನಕ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಬಂದಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ನಾವು ಬೆಳೆ ಹಾನಿ ಸಮೀಕ್ಷೆ ಮಾಡಿ, ವಾಡಿಕೆ ಮಳೆ ಪ್ರಮಾಣ ಕುಸಿತದ ವಿವರವನ್ನು ಹಾಗೂ ಕಂದಾಯ ಇಲಾಖಾಧಿಕಾರಿ ಜೊತೆಗೆ ಜಂಟಿ ಸಮೀಕ್ಷೆ ಮಾಡಿ ಸರ್ಕಾರ ನೀಡಿದ್ದೇವೆ. ಈಗಾಗಲೇ ಜೋಳ ಒಣಗುತ್ತಿದೆ‌. ರಾಗಿ ಬಿತ್ತನೆ ಮಾಡಿ ಪೈರು ಬಂದಿದ್ದರೂ ಮಳೆ ಇಲ್ಲದೆ ಫಸಲು ಸಿಗುವಂತಿಲ್ಲ. ಕೋಣಗಳ್ಳಿ ಗ್ರಾಮದಲ್ಲಿ ರೈತರು ಮುಸುಕಿನ ಜೋಳ ಬೆಳೆದಿದ್ದರು. ಪ್ರಸ್ತುತ ಗ್ರಾಮದಲ್ಲಿ ಎಲ್ಲಾ ಬೆಳೆ ಒಣಗಿದ್ದು ಕಂಡುಬಂದಿದೆ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಕೆ.ಎಸ್ ಸುಹಾಸಿನಿ ’ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಈಗಾಗಲೇ ಬರ ಪೀಡಿತ ಜಮೀನಿಗೆ ಕೃಷಿ ವಿಜ್ಞಾನಿಗಳು ಕೂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ’ ಎಂದು ಕೃಷಿ ತಾಂತ್ರಿಕ ಅಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.

ಬರದಿಂದ ಒಣಗಿದ ಕಡಲೆಕಾಯಿ, ಮುಸುಕಿನ ಜೋಳ, ರಾಗಿ ಬೆಳೆ ಕಟ್ಟು ಪದ್ಧತಿ: ಭತ್ತ ಬೆಳೆಯಲು ಅವಕಾಶವಿಲ್ಲ ಸೂಕ್ತ ಪರಿಹಾರ ವಿತರಿಸಲು ರೈತರ ಆಗ್ರಹ
ನಾಲೆಗಳಲ್ಲಿ ನೀರು ಪೂರೈಕೆ ಇಲ್ಲದ ಕಾರಣ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರ್ಯಾಯ ಬೆಳೆ ರಾಗಿ ಅಲಸಂದೆ ಮತ್ತಿತರ ಬೆಳೆಗಳನ್ನು ಬೆಳೆಯುವಂತೆ ಜಾಗೃತಿ ಮೂಡಿಸಲಾಗಿದೆ
ಕೆ.ಎಸ್ ಸುಹಾಸಿನಿ ಸಹಾಯಕ ಕೃಷಿ ನಿರ್ದೇಶಕಿ
4 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಹಾಕಿದ್ದು ಮಳೆಕೊರತೆಯಿಂದ ಸಂಪೂರ್ಣವಾಗಿ ಒಣಗಿದೆ. ರಾಗಿ ಬಿತ್ತಿದರೂ ಪೈರು ಬರಲಿಲ್ಲ
ಸಿದ್ದರಾಜು ರೈತ ಕೋಣಗಹಳ್ಳಿ ಸೋಸಲೆ ಹೋಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT