ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ‘ಏಕಲವ್ಯ’ ಶಾಲೆಗಳ ರಾಷ್ಟ್ರೀಯ ಕ್ರೀಡಾಕೂಟ 8ರಿಂದ

Published 30 ಡಿಸೆಂಬರ್ 2023, 12:41 IST
Last Updated 30 ಡಿಸೆಂಬರ್ 2023, 12:41 IST
ಅಕ್ಷರ ಗಾತ್ರ

ಮೈಸೂರು: ‘ಏಕಲವ್ಯ ಮಾದರಿ ವಸತಿಶಾಲೆಗಳ ರಾಷ್ಟ್ರೀಯ ಕ್ರೀಡಾಕೂಟವನ್ನು ನಗರದಲ್ಲಿ ಜ.8ರಿಂದ 12ರವರೆಗೆ ಆಯೋಜಿಸಲಾಗಿದೆ’ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ತಿಳಿಸಿದರು.

ಇಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜ.7ರಂದು ಕೇಂದ್ರ ಸಚಿವ ಅರ್ಜುನ್ ಉದ್ಘಾಟಿಸಲಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ 4,500 ಕ್ರೀಡಾಪಟುಗಳು, 1,500 ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

‘₹20 ಕೋಟಿ ಅನುದಾನದಲ್ಲಿ ಆಯೋಜಿಸಲಾಗುತ್ತಿದೆ. ವಿವಿಧ ಐದು ಕ್ರೀಡಾಂಗಣಗಳಲ್ಲಿ ಏಕಕಾಲದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಕಲ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು. ಕ್ರೀಡಾಪಟುಗಳ ಸಂಚಾರಕ್ಕೆ ವಾಹನಗಳನ್ನು ಒದಗಿಸುವುದು, ಕ್ರೀಡಾಂಗಣಗಳಲ್ಲಿ ಸ್ವಚ್ಛತೆ, ಊಟ, ಶೌಚಾಲಯ, ವೈದ್ಯಕೀಯ ಸೇವೆ, ಕುಡಿಯುವ ನೀರು, ಆಂಬುಲೆನ್ಸ್‌ಗಳ ವ್ಯವಸ್ಥೆ ಹಾಗೂ ಪೋಲಿಸ್ ಬಂದೋಬಸ್ತ್ ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸಬೇಕು’ ಎಂದು ಸೂಚಿಸಿದರು.

‘ಮೈಸೂರಿಗೆ ಆಗಮಿಸುವ ಕ್ರೀಡಾಪಟುಗಳಿಗೆ ಇಲ್ಲಿನ ಸಂಸ್ಕೃತಿ– ಪರಂಪರೆಯನ್ನು ಪರಿಚಯಿಸಬೇಕು. ಅರಮನೆ ದೀಪಾಲಂಕಾರ ವೀಕ್ಷಣೆಗೆ ಹಾಗೂ ಚಾಮುಂಡಿ ಬೆಟ್ಟ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

ಪ್ರಧಾನಿ ಜೊತೆ ಸಂವಾದ 15ರಂದು:

‘‌ಜ.15ರಂದು ನೈಜ ದುರ್ಬಲ ಬುಡಕಟ್ಟು (ಜೇನು ಕುರುಬ ಮತ್ತು ಕೊರಗ) ಜನಾಂಗದವರ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಸಂವಾದ ಕಾರ್ಯಕ್ರಮವೂ ನಡೆಯಲಿದೆ. 50ರಿಂದ 75 ಮಂದಿಗೆ ಪಾಲ್ಗೊಳ್ಳಲು ಅವಕಾಶವಿದೆ. ಇದಕ್ಕೂ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ದೇಶದಲ್ಲಿ ನೈಜ ದುರ್ಬಲ ಬುಡಕಟ್ಟು ಜನಾಂಗದ ಸಂಖ್ಯೆ 20 ಲಕ್ಷವಿದ್ದು, ರಾಜ್ಯದಲ್ಲಿ 70ಸಾವಿರ ಇದೆ. ಆದಿವಾಸಿ ದುರ್ಬಲ ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆಯಡಿ ₹24ಸಾವಿರ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಈ ಯೋಜನೆಯಲ್ಲಿ ಆದಿವಾಸಿಗಳ ಮನೆ ಕಟ್ಟಿಸಿಕೊಡುವುದು, ರಸ್ತೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಶಾಲೆ, ವಿದ್ಯಾರ್ಥಿನಿಲಯ, ಆಸ್ಪತ್ರೆ, ಅಂಗನವಾಡಿ ಕೇಂದ್ರ ಹಾಗೂ ಸಮುದಾಯ ಭವನ ನಿರ್ಮಾಣ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಜಿತೇಂದ್ರ ಶೆಟ್ಟಿ ಮಾತನಾಡಿ, ‘ಕ್ರೀಡಾಕೂಟದಲ್ಲಿ 10 ಗುಂಪು ಹಾಗೂ 18 ಅಥ್ಲೆಟಿಕ್ಸ್ ಸ್ಪರ್ಧೆಗಳಿರಲಿವೆ. 3,500 ಮಕ್ಕಳಿಗೆ ಈಗಾಗಲೇ ವಿಮೆ ಮಾಡಿಸಲಾಗಿದೆ. ಕೋವಿಡ್ ಮಾರ್ಗಸೂಚಿ ಪಾಲಿಸಲಾಗುವುದು. ಪ್ರತಿ ರಾಜ್ಯಕ್ಕೊಬ್ಬ ನೋಡಲ್‌ ಅಧಿಕಾರಿ ನಿಯೋಜಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT