ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಆಹಾರವಿಲ್ಲ!

ಶೌಚಕ್ಕೆ ಹತ್ತಿರದ ಅಂಗಡಿ, ಹೊಟೆಲ್‌ಗಳೇ ಗತಿ
ಶಿವಪ್ರಸಾದ್‌ ರೈ
Published 24 ಮಾರ್ಚ್ 2024, 4:35 IST
Last Updated 24 ಮಾರ್ಚ್ 2024, 4:35 IST
ಅಕ್ಷರ ಗಾತ್ರ

ಮೈಸೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಶುರುವಾಗಿ ವಾರ ಕಳೆದರೂ ಜಿಲ್ಲೆಯ ಚೆಕ್‌ಪೋಸ್ಟ್‌ಗಳ ಸಿಬ್ಬಂದಿಗೆ ಆಹಾರ ಪೂರೈಕೆಯಾಗುತ್ತಿಲ್ಲ.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ರಾತ್ರಿ 10, ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಮನೆಯಿಂದ ಬರುವಾಗ ಹಾಗೂ ಮನೆಗೆ ತಲುಪಿದ ನಂತರ ಊಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಗರಸಭೆಯು ಆಹಾರ ಒದಗಿಸುತ್ತಿತ್ತು. ಈ ಬಾರಿ ಒದಗಿಸಿಲ್ಲ. ಸಿಬ್ಬಂದಿ ಕೊರತೆಯಿಂದಾಗಿ ಕೆಲಸದ ಸಮಯದಲ್ಲಿ ಆಹಾರ ಸೇವಿಸಲು ಸಮೀಪದ ಹೋಟೆಲ್‌ಗಳಿಗೆ ತೆರಳಲೂ ಆಗುತ್ತಿಲ್ಲ.

ಕೆಲವೆಡೆ ತಾತ್ಕಾಲಿಕ ಶೌಚಾಲಯಗಳನ್ನು ತೆರೆಯಲಾಗಿದ್ದು, ಹಲವೆಡೆ ಹತ್ತಿರದ ಅಂಗಡಿ, ಹೋಟೆಲ್‌ಗಳ ಶೌಚಾಲಯ ಬಳಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಸಿ.ಸಿ ಟಿವಿ ಅಳವಡಿಸಲಾಗಿದ್ದು, ಕುಡಿಯುವ ನೀರು, ಶಾಮಿಯಾನ, ಲೈಟು, ರಿಫ್ಲೆಕ್ಟರ್‌ ಸೇಫ್ಟಿ ಜಾಕೆಟ್‌ಗಳನ್ನು ಒದಗಿಸಲಾಗಿದೆ.

ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆಗೆ ಇಬ್ಬರು ಮತ್ತು ಬಂದೊಬಸ್ತ್‌ಗೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ.  ಗ್ರಾಮಾಂತರ ಭಾಗದಲ್ಲಿ ಈ ವ್ಯವಸ್ಥೆ ತಕ್ಕಮಟ್ಟಿಗೆ ಹೊಂದಾಣಿಕೆ ಸೂತ್ರದಲ್ಲಿ ಮುಂದುವರಿಯುತ್ತಿದೆ.

ಆದರೆ, ಮೈಸೂರು ನಗರಕ್ಕೆ ಪ್ರವೇಶಿಸುವ ಸ್ಥಳದಲ್ಲಿರುವ ಚೆಕ್‌ಪೋಸ್ಟ್‌ಗಳ ಸಿಬ್ಬಂದಿ ನರಕಯಾತನೆ ಅನುಭವಿಸುತ್ತಿದ್ದಾರೆ. ಅತಿಯಾದ ವಾಹನ ದಟ್ಟಣೆಯಿಂದ, ಅಂತರರಾಜ್ಯ ವಾಹನ ಹಾಗೂ ಟ್ಯಾಕ್ಸಿಗಳನ್ನಷ್ಟೇ ಪರಿಶೀಲಿಸುತ್ತಿದ್ದು, ದ್ವಿಚಕ್ರ ವಾಹನಗಳ ತಪಾಸಣೆ ದೂರದ ಮಾತಾಗಿದೆ.

ನಂಜನಗೂಡಿನ ಬಂಡಿಪಾಳ್ಯ, ತಿ.ನರಸೀಪುರ ರಸ್ತೆಯ ಚಿಕ್ಕಳ್ಳಿ, ಎಚ್‌.ಡಿ ಕೋಟೆ ರಸ್ತೆಯಲ್ಲಿರುವ ಬೋಗಾದಿ, ಬನ್ನೂರು ರಸ್ತೆಯಲ್ಲಿರುವ ಚೆಕ್‌ ಪೋಸ್ಟ್‌ಗಳಲ್ಲಿ ನಿತ್ಯ ವಾಹನ ಸಂಚಾರ ಹೆಚ್ಚುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಶಾಲಾ, ಕಾಲೇಜು ಮತ್ತು ಕರ್ತವ್ಯಕ್ಕೆ ತೆರಳುವವರ ಕಾರಣದಿಂದ ರಸ್ತೆಯು ವಾಹನಗಳಿಂದ ತುಂಬಿರುತ್ತದೆ. ಪ್ರತಿ ಪಾಳಿಯ ಸಿಬ್ಬಂದಿ ಅಂದಾಜು 700 ರಿಂದ 1,200 ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.

‘ಶಂಕಿತ ವಾಹನಗಳನ್ನು ಮಾತ್ರ ತಪಾಸಣೆ ಮಾಡುತ್ತಿದ್ದೇವೆ. ‌ತಪಾಸಣೆಗೆ ನಾಲ್ವರು ಸಿಬ್ಬಂದಿಯಾದರೂ ಬೇಕು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ’ ಎಂದು ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ ಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದಾಗ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಕರೆ ಸ್ವೀಕರಿಸಲಿಲ್ಲ.

ಶಂಕಿತ ವಾಹನಗಳ ತಪಾಸಣೆ ಸಿಬ್ಬಂದಿ ಹೆಚ್ಚಳಕ್ಕೆ ಬೇಡಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT