ಮೈಸೂರು: ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆ ಗಗನಮುಖಿಯಾಗಿದ್ದು, ಇದರಿಂದಾಗಿ ಗ್ರಾಹಕರು ಖರೀದಿಯಿಂದ ವಿಮುಖರಾಗಿದ್ದಾರೆ. ಲಾಭಾಂಶದ ಪ್ರಮಾಣ ಕಡಿಮೆಯಾದ ಕಾರಣ ಮಾರಾಟಗಾರರು ಆಸಕ್ತಿ ತೋರುತ್ತಿಲ್ಲ.
ಸದ್ಯ ಸಗಟು ಮಾರುಕಟ್ಟೆಯಲ್ಲಿಯೇ ಟೊಮೆಟೊ ಧಾರಣೆ ಪ್ರತಿ ಕೆ.ಜಿ.ಗೆ ₹80–90 ಇದೆ. ತಿಂಗಳುಗಳು ಕಳೆದರೂ ಬೆಲೆ ಇಳಿಕೆ ಆಗದ ಕಾರಣ ಜನರು ಟೊಮೆಟೊಗೆ ಪರ್ಯಾಯವಾದ ಉತ್ಪನ್ನಗಳನ್ನು ಬಳಸತೊಡಗಿದ್ದಾರೆ. ಸ್ಥಳೀಯವಾಗಿ ಬೆಳೆಯುವ ಹೆಚ್ಚಿನ ಉತ್ಪನ್ನ ಹೊರಗೆ ಸಾಗಣೆ ಆಗುತ್ತಿದ್ದು, ಸ್ಥಳೀಯ ಮಾರುಕಟ್ಟೆಗೆ ಅತಿ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ಆವಕ ಆಗುತ್ತಿದೆ ಎಂದು ವರ್ತಕರು ಹೇಳುತ್ತಾರೆ.
ಉಳಿದ ತರಕಾರಿಗಳ ಬೆಲೆಯಲ್ಲಿ ಈ ವಾರ ಹೆಚ್ಚು ವ್ಯತ್ಯಾಸ ಆಗಿಲ್ಲ. ಮಳೆಯ ಹಿನ್ನೆಲೆಯಲ್ಲಿ ಸೌತೆಕಾಯಿ ಬೇಡಿಕೆ ಕಳೆದುಕೊಂಡಿದ್ದು, ಉತ್ಪನ್ನವೂ ಕಡಿಮೆ ಆಗಿದೆ. ಮೆಣಸಿನಕಾಯಿ ಗ್ರಾಹಕರಿಗೆ ಇನ್ನೂ ಖಾರವಾಗಿಯೇ ಇದ್ದು, ದಪ್ಪ ಮೆಣಸಿನಕಾಯಿ ಕೂಡ ದುಬಾರಿ ಆಗಿದೆ. ಮೂಲಂಗಿ, ಬೆಂಡೆ, ಕ್ಯಾರೆಟ್ ಅಗ್ಗವಾಗಿಯೇ ಇವೆ.
ಸೊಪ್ಪು ಎಂದಿನಂತೆ ಅಗ್ಗವಾಗಿಯೇ ಮುಂದುವರಿದಿದೆ. ಕೀರೆ, ಕಿಲ್‌ಕೀರೆ, ದಂಟು, ಪಾಲಕ್ ಎಲ್ಲವೂ ಸಣ್ಣ ಕಟ್ಟು ₹10ಕ್ಕೆ 4, ಮೆಂತ್ಯ ಹಾಗೂ ಸಬ್ಬಸ್ಸಿಗೆ 2 ಕಟ್ಟು, ನಾಟಿ ಕೊತ್ತಂಬರಿ 3 ಕಟ್ಟು ಹಾಗೂ ಫಾರಂ ಕೊತ್ತಂಬರಿ 4 ಕಟ್ಟಿನಂತೆ ಮುಂದುವರಿದಿದೆ.
ಮೀನಿನ ದರ ಇಳಿಕೆ ಸಾಧ್ಯತೆ: ಕರಾವಳಿ ಭಾಗದಲ್ಲಿ ಮಂಗಳವಾರದಿಂದ ಮೀನುಗಾರಿಕೆ ಮತ್ತೆ ಆರಂಭ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಮುದ್ರ ಮೀನು ಮಾರುಕಟ್ಟೆಗೆ ಹೆಚ್ಚು ಬರುವ ನಿರೀಕ್ಷೆ ಇದ್ದು, ದರವೂ ಇಳಿಕೆ ಆಗುವ ಸಾಧ್ಯತೆ ಇದೆ. ಸಿಹಿನೀರಿನ ಮೀನುಗಳ ದರದಲ್ಲಿ ಸದ್ಯ ಹೆಚ್ಚು ವ್ಯತ್ಯಾಸ ಆಗಿಲ್ಲ. ಚಿಕನ್ ಧಾರಣೆಯೂ ಅಷ್ಟೇ ಇದ್ದು, ಫಾರಂ ಕೋಳಿ ₹140, ರೆಡಿ ಚಿಕನ್ ₹200 ರಂತೆ ಮಾರಾಟ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.