ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ ಗಲಭೆ ಪೂರ್ವ ಯೋಜಿತ ಕೃತ್ಯ: ಶಾಸಕ ಶ್ರೀವತ್ಸ

Published : 14 ಸೆಪ್ಟೆಂಬರ್ 2024, 14:01 IST
Last Updated : 14 ಸೆಪ್ಟೆಂಬರ್ 2024, 14:01 IST
ಫಾಲೋ ಮಾಡಿ
Comments

ಮೈಸೂರು: ‘ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಪೂರ್ವ ಯೋಜಿತ ಕೃತ್ಯವಾಗಿದೆ’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಅಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದವರನ್ನು ಎ–1 ಆರೋಪಿಯನ್ನಾಗಿ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಈ ವಿಚಾರದಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ’ ಎಂದು ದೂರಿದರು.

‘ಪೆಟ್ರೋಲ್ ಬಾಂಬ್, ತಲ್ವಾರ್‌ಗಳು ಏಕಾಏಕಿ ಹೇಗೆ ಬಂದವು. ಗಲಭೆ ವಿಚಾರದಲ್ಲಿ ಗೃಹ ಇಲಾಖೆ ಅಧಿಕಾರಿಗಳಿಗೆ ಕೇವಲ ನೋಟಿಸ್ ಕೊಟ್ಟು ಕೈ ತೊಳೆದುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಿದೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡಬಾರದು‌; ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮಸೀದಿ ಮುಂದೆ ಗಣಪತಿ ಮೂರ್ತಿ ಮೆರವಣಿಗೆ ಹೋಗಬಾರದು, ಈದ್ ಮಿಲಾದ್ ಮೆರವಣಿಗೆ ಹನುಮ, ರಾಮ ಮಂದಿರಗಳಿರುವ ಮಾರ್ಗದಲ್ಲಿ ಹೋಗಬಾರದು ಎಂದರೆ ಹೇಗೆ? ಎಲ್ಲ ಮೆರವಣಿಗೆಗಳೂ ಎಲ್ಲ ಕಡೆಯೂ ಸಾಗುವಂತಾಗಬೇಕು. ಈಗ, ಈದ್ ಮಿಲಾದ್‌ನಂದು ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಮಾಡಬೇಡಿ ಎನ್ನುತ್ತಿದ್ದಾರೆ‌. ಆ ಹಬ್ಬಕ್ಕೂ ಮೂರ್ತಿ ವಿಸರ್ಜನೆಗೂ ಏನು ಸಂಬಂಧ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರ ಈಚೆಗೆ ಕೆ.ಆರ್. ಕ್ಷೇತ್ರಕ್ಕೆ ₹2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಅಶೋಕಪುರಂನ ದೊಡ್ಡಗರಡಿ ಹಾಗೂ ಚಿಕ್ಕಗರಡಿ ಅಭಿವೃದ್ಧಿಗಾಗಿ ₹6.50 ಕೋಟಿ ಬಿಡುಗಡೆಯಾಗಿದ್ದು, ಡಿಪಿಆರ್‌ಗೆ ಸೂಚಿಸಲಾಗಿದೆ. ಶಾಸಕರಿಗೆ ಕ್ಷೇತ್ರ ಪ್ರದೇಶಾಭಿವೃದ್ಧಿಗೆ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಆದ್ದರಿಂದ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.

‘ಯುಜಿಡಿ ಕಾಮಗಾರಿಗೆ ₹150 ಕೋಟಿ ಅಗತ್ಯ’

‘ಬಿಜೆಪಿ ಮೇಯರ್ ಇದ್ದ ಅವಧಿಯಲ್ಲಿ ಪ್ರತಿ ವಾರ್ಡ್‌ಗೂ ತಲಾ ₹1.50 ಕೋಟಿ ಅನುದಾನ ನೀಡಲಾಗಿತ್ತು. ಕೆ.ಆರ್. ಕ್ಷೇತ್ರದ ಯುಜಿಡಿ ಕಾಮಗಾರಿಗೆ ₹100 ಕೋಟಿಯಿಂದ ₹150 ಕೋಟಿ ಅಗತ್ಯವಿದೆ. ಈಗ ಯುಜಿಡಿ ಕಾಮಗಾರಿ ನಡೆಸಿದರೆ ಮುಂದಿನ 50 ವರ್ಷದವರೆಗೂ ಸಮಸ್ಯೆ ಆಗುವುದಿಲ್ಲ. ಶಾಸಕರಿಗೆ ಅನುದಾನ ಸಿಗದ ಕಾರಣ ಭುಗಿಲೇಳುವಂತಾಗಿದೆ. ಕಾಂಗ್ರೆಸ್ ಶಾಸಕರೂ ಕುಪಿತರಾಗಿದ್ದು ಆಂತರಿಕ ಭಿನ್ನಮತ ಕಾಣಿಸಿಕೊಂಡಿದೆ. ಅವರ ಆಕ್ರೋಶ ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು’ ಎಂದು ಟಿ.ಎಸ್. ಶ್ರೀವತ್ಸ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT