ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಹೊಸ ವರ್ಷಾಚರಣೆ; ಮಹಿಳೆಯರ ಸುರಕ್ಷತೆಗೆ 8 ಪಿಂಕ್‌ ಪಡೆ

ನಗರದಲ್ಲಿ 36 ವಿಶೇಷ ಕಾರ್ಯಪಡೆ ರಚನೆ: ಮಧ್ಯರಾತ್ರಿ 1 ಗಂಟೆಯವರೆಗೆ ಅವಕಾಶ
Published 28 ಡಿಸೆಂಬರ್ 2023, 13:16 IST
Last Updated 28 ಡಿಸೆಂಬರ್ 2023, 13:16 IST
ಅಕ್ಷರ ಗಾತ್ರ

ಮೈಸೂರು: ‘ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯಲು 36 ವಿಶೇಷ ಕಾರ್ಯಪಡೆ ರಚಿಸಿದ್ದು, ಮಹಿಳೆಯರ ಸುರಕ್ಷತೆಗಾಗಿ 8 ಸುರಕ್ಷತಾ ಪಿಂಕ್‌ ಗರುಡಾ (ಚಾಮುಂಡಿ ಪಡೆ) ಪಡೆಗಳನ್ನು ರಚಿಸಲಾಗಿದೆ’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 1ರ ಒಳಗಾಗಿ ಮುಕ್ತಾಯಗೊಳಿಸಬೇಕು. ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ತಡೆದು ಶುಭಕೋರುವ ನೆಪದಲ್ಲಿ ಅವರ ಇಚ್ಛೆಗೆ ವಿರುದ್ಧವಾಗಿ ಕಿರಿಕಿರಿ ನೀಡಬಾರದು. ಅಶ್ಲೀಲ, ಅರೆಬೆತ್ತಲೆಯಾಗಿ ವರ್ತನೆ, ಮಾದಕ ವಸ್ತು ಸೇವನೆ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ’ ಎಂದರು.

‘ಪ್ರಮುಖ ಸ್ಥಳಗಳ ತಪಾಸಣೆಗಾಗಿ ಶ್ವಾನ ದಳ ಮತ್ತು ವಿಧ್ವಂಸಕ ಕೃತ್ಯ ತಡೆಯ ನಾಲ್ಕು ತಂಡ ರಚಿಸಿದ್ದೇವೆ. ವ್ಹೀಲಿಂಗ್‌, ಡ್ರ್ಯಾಗ್‌ ರೇಸ್‌ ಹಾಗೂ ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಸಂಚಾರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ತಂಡ ರಚಿಸಿದ್ದೇವೆ. ಮಾದಕ ವಸ್ತು ಸಾಗಾಟ ಪತ್ತೆಹಚ್ಚಲು ಸಿಸಿಬಿ ತಂಡ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

‘ರೆಸ್ಟೋರೆಂಟ್‌ ಮತ್ತು ಮದ್ಯಪಾನ ಸರಬರಾಜು ಮಾಡುವ ಹೋಟೆಲ್‌ಗಳಲ್ಲಿ ಸರ್ಕಾರವು ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚಿನ ಸಮಯ ಕಾರ್ಯಕ್ರಮ ನಡೆಸಲು ಅಬಕಾರಿ ಇಲಾಖೆಯ ಜೊತೆ ಪೊಲೀಸ್‌ ಇಲಾಖೆಯಿಂದಲೂ ಅನುಮತಿ ಪಡೆದುಕೊಳ್ಳಬೇಕು. ಆಚರಣೆ ನೆಪದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಹೊಸ ವರ್ಷಾಚರಣೆ ಸಂದರ್ಭದಲ್ಲಿ ಧ್ವನಿವರ್ಧಕ ಅಳವಡಿಸುವವರು ತಮ್ಮ ಪ್ರದೇಶಕ್ಕೆ ಸೀಮಿತವಾಗಿರುವಂತೆ ಬಾಕ್ಸ್‌ ಮಾದರಿಯ ಧ್ವನಿವರ್ಧಕ ಅಳವಡಿಸಿಕೊಂಡು ಕಾನೂನಿನ ಅಡಿಯಲ್ಲಿ ನಿರ್ದಿಷ್ಟ ಪಡಿಸಿರುವ ಡೆಸಿಬಲ್‌ ಮೀರದಂತೆ ಕಾರ್ಯಕ್ರಮ ನಡೆಸಬೇಕು. ಡಿ.31ರ ರಾತ್ರಿ 7 ಗಂಟೆ ನಂತರ ಚಾಮುಂಡಿ ಬೆಟ್ಟಕ್ಕೆ ಉತ್ತನಹಳ್ಳಿ ಕ್ರಾಸ್‌ ಗೇಟ್‌, ದೈವಿವನ ಗೇಟ್‌, ಚಾಮುಂಡಿಬೆಟ್ಟ ಪಾದದ ಗೇಟ್‌, ಲಲಿತಮಹಲ್‌ ಗೇಟ್‌ ಮೂಲಕ ಪ್ರವೇಶ ನಿರ್ಬಂಧಿಸಲಾಗಿದೆ. ರಾತ್ರಿ 9ರ ನಂತರ ತಾವರೆಕಟ್ಟೆ ಗೇಟ್‌ ಪ್ರವೇಶವನ್ನೂ ನಿರ್ಬಂಧಿಸಿದೆ. ಇದು ಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನ್ವಯಿಸುವುದಿಲ್ಲ. ಬೆಟ್ಟದಿಂದ ರಾತ್ರಿ 9ರ ನಂತರ ಬರುವವರು ತಾವರೆಕಟ್ಟೆ ದ್ವಾರದ ಮೂಲಕ ಬರಬೇಕು’ ಎಂದು ಸೂಚಿಸಿದರು.

ಡಿಸಿಪಿಗಳಾದ ಎಂ.ಮುತ್ತುರಾಜ್ ಹಾಗೂ ಎಸ್‌.ಜಾಹ್ನವಿ ಇದ್ದರು. 

ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ತಯಾರು ನಿಯಮ ಮೀರಿದರೆ ಕಾನೂನು ಕ್ರಮ

ಹೊಸ ವರ್ಷಾಚರಣೆಗಾಗಿ ನಿಯೋಜಿಸಿರುವ ಪೊಲೀಸರ ಪಟ್ಟಿ

ಹುದ್ದೆ;ಸಂಖ್ಯೆ ಡಿಸಿಪಿ;03 ಎಸಿಪಿ;12 ಪಿಐ;30 ಪಿಎಸ್‌ಐ;42 ಎಎಸ್‌ಐ;70 ಎಚ್‌ಸಿ/ಪಿಸಿ;550 ಮಹಿಳಾ ಸಿಬ್ಬಂದಿ;80 ಸಿಎಆರ್‌;12 ತುಕಡಿ ಕೆಎಸ್‌ಆರ್‌ಪಿ;4 ತುಕಡಿ ಶ್ವಾನದಳ;1 ತಂಡ ಎಎಸ್‌ಸಿ;4 ತಂಡ

ಕಮಿಷನರೇಟ್‌ ವ್ಯಾಪ್ತಿಯಲ್ಲಿ 30 ಚೆಕ್‌ ಪೋಸ್ಟ್‌

ನಗರದ ಹೊರವಲಯದಲ್ಲಿ 12 ಹಾಗೂ ನಗರ ವ್ಯಾಪ್ತಿಯಲ್ಲಿ 18 ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ರಿಂಗ್‌ ರಸ್ತೆಯಲ್ಲಿ ನಿಗಾವಹಿಸಲು 8 ಹೈವೇ ಪೆಟ್ರೋಲ್‌ ಹಾಗೂ ನಗರದ ಇತರೆಡೆ ಗಸ್ತಿಗಾಗಿ 18 ಗರುಡಾ ಮತ್ತು 112 ಪೊಲೀಸ್‌ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ರಮೇಶ್‌ ಬಾನೋತ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT