ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸೂರು: ತಂಬಾಕು, ಶುಂಠಿ ನಾಶ ಪರಿಹಾರಕ್ಕೆ ಆಗ್ರಹ

Published 25 ಮೇ 2024, 4:30 IST
Last Updated 25 ಮೇ 2024, 4:30 IST
ಅಕ್ಷರ ಗಾತ್ರ

ಹುಣಸೂರು: ‘ತಾಲ್ಲೂಕಿನಾದ್ಯಂತ ಕಳೆದ 10 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಮತ್ತು ಶುಂಠಿ ಸಂಪೂರ್ಣ ಹಾಳಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಸರ್ಕಾರ ತ್ವರಿತವಾಗಿ ಪರಿಹಾರ ನೀಡಬೇಕು’ ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.

‘ಮಳೆಗೆ ಸಿಲುಕಿದ ತಂಬಾಕು ಸಸಿ ನೀರಿನಲ್ಲಿ ಕರಗಿದ್ದು, ರೈತರಿಗೆ ಮರು ನಾಟಿ ಮಾಡಲು ಸಸಿಗಳಿಲ್ಲದೆ ಒಂದಕ್ಕೆ ಎರಡಷ್ಟು ಬೆಲೆ ನೀಡಿ ಖರೀದಿಸಿ ಮರು ನಾಟಿ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಮೇ ತಿಂಗಳಲ್ಲಿ ವಾಡಿಕೆ ಮಳೆ 17 ಸೆ.ಮಿ. ಬೀಳಬೇಕಿತ್ತು, ಈಗಾಗಲೇ 21 ಸೆ.ಮಿ ಮಳೆಯಾಗಿದೆ. ಈ ವರ್ಷಧಾರೆಗೆ ಕೆರೆಕಟ್ಟೆಗಳು ಬಹುತೇಕ ಭರ್ತಿಯಾಗಿ ತಾಲ್ಲೂಕಿನಲ್ಲಿ 5 ರಿಂದ 6 ಕೆರೆಗಳು ಕೋಡಿ ಬಿದ್ದು ತಗ್ಗು ಪ್ರದೇಶಕ್ಕೆ ಹರಿದ ಪರಿಣಾಮ ಭಾರಿ ಪ್ರಮಾಣದ ಹಾನಿಯಾಗಿದೆ’ ಎಂದು ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ರಾಮೇಗೌಡ ಅಳಲು ತೋಡಿಕೊಂಡಿದ್ದಾರೆ.

ಪರಿಹಾರಕ್ಕೆ ಮನವಿ: ‘ತಂಬಾಕು ಮಂಡಳಿಯಿಂದ ಸಾಲದ ಮೇಲೆ ರಸಗೊಬ್ಬರ ಖರೀದಿಸಿ ಬೆಳೆಗೆ ಹಾಕಿದ ರೈತ ಈ ಸಾಲಿನ ಮಳೆಯಿಂದಾಗಿ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದಾಗಿ ಮರು ರಸಗೊಬ್ಬರ ನೀಡಬೇಕಾದ ಅನಿವಾರ್ಯ ಎದುರಾಗಿದೆ. ತಂಬಾಕು ಮಂಡಳಿ ಸಮೀಕ್ಷೆ ನಡೆಸಿ ರೈತರ ಕ್ಷೇಮಾಭಿವೃದ್ಧಿ ನಿಧಿಯಿಂದ ಪರಿಹಾರ ನೀಡಲು ಕೇಂದ್ರ ತಂಬಾಕು ಮಂಡಳಿಗೆ ಪ್ರಾದೇಶಿಕ ವ್ಯವಸ್ಥಾಪಕ ಕಚೇರಿ ಶಿಫಾರಸು ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.

‘ತಾಲ್ಲೂಕು ಆಡಳಿತ ಗ್ರಾಮಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಪಟ್ಟಿ ಸಿದ್ಧಪಡಿಸಿ ಪ್ರಾಕೃತಿಕ ಹಾನಿ ಅಡಿಯಲ್ಲಿ ನೊಂದ ರೈತರಿಗೆ ಪರಿಹಾರಕ್ಕೆ ಶಿಫಾರಸು ಮಾಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT