ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನಡೆ ಗಜಪಡೆಯ ಕಡೆ: ದಸರಾ ಆನೆಗಳನ್ನು ಕಣ್ತುಂಬಿಕೊಳ್ಳುತ್ತಿರುವ ಸಾರ್ವಜನಿಕರು

Published 3 ಸೆಪ್ಟೆಂಬರ್ 2023, 7:26 IST
Last Updated 3 ಸೆಪ್ಟೆಂಬರ್ 2023, 7:26 IST
ಅಕ್ಷರ ಗಾತ್ರ

ಶಿವಪ್ರಸಾದ್‌ ರೈ

ಮೈಸೂರು: ಸಿಂಗಾರಗೊಂಡು ರಾಜಾತಿಥ್ಯದೊಂದಿಗೆ ನಗರಕ್ಕೆ ಆಗಮಿಸಿರುವ ದಸರಾ ಆನೆಗಳು ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ. ಮನೆಮಂದಿಯೆಲ್ಲಾ ಬಂದು ಆನೆಗಳನ್ನು ನೋಡಿ ಖುಷಿಪಡುತ್ತಿದ್ದರೆ, ಅವು ಹುಲ್ಲು ತಿನ್ನುತ್ತಾ ವಿಶ್ರಾಂತಿ ಪಡೆಯುತ್ತಿದೆ.

ಶುಕ್ರವಾರ ಗಜಪಯಣದಲ್ಲಿ ಭಾಗಿಯಾದ 9 ಆನೆಗಳು ಬೆಳಿಗ್ಗಿನ ಸ್ನಾನದ ಬಳಿಕ ಭತ್ತದ ಹುಲ್ಲು, ಕಾಯಿ ಬೆಲ್ಲ ಮೆಲ್ಲುತ್ತಾ ಸೊಂಡಿಲು ಬೀಸಿ ಜನರನ್ನು ಬರಮಾಡಿಕೊಳ್ಳುತ್ತಿವೆ. ಮಾವುತ, ಕಾವಾಡಿಗರು ಅವುಗಳ ಸೇವೆಯಲ್ಲಿ ತೊಡಗಿದ್ದಾರೆ. ಗಜಪಡೆಗಳ ನಾಯಕನೆಂದೇ ಗುರುತಿಸಿಕೊಂಡಿರುವ ಅಭಿಮನ್ಯು ತನ್ನ ನೋಟದಿಂದಲೇ ಜನರು ದೂರವಿರುವಂತೆ ಸೂಚಿಸುತ್ತಿದ್ದ. ಪ್ರಥಮ ಬಾರಿ ಭಾಗವಹಿಸುತ್ತಿರುವ ಕಂಜನ್‌ ಕುತೂಹಲದಿಂದ ಎಲ್ಲವನ್ನೂ ಗಮನಿಸುತ್ತಿದ್ದ.

ನಿವೃತ್ತಿಯ ನಂತರವೂ ದಸರಾದಲ್ಲಿ ಭಾಗಿಯಾಗುತ್ತಿರುವ ಅರ್ಜುನ ಕಾವಾಡಿಗರು ನೀಡಿದ ಭತ್ತದ ಹುಲ್ಲು ತಿನ್ನುತ್ತಾ ವಿಶ್ರಾಂತಿ ಪಡೆಯುತ್ತಿದ್ದಾನೆ. ಆತನ ಕರಾಳ ಸತ್ಯದ ಅರಿವಿರುವ ಸಾರ್ವಜನಿಕರು ದೂರದಿಂದಲೇ ನಿಂತು ವೀಕ್ಷಣೆ ಮಾಡುತ್ತಿದ್ದಾರೆ. ಗೋಪಿಯು ಮರಗಳಿಗೆ ತನ್ನ ದಂತವಿರಿಸಿ ನಿದ್ದೆಗೆ ಜಾರುತ್ತಿದ್ದಾನೆ. ಪಕ್ಕದಲ್ಲೇ ಓಡಾಡುವ ರೈಲಿನ ಸದ್ದಿಗೆ ಬೆಚ್ಚಿಬೀಳುತ್ತಿದ್ದಾನೆ.

ಮಾವುತನ ಪ್ರೀತಿಯ ‘ಮರಿ’ ತಿಂಡಿಪೋತನೆಂದೇ ಹೆಸರುವಾಸಿಯಾದ ಭೀಮನು ತನ್ನ ಪಾಲಿನ ಆಹಾರವನ್ನು ಬೇಗನೆ ತಿಂದು ಮತ್ತೆ ಮಾವುತನ ಕಡೆ ಮುಖ ಮಾಡಿ ಆಹಾರಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ. ಧನಂಜಯನು ಹುಲ್ಲು ತಿನ್ನುತ್ತಾ ದಣಿವಾರಿಸಿಕೊಳ್ಳುತ್ತಿದ್ದಾನೆ. ವರಲಕ್ಷ್ಮಿ, ವಿಜಯಾ, ಸುಗ್ರೀವ, ಪ್ರಶಾಂತ ತಮ್ಮನ್ನು ನೋಡಲು ಬಂದ ಜನರನ್ನು ರಂಜಿಸುತ್ತಿದ್ದಾರೆ. ಶಾಂತವಾಗಿರುವ ಇವುಗಳ ಬಳಿ ನಿಂತು ಫೋಟೊ ಕ್ಲಿಕ್ಕಿಸಲು ಜನರೂ ತುದಿಗಾಲಲ್ಲಿ ನಿಂತಿದ್ದರು.

9 ಆನೆಯ 18 ಜನ ಮಾವುತ ಕಾವಾಡಿಗರು, ಪ್ರತಿ ಆನೆಯೊಂದಿಗೆ ಬಂದಿರುವ ತಲಾ ಐವರು ಸಹಾಯಕರು ಅರಣ್ಯ ಇಲಾಖೆ ನೀಡಿರುವ ನಿವೇಶನದಲ್ಲಿ ತಂಗಿದ್ದಾರೆ. ಸೆ.5ರಂದು ಈ ಆನೆಗಳು ಅರಮನೆ ಪ್ರವೇಶಿಸಲಿವೆ. ಅಲ್ಲಿ ತೆರಳುವ ಮೊದಲು ಅವನ್ನು ಕಣ್ತುಂಬಿಕೊಳ್ಳಬೇಕೆಂದು ಸಾರ್ವಜನಿಕರು ಅರಣ್ಯ ಭವನಕ್ಕೆ ಬರುತ್ತಿದ್ದಾರೆ. ಶನಿವಾರ ಶಾಲೆ ಮುಗಿದ ಬಳಿಕ ವಿದ್ಯಾರ್ಥಿಗಳು ಗುಂಪಿನಲ್ಲಿ ಬಂದು, ದೂರದಲ್ಲೇ ನಿಂತು ತಮ್ಮಿಷ್ಟದ ಆನೆಯ ಹೆಸರು ಕೂಗಿ ಆರೋಗ್ಯ ವಿಚಾರಿಸುತ್ತಿದ್ದ ದೃಶ್ಯಗಳು ಮನಮುಟ್ಟುವಂತಿದ್ದವು.

ಭದ್ರತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ಆನೆಗಳ ಹತ್ತಿರ ಬಿಡುತ್ತಿಲ್ಲ. ಆದರೂ ಅನೇಕರು ಆನೆಗಳ ಬಳಿ ತೆರಳಿ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಆನೆಗಳ ಆಗಮನದೊಂದಿಗೆ ನಗರದಲ್ಲಿ ದಸರೆಯ ಸಂಭ್ರಮಕ್ಕೆ ಕಿಚ್ಚು ಹಚ್ಚಿದಂತಾಗಿದೆ.

ವಿಶ್ರಾಂತಿ ಪಡೆಯುತ್ತಿರುವ ಗಜಪಡೆ ಅರಣ್ಯ ಭವನದತ್ತ ಜನರ ದಂಡು 5ರಂದು ಅರಮನೆ ಪ್ರವೇಶಿಸಲಿವೆ ಆನೆಗಳು
ದಸರಾ ಆನೆಗಳನ್ನು ನೋಡುವ ಕುತೂಹಲದಿಂದ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ. ಆನೆ ಮೈಸೂರಿನ ಜನರ ಬಾಂಧವ್ಯ ಎಂದಿಗೂ ಶಾಶ್ವತ.
ಶರತ್‌ ಟಿ.ಕೆ.ಲೇಔಟ್‌ ನಿವಾಸಿ
ಆಕರ್ಷಣೆಯ ಕೇಂದ್ರಬಿಂದು ‘ಕಂಜನ್‌’
ಆನೆಗಳನ್ನು ನೋಡಲು ಬಂದವರು ಪ್ರಥಮ ಬಾರಿ ದಸರಾದಲ್ಲಿ ಭಾಗವಹಿಸುತ್ತಿರುವ ಕಂಜನ್‌ ಆನೆ ಯಾವುದು ಎಂದು ಮಾವುತರಲ್ಲಿ ವಿಚಾರಿಸುತ್ತಿದ್ದರು. 2014ರಲ್ಲಿ ಹಾಸನದ ತಿಪಟೂರಿನಲ್ಲಿ ಈತನನ್ನು ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿತ್ತು. ಆ ಬಳಿಕ ದುಬಾರೆ ಆನೆ ಕ್ಯಾಂಪ್‌ನಲ್ಲಿ ಪಳಗಿಸಲಾಗಿದೆ. ಈತ 3 ಕಡೆಗಳಲ್ಲಿ ಆನೆ ಕಾರ್ಯಾಚರಣೆ ಹಾಗೂ 2 ಬಾರಿ ಹುಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾನೆ. ‘ನಾನು 9 ವರ್ಷಗಳಿಂದ ಇದರ ಮಾವುತನಾಗಿ ಕೆಲಸ ಮಾಡುತ್ತಿದ್ದೇನೆ. ಈತ ಶಾಂತಸ್ವರೂಪಿ. ಜನರನ್ನು ಹತ್ತಿರ ಬಿಟ್ಟುಕೊಳ್ಳುತ್ತಾನೆ. ನಾವು ಇಲ್ಲದಿದ್ದಾಗ ತೊಂದರೆ ಕೊಡುತ್ತಾನೆ’ ಎಂದು ಮಾವುತ ವಿಜಯ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT