ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ‘ಎನ್‌ಇಪಿ: ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ’

ಶ್ರೀ ಚಾಮರಾಜೇಂದ್ರ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌’ ಲೋಕಾರ್ಪಣೆ: ಶೆಲ್ವಪಿಳ್ಳೈ ಅಯ್ಯಂಗಾರ್‌ ಅಭಿಮತ
Published : 23 ಫೆಬ್ರುವರಿ 2023, 4:43 IST
ಫಾಲೋ ಮಾಡಿ
Comments

ಮೈಸೂರು: ‘ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಗಾಗಿಯೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ’ ಎಂದು ಇತಿಹಾಸ ತಜ್ಞ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್‌ ಹೇಳಿದರು.

ಚಾಮರಾಜಪುರಂನಲ್ಲಿ ಬುಧವಾರ ‘ಶ್ರೀ ಜಯಚಾಮರಾಜ ಅರಸು ಎಜುಕೇಶನ್‌ ಟ್ರಸ್ಟ್‌’ನ ‘ಶ್ರೀ ಚಾಮರಾಜೇಂದ್ರ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌’ ಲೋಕಾರ್ಪಣೆಯಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ನಂತರವೂ ಬ್ರಿಟಿಷರ ಮೆಕಾಲೆ ಶಿಕ್ಷಣ ಪದ್ಧತಿ ಮುಂದುವರಿದಿದೆ. ಕೌಶಲಾಧಾರಿತ ಶಿಕ್ಷಣ ದೊರೆಯದ್ದರಿಂದ ನಿರುದ್ಯೋಗ ಹೆಚ್ಚಾಗಿದೆ. ಲಕ್ಷಾಂತರ ಮಂದಿ ಎಂ.ಎ, ಪಿಎಚ್‌.ಡಿ ಪದವಿ ಪಡೆದರೂ ಅರ್ಹತೆಗೆ ತಕ್ಕಂತೆ ಕೆಲಸ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘1986ರ ಶಿಕ್ಷಣ ನೀತಿ ನಂತರ ಹೊಸ ನೀತಿ ಜಾರಿಗೊಂಡಿಲ್ಲ. ನೈತಿಕ ಹಾಗೂ ಮೌಲ್ಯಾಧಾರಿತ ಕೌಶಲ ಪ್ರಧಾನ ಶಿಕ್ಷಣವು ಬೇಕಿದೆ. ಎನ್‌ಇಪಿಯಿಂದಾಗಿ ಇಷ್ಟಪಟ್ಟ ವಿಷಯ ಕಲಿಯಬಹುದು. ಅಂತರ್‌ಶಿಸ್ತೀಯ ಮಾದರಿಯ ಪಠ್ಯಕ್ರಮ ಇರಲಿದೆ. ಗಣಿತವನ್ನು ಕಥೆ, ನಾಟಕದ ರೂಪದಲ್ಲಿ ಕಲಿಯಬಹುದು’ ಎಂದರು.

‘ಮೈಸೂರು ವಿಶ್ವವಿದ್ಯಾಲಯ ಇದೀಗ ಜಿಲ್ಲೆಗೆ ಮಾತ್ರ ಸೀಮಿತಗೊಂಡಿದೆ. ಶಿಕ್ಷಣ ಹಾಗೂ ಸಂಶೋಧನಾ ಚಟುವಟಿಕೆಗಳಿಗಿಂತ ಕಟ್ಟಡ ಕಾಮಗಾರಿಗಳೇ ಹೆಚ್ಚು ನಡೆಯುತ್ತಿವೆ. ಪಕ್ಷಪಾತಗಳು ಹೆಚ್ಚಿವೆ. ಹೀಗಾಗಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ’ ಎಂದು ಹೇಳಿದರು.

‘ಮಹಾರಾಜರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ರಾಂತಿ ಮಾಡಿದರು. ಕೃಷಿ ಹಾಗೂ ಕೈಗಾರಿಕೆಗೂ ಆದ್ಯತೆ ನೀಡಿದರು. ಹೀಗಾಗಿಯೇ ಸಂಸ್ಥಾನವು ಮಾದರಿಯಾಗಿತ್ತು. ಆಗಿನ ಕಾಲದ ಭಾರತದ ಯಾವುದೇ ಭಾಗಕ್ಕೆ ಹೋಲಿಸಿದರೂ ಮೈಸೂರು ಸಂಸ್ಥಾನದ ಶಿಕ್ಷಣ ಮಟ್ಟವು ಎತ್ತರದ ಸ್ಥಾನ ಹೊಂದಿತ್ತು’ ಎಂದರು.

ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಮಾತನಾಡಿ, ‘ವಿದ್ಯೆಯನ್ನು ದಾನ ಮಾಡಿದರೆ ವಾಪಸ್‌ ಪಡೆಯಲಾಗದು. ಹೀಗಾಗಿಯೇ ಶತಮಾನದ ಹಿಂದೆಯೇ ವಾಣಿವಿಲಾಸ, ಚಾಮರಾಜೇಂದ್ರ ಶಾಲೆಗಳನ್ನು ಸ್ಥಾಪಿಸಲಾಯಿತು. ಕಾಲೇಜುಗಳು, ವಿಶ್ವವಿದ್ಯಾಲಯ ಸ್ಥಾಪನೆಯಾಗಿವೆ’ ಎಂದು ಸ್ಮರಿಸಿದರು.

‘ಚಾಮರಾಜೇಂದ್ರ ಒಡೆಯರ್‌ ಅವರು 1881ರಲ್ಲೇ ಪ್ರಜಾಪ್ರತಿನಿಧಿ ಸಭೆ ಸ್ಥಾಪಿಸಿದರು. ಸಭೆ, ಚಿಕಾಗೊದಲ್ಲಿ ವಿಶ್ವ ಧರ್ಮ ಸಮ್ಮೇಳನಕ್ಕೆ ವಿವೇಕಾನಂದರನ್ನು ಕಳುಹಿಸಿಕೊಟ್ಟರು. ಕೈಗಾರಿಕೆ, ಕೃಷಿಗೆ ಸಮಾನ ಪ್ರೋತ್ಸಾಹ ನೀಡಿದರು’ ಎಂದರು.

‘ಚಾಮರಾಜೇಂದ್ರ ಉತ್ಕೃಷ್ಠತಾ ಶಾಲೆಯು ಮಾದರಿ ಶಾಲೆಯಾಗಿದ್ದು, ಎನ್‌ಇಪಿ ಅಳವಡಿಸಿಕೊಂಡಿದೆ’ ಎಂದರು.

ಟ್ರಸ್ಟ್‌ ಅಧ್ಯಕ್ಷ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಶಾಲೆಯ ವೆಬ್‌ಸೈಟ್‌ ಲೋಕಾರ್ಪಣೆ ಮಾಡಿದರು.

ಡಿಡಿಪಿಐ ರಾಮಚಂದ್ರರಾಜೇ ಅರಸ್, ಟ್ರಸ್ಟ್‌ನ ಕಾರ್ಯದರ್ಶಿ ಮಹೇಶ್‌ ಎನ್‌. ಅರಸ್‌, ಭಾರತೀ ಶ್ರೀಧರ್‌ ರಾಜೇ ಅರಸ್‌, ಪದ್ಮಶ್ರೀ ಅರಸ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT