ಮೈಸೂರು: ‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದ ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಆ.15ರಂದು ಬೆಳಿಗ್ಗೆ 11.30ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಬೆಂಗಳೂರಿನ ವಿಧಾನಸೌಧಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ಆರ್.ಮೋಹನ್‌ರಾಜ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ₹25 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ. ಎಸ್‌ಸಿ, ಎಸ್‌ಟಿ ಮಕ್ಕಳ ವಿದೇಶಿ ವಿದ್ಯಾಭ್ಯಾಸಕ್ಕೆ ನೀಡುತ್ತಿದ್ದ ಅನುದಾನ, ಉತ್ತಮ ಅಂಕಕ್ಕೆ ನೀಡುತ್ತಿದ್ದ ಪ್ರೋತ್ಸಾಹಧನ ಹಾಗೂ ವಸತಿ ಶಾಲೆ ಪ್ರವೇಶಾತಿಯಲ್ಲಿ ಬದಲಾದ ನಿಬಂಧನೆಗಳು ಉದ್ದೇಶವನ್ನೇ ಬುಡಮೇಲು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣವನ್ನು ಸೂಕ್ತ ತನಿಖೆ ಮಾಡಿ, ತಪ್ಪಿತಸ್ಥ ಜನಪ್ರತಿನಿಧಿ, ಅಧಿಕಾರಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಮುಡಾ ಹಗರಣ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದು ಹಾಗೂ ಮುಖ್ಯಮಂತ್ರಿ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡುವುದು ಮುಂತಾದ ಬೇಡಿಕೆಗಳನ್ನೂ ಈ ಜಾಥಾ ಮೂಲಕ ಒತ್ತಾಯಿಸಲಾಗುವುದು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ದಲಿತ ಸಂಘರ್ಷ ಸಮಿತಿ (ಸೋಮಶೇಖರ್ ಬಣ), ಅಂಬೇಡ್ಕರ್ ಸೇನೆ (ಪಿ.ಮೂರ್ತಿ) ಸಂಘಟನೆಗಳು ಬೆಂಬಲ ನೀಡಿವೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಕೆ.ಬಿ.ರಾಜು, ಕೆ.ಎಂ.ಶ್ರೀನಿವಾಸ್, ಜಿಲ್ಲಾ ಸಂಚಾಲಕರಾದ ರಾಜಶೇಖರ್, ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.