ಶನಿವಾರ, ಜನವರಿ 28, 2023
18 °C
ದಾಖಲೆ ಕೊಡುವ ಅಗತ್ಯವಿಲ್ಲ: ಶಂಕರ ಬಿದರಿ

ನಿರಂಜನ ಮಠ ವೀರಶೈವ ಲಿಂಗಾಯತರ ಆಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ನಗರದಲ್ಲಿರುವ ನಿರಂಜನ ಮಠ ವೀರಶೈವ ಲಿಂಗಾಯತರ ಆಸ್ತಿ. ಅದಕ್ಕೆ ದಾಖಲೆ‌ ಕೊಡಬೇಕಾದ ಅಗತ್ಯವಿಲ್ಲ. ಯಾರಾದರೂ ಕಸಿದುಕೊಳ್ಳುವ ದುಸ್ಸಾಹಸ ಮಾಡಿದರೆ ಸಮಾಜದವರು ದೇಶದಾದ್ಯಂತ ಹೋರಾಟಕ್ಕೆ ಇಳಿಯುತ್ತಾರೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರ ಬಿದರಿ ಎಚ್ಚರಿಕೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ–ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ಮತ್ತು ನಿರಂಜನ ಮಠ ಸಂರಕ್ಷಣಾ ಸಮಿತಿಯಿಂದ ಭಾನುವಾರ ನಿರಂಜನ ಮಠದ ಆವರಣದಲ್ಲಿ ಆಯೋಜಿಸಿದ್ದ ‘ನಿರಂಜನ ಮಠ–ಒಂದು ಅವಲೋಕನ– 2022)’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

‘ಭೌತಿಕ ಸಾಕ್ಷಿಗಳನ್ನು ಸ್ಥಳವೇ ನುಡಿಯುತ್ತಿದ್ದರೂ ಲಿಂಗಾಯತ ಮಠವೊಂದನ್ನು ಉಳಿಸಿಕೊಳ್ಳಲು ಹೋರಾಡುವ ಪರಿಸ್ಥಿತಿ ಬಂದಿರುವುದು‌ ನೋವಿನ ಸಂಗತಿ. ನಾವಷ್ಟೊಂದು ಬಲಹೀನರಾಗಿದ್ದೇವೆಯೇ’ ಎಂದು ಪ್ರಶ್ನಿಸಿದರು.

ನಮ್ಮದೇ ಜಾಗವೇಕೆ?:

‘ಸರ್ಕಾರವು ವಿವೇಕ ಸ್ಮಾರಕ ನಿರ್ಮಾಣಕ್ಕೆ ಬೇರೆ ಕಡೆ ಸಾವಿರ ಎಕರೆ ಬೇಕಿದ್ದರೂ ಕೊಡಲಿ. ನಮ್ಮದೇ ಜಾಗವೇಕೆ? ಸಜ್ಜನರು, ಲಿಂಗಾಯತರು ಕರ್ನಾಟಕದಲ್ಲಿ ಇರಬಾರದಾ?’ ಎಂದು ಕೇಳಿದರು.

‘ನೊಣ ತಿಂದು ಜಾತಿ ಕೆಡಿಸಿಕೊಳ್ಳುವ ಕೆಲಸವನ್ನು ರಾಮಕೃಷ್ಣ ‌ಮಿಷನ್ ಮಾಡುವುದಿಲ್ಲ ಎಂಬ‌ ನಂಬಿಕೆ ಇದೆ’ ಎಂದರು.

ದುಷ್ಟ ಯೋಚನೆ ಬಂದಿದ್ದೇಕೆ?:

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ  ಮಾತನಾಡಿ, ‘ವಿವೇಕ ಸ್ಮಾರಕ ನಿರ್ಮಿಸಲು ಬೇರೆ ಜಾಗವಿಲ್ಲವೇ? ನಿರಂಜನ ಮಠದ ಅಸ್ಮಿತೆಯನ್ನು ಅಳಿಸಿ ಹಾಕುವ ದುಷ್ಟ ಯೋಚನೆ ಬಂದಿರುವುದೇಕೆ?’ ಎಂದು ಕೇಳಿದರು.

‘ನಿರಂಜನ ಮಠ ಸಂರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಮುಖ್ಯಮಂತ್ರಿ ಭೇಟಿಯಾಗಿ ಮನವರಿಕೆ ಮಾಡಿಕೊಡೋಣ’ ಎಂದು ಹೇಳಿದರು.

ಹೊಸ ಮಠದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ, ನಿರಂಜನ ಮಠ ಸಂರಕ್ಷಣಾ ಸಮಿತಿಯ ಅಧ್ಯಕ್ಷ  ಎಚ್‌.ವಿ.ಬಸವರಾಜು ಹಿನಕಲ್‌ ಅಧ್ಯಕ್ಷತೆ ವಹಿಸಿದ್ದರು. ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಲ್.ಎಸ್.ಮಹದೇವಸ್ವಾಮಿ, ಮಹಾಸಭಾದ ನಗರ ಘಟಕದ ಅಧ್ಯಕ್ಷ ಎಂ.ಎಚ್.ಚಂದ್ರಶೇಖರ್, ಮುಖಂಡರಾದ ಕೆ.ಎಸ್.ಮಹದೇವಪ್ರಸಾದ್, ಶಶಿಧರ್ ಶಾನಬಾಗ್ ಇದ್ದರು.

ಟಿ.ಎಸ್.ಲೋಕೇಶ್ ಸ್ವಾಗತಿಸಿದರು.

‘ವಿರಮಿಸಬಾರದು’

ವಕೀಲ ಗಂಗಾಧರ ಆರ್.ಗುರುಮಠ ಮಾತನಾಡಿ, ‌‘ಇದು‌ ನಮ್ಮ‌ ಸಮಾಜದ್ದೇ‌ ಮಠ ಎನ್ನುವುದು ಮನವರಿಕೆಯಾದ್ದರಿಂದ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದೇನೆ. ರಾಮಕೃಷ್ಣ ಆಶ್ರಮದವರು ತಮ್ಮದಲ್ಲದ ಜಾಗ ಕಬಳಿಸಲು ಮುಂದಾಗಿದ್ದಾರೆ. ಇದರಲ್ಲಿ ನಮ್ಮ ಮುಖ್ಯಮಂತ್ರಿಯೂ ಭಾಗಿಯಾಗಿರುವುದು ವಿಷಾದನೀಯ. ಮೈಸೂರಿಗೆ ಬಂದಾಗ ನಿರಂಜನ ಮಠಕ್ಕೆ ಬಾರದೇ‌ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ವಿವೇಕ ಸ್ಮಾರಕಕ್ಕೆ ಹೆಚ್ಚಿನ ಜಾಗ ಬೇಕಿದ್ದರೆ ಬೇರೆಡೆ ಕೊಡುತ್ತೇವೆ, ನಿರಂಜನ ಮಠ ಕೊಡುವುದಿಲ್ಲ ಎಂದು ಅವರು ಹೇಳಬೇಕಿತ್ತು’ ಎಂದರು.

‘ನಿರಂಜನ ಮಠವನ್ನು ‌ರಾಮಕೃಷ್ಣ ಆಶ್ರಮಕ್ಕೆ ‌ಕೊಡುವುದಿಲ್ಲ ಎಂದು ಸರ್ಕಾರದ ಆದೇಶ ಆಗುವವರೆಗೆ ನಾವು ವಿರಮಿಸಬಾರದು. ವಿವೇಕ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಗವಹಿಸಿದ್ದರು. ಇದರಿಂದ ಭಿನ್ನ ಸಂದೇಶ ರವಾನೆಯಾಗಿದೆ. ಹೀಗಾಗಿ, ಅವರನ್ನು ಭೇಟಿಯಾಗಿ ಹೋರಾಟ ಬೆಂಬಲಿಸುವಂತೆ ಕೋರಬೇಕು’ ಎಂದು ಸಲಹೆ ನೀಡಿದರು.

ಸರಿಯಲ್ಲ

ವೀರಶೈವ ಲಿಂಗಾಯತ ಸಮುದಾಯ ಕವಲು ದಾರಿಯಲ್ಲಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಲಿಂಗಾಯತ–ವೀರಶೈವ ಬೇರೆ ಎನ್ನುವುದು ಸರಿಯಲ್ಲ

– ಈಶ್ವರ ಖಂಡ್ರೆ, ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ

ಬೇರೆಯಲ್ಲ

ವೀರಶೈವ ಲಿಂಗಾಯತ ಎನ್ನುವುದು ಒಂದೇ. ಬೇರೆ ಎಂದು ಚರ್ಚಿಸಿ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ.

– ಶಂಕರ ಬಿದರಿ, ರಾಷ್ಟ್ರೀಯ ಉಪಾಧ್ಯಕ್ಷ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.