ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗರಿಗೆದರಿದ 'ಮೈಸೂರು ಸಾಹಿತ್ಯ ಸಂಭ್ರಮ'

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ : ಚಿದಾನಂದ‌ ಎಸ್.ನಾಯಕ್ ಚಿತ್ರಕ್ಕೆ ಕರತಾಡನ
Published 6 ಜುಲೈ 2024, 6:02 IST
Last Updated 6 ಜುಲೈ 2024, 6:02 IST
ಅಕ್ಷರ ಗಾತ್ರ

ಮೈಸೂರು: ಮುಂಗಾರಿನ ತಂಗಾಳಿ ಹೊರಗೆ ಬೀಸುತ್ತಿದ್ದರೆ, ಒಳಗೆ ಸಾಹಿತ್ಯದ ವಿಚಾರ ಗೋಷ್ಠಿಗಳಲ್ಲಿ ಚರ್ಚೆಯ ಕಾವೇರಿತ್ತು. ನಟರಾದ ರಮೇಶ್ ಅರವಿಂದ್, ಸಿನಿಮಾ ಯಾನ, ಸಾಹಿತ್ಯದ ಒಡನಾಟ ಹಂಚಿಕೊಂಡರೆ,‌ 'ಕಾನ್' ಪ್ರಶಸ್ತಿ ಪಡೆದ 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು' ಕಿರುಚಿತ್ರವು ಪ್ರೇಕ್ಷಕರನ್ನು ಆವರಿಸಿತ್ತು.

ನಗರದ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಶನಿವಾರ ಗರಿಬಿಚ್ಚಿದ 8ನೇ ಆವೃತ್ತಿಯ 'ಮೈಸೂರು ಸಾಹಿತ್ಯ ಸಂಭ್ರಮ'ದಲ್ಲಿ ಕಂಡ ಚಿತ್ರಣವಿದು.

ಉತ್ಸವದ ಆರಂಭದಲ್ಲೇ ಕಾನ್ ಚಲನಚಿತ್ರೋತ್ಸವದ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ವಿಜೇತ ಚಿತ್ರದ ನಿರ್ದೇಶಕ ಮೈಸೂರಿನ ಚಿದಾನಂದ ಎಸ್.ನಾಯಕ ಅವರನ್ನು ಸನ್ಮಾನಿಸಲಾಯಿತು. ಸಾಹಿತ್ಯ- ಸಿನಿಮಾ ಪ್ರೇಮಿಗಳ ಕರತಾಡನ ಮುಗಿಲುಮುಟ್ಟಿತ್ತು.

ಮೈಸೂರು ಲಿಟ್ರರಿ ಫೋರಂ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್ ಆಯೋಜಿಸಿದ್ದ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, 'ಸಾಹಿತ್ಯ ಉತ್ಸವಗಳು ಲೇಖಕರು ಹಾಗೂ ಓದುಗರ ಅಭಿವ್ಯಕ್ತಿಯಾಗಿವೆ. ಸಮಾಜದ ಸಂಕಥನಗಳ ವೇದಿಕೆಯಾಗಿವೆ. ಮೈಸೂರು ಸಾಹಿತ್ಯ ಉತ್ಸವ ಜಾಗತಿಕವಾಗಿ ಸ್ಥಾನ ಪಡೆದಿದೆ' ಎಂದರು.

'ಚಿದಾನಂದ ಎಸ್‌.ನಾಯಕ್ ಅವರ ಚಿತ್ರ ಕಾನ್ ಚಿತ್ರೋತ್ಸವದ ಪ್ರಶಸ್ತಿ ಪಡೆದಿರುವುದು ನಾಡಿನ ಹೆಮ್ಮೆಯಾಗಿದೆ. ಇನ್ನಷ್ಟು ಪ್ರತಿಭೆಗಳು ಅರಳಲಿ, ಸಾಧನೆಗಳು ಹೊರಹೊಮ್ಮಲಿ' ಎಂದು ಹೇಳಿದರು.

ನಟ ರಮೇಶ್ ಅರವಿಂದ್ ಮಾತನಾಡಿ, 'ಕೃತಿಯ ಒಂದೊಂದು ಸಾಲಿನ ಹಿಂದೆ ಲೇಖಕರ ಅದೆಷ್ಟು ದಿನದ ಶ್ರಮವಿರುತ್ತದೆ. ಲೇಖಕರಾಗಬೇಕೆಂದರೆ ಪ್ರತಿ ವಾಕ್ಯಕ್ಕೂ ಪ್ರಾಣವಿಡಬೇಕು.‌ ಪ್ರಾಣ ಬಿಡಬೇಕು. ಮುಂದೆ ಏನಾಗುತ್ತದೆ ಎಂಬ ಕುತೂಹಲ ಕೊನೆ ಸಾಲಿನವರೆಗೂ ಉಳಿಸಿಕೊಳ್ಳಬೇಕು.‌ ಹೀಗಾಗಿ ಬರಹಗಾರ ಆಗುವುದು ಸುಲಭವಲ್ಲ' ಎಂದರು.

'ಕೃತಿ ಓದಿದಾಗ ಲೇಖಕ ಹಾಗೂ ಓದುಗರಿಬ್ಬರ ಅರ್ಧ ಸತ್ಯಗಳು ಒಂದಾಗಿ ಪೂರ್ಣ ಸತ್ಯವಾಗುತ್ತದೆ. ಪುಸ್ತಕಗಳು ಹಾರುವ ರೆಕ್ಕೆಗಳನ್ನು ಹೊಂದಿದ್ದು, ಅವು ಸೃಜನಶೀಲರಿಗೆ ಸ್ಫೂರ್ತಿ‌ ತುಂಬುತ್ತವೆ' ಎಂದು ಹೇಳಿದರು.

'ಒಂದು ಚಿತ್ರದಲ್ಲಿ ಅಸ್ಸಾಂನಲ್ಲಿ ಉಲ್ಫಾ- ಭಾರತೀಯ ಸೇನೆಯ ಯುದ್ಧದ ದೃಶ್ಯ ತೆಗೆಯಬೇಕಿತ್ತು. ಬಜೆಟ್ ಇರಲಿಲ್ಲ. ಆರ್.ಕೆ.ನಾರಾಯಣ್ ಕೃತಿಯ ಸಾಲಿನ ಸ್ಫೂರ್ತಿ ಪಡೆದು ಕೆಂಪು ಗಾಜಿನಲ್ಲಿ ನದಿಯ ಹರಿವನ್ನು ತೋರಿಸಿದೆ. ಬ್ರಹ್ಮಪುತ್ರಾ ನದಿ ಕೆಂಪಾಗಿ ಹರಿದ ದೃಶ್ಯವನ್ನು ಒಂದು ರೂಪಾಯಿ ಖರ್ಚು ಮಾಡದೇ ಕಟ್ಟಿಕೊಟ್ಟಿದ್ದೆ‌. ಇದೇ ಓದಿನ ಶಕ್ತಿ' ಎಂದು ಉದಾಹರಿಸಿದರು.

'ಸರಸ್ವತಿ ನದಿ ಅದೃಶ್ಯ ನದಿ. ಅದು ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರತಿ ಪುಸ್ತಕ‌ ಓದಿದಾಗ ಸರಸ್ವತಿ ನಮ್ಮಲ್ಲಿ ಹರಿಯುತ್ತಾಳೆ. ಕೃತಿಗಳನ್ನು ಓದಬೇಕು. ಎಲ್ಲರೂ ಪುಸ್ತಕ ಸಂಸ್ಕೃತಿ ಬೆಳೆಸಬೇಕು' ಎಂದರು.

ನಟ‌ ಸುರೇಶ್ ಹೆಬ್ಳೀಕರ್, ಲೇಖಕ ಅರುಣ್ ರಾಮನ್, ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಟ್ರಸ್ಟಿಗಳಾದ ಶ್ಯಾಮ್ ಚೆರಿಯನ್, ರಾಯನ್ ಇರಾನಿ, ಹನುಮಂತ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT