ಮಂಗಳವಾರ, 26 ಆಗಸ್ಟ್ 2025
×
ADVERTISEMENT
ADVERTISEMENT

ಮೈಸೂರು ಮಹಾರಾಜ ಕಾಲೇಜು: ‘ಅಪರಾಧ ಶಾಸ್ತ್ರ’ ಅಧ್ಯಯನಕ್ಕೆ ಅವಕಾಶ

Published : 25 ಮೇ 2023, 6:07 IST
Last Updated : 25 ಮೇ 2023, 6:07 IST
ಫಾಲೋ ಮಾಡಿ
0
ಮೈಸೂರು ಮಹಾರಾಜ ಕಾಲೇಜು: ‘ಅಪರಾಧ ಶಾಸ್ತ್ರ’ ಅಧ್ಯಯನಕ್ಕೆ ಅವಕಾಶ
ಮಹಾರಾಜ ಕಾಲೇಜು ಆವರಣ

ಶಿವಪ್ರಸಾದ್ ರೈ

ADVERTISEMENT
ADVERTISEMENT

ಮೈಸೂರು: ಅಪರಾಧ ವಿಷಯಗಳ ಬಗ್ಗೆ ಆಸಕ್ತಿಯಿದ್ದು, ಆ ಕ್ಷೇತ್ರದಲ್ಲಿ ಮುಂದುವರೆಯಬೇಕೆನ್ನುವವರಿಗೆ ಮಹಾರಾಜ ಕಾಲೇಜು ಸುವರ್ಣಾವಕಾಶ ಕಲ್ಪಿಸಿದೆ. ಅಪರೂಪವಾದ ‘ಅಪರಾಧ ಶಾಸ್ತ್ರ’ ಪದವಿಯನ್ನು ನೀಡುತ್ತಿದ್ದು, ಇಲ್ಲಿ ಶಿಕ್ಷಣ ಪಡೆದ ಅನೇಕರು ಅಪರಾಧ ವಿಭಾಗದ ವಿವಿಧ ಮಜಲುಗಳಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದಿದ್ದಾರೆ. 

1893ರಲ್ಲಿ ಆರಂಭಗೊಂಡ ಈ ಕಾಲೇಜಿಗೆ ಭವ್ಯ ಇತಿಹಾಸವಿದೆ. ರಾಷ್ಟ್ರಕವಿ ಕುವೆಂಪು ಸಹಿತ ಅನೇಕ ಪ್ರಸಿದ್ಧ ವ್ಯಕ್ತಿಗಳು ಇಲ್ಲಿ ಉಪನ್ಯಾಸ ಮಾಡಿದ್ದಾರೆ. ಇದು ಮೈಸೂರು ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಸಂಸ್ಥೆ. ಇಲ್ಲಿ ವಿಜ್ಞಾನ ಹಾಗೂ ಕಲಾ ವಿಭಾಗದಲ್ಲಿ ಅಪರಾಧ ಶಾಸ್ತ್ರ ವಿಭಾಗವು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.

ಈ ವಿಭಾಗವು ಅಪರಾಧದಲ್ಲಿನ ಸೂಕ್ಷ್ಮತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತದೆ. ಅವರನ್ನು ಆ ವಿಷಯದಲ್ಲಿ ಹೆಚ್ಚು ಸದೃಢರಾಗುವಂತೆ ಮಾಡುತ್ತಿದ್ದು, ಪರಿಣಿತರಿಂದ ತರಬೇತಿಗಳನ್ನೂ ಹಮ್ಮಿಕೊಳ್ಳುತ್ತಿದೆ. ವಿಚಾರ ಸಂಕಿರಣ, ಕಾರ್ಯಾಗಾರಗಳ ಮೂಲಕವೂ ಮಾಹಿತಿ ನೀಡಲಾಗುತ್ತಿದೆ. ಕಾರಾಗೃಹ, ಪೊಲೀಸ್‌ ಠಾಣೆ ಹಾಗೂ ಅಕಾಡೆಮಿಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯಗಳ ಬಗ್ಗೆ ತಿಳಿಸುತ್ತಾರೆ. ಹೀಗೆ ವಿದ್ಯಾರ್ಥಿಗಳಿಗೆ ಅಪರಾಧ ವಿಭಾಗದ ಎಲ್ಲಾ ಹಂತಗಳನ್ನು ಪರಿಚಯಿಸಲಾಗುತ್ತದೆ.

ADVERTISEMENT

ಸಂಸ್ಥೆಯಲ್ಲಿ ಅಪರಾಧ ಶಾಸ್ತ್ರ ಹಾಗೂ ನ್ಯಾಯ ವಿಜ್ಞಾನವನ್ನು ಬೋಧಿಸಲಾಗುತ್ತಿದೆ. ಪ್ರಥಮ ಸೆಮಿಸ್ಟರ್‌ನಲ್ಲಿ ಅಪರಾಧ ಶಾಸ್ತ್ರದ ಮೂಲಭೂತ ಅಂಶಗಳು, ದ್ವಿತೀಯ ಸೆಮಿಸ್ಟರ್‌ನಲ್ಲಿ ಅಪರಾಧಿಗಳ ಬಗ್ಗೆ, ತೃತೀಯ ಸೆಮಿಸ್ಟರ್‌ನಲ್ಲಿ ಪೊಲೀಸ್‌ ವಿಜ್ಞಾನ ಹಾಗೂ ಅಪರಾಧ ತನಿಖೆ, ನಾಲ್ಕನೇ ಹಾಗೂ ಐದನೇ ಸೆಮಿಸ್ಟರ್‌ನಲ್ಲಿ ಆಡಳಿತಾತ್ಮಕ ಸುಧಾರಣೆ, ಆರನೇ ಸೆಮಿಸ್ಟರ್‌ನಲ್ಲಿ ಪೊಲೀಸ್‌ ವಿಜ್ಞಾನ ಹಾಗೂ ಅಪರಾಧ ತನಿಖೆಯ ತಂತ್ರಗಳ ವಿಷಯದಲ್ಲಿ ಪಾಠ ಮಾಡಲಾಗುತ್ತದೆ.

ಬಲು ಅಪರೂಪದ ಕೋರ್ಸ್‌ ಇಲ್ಲಿದೆ. ಈ ವಿಭಾಗದ ಹಿರಿಯ ವಿದ್ಯಾರ್ಥಿಗಳು ಉತ್ತಮ ಉದ್ಯೋಗಗಳನ್ನು ಪಡೆದಿದ್ದಾರೆ.
ಶ್ರೀಧರ್, ಮಹಾರಾಜ ಕಾಲೇಜಿನ ಪ್ರಾಂಶುಪಾಲ

ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳು ಲಭ್ಯವಿದೆ. ಆಂಗ್ಲ ಮಾಧ್ಯಮದಲ್ಲಿ ಮನೋವಿಜ್ಞಾನ– ಅಪರಾಧ ಶಾಸ್ತ್ರ– ನ್ಯಾಯ ವಿಜ್ಞಾನ, ಸಾರ್ವಜನಿಕ ಆಡಳಿತ– ಅಪರಾಧ ಶಾಸ್ತ್ರ– ನ್ಯಾಯ ವಿಜ್ಞಾನ ಹಾಗೂ ಕನ್ನಡ ಮಾಧ್ಯಮದಲ್ಲಿ ಸಮಾಜ ಶಾಸ್ತ್ರ– ಅಪರಾಧ ಶಾಸ್ತ್ರ– ನ್ಯಾಯ ವಿಜ್ಞಾನ ಸಂಯೋಜನೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬಹುದಾಗಿದೆ. ವಿದ್ಯಾಭ್ಯಾಸದ ಬಳಿಕ ಸ್ನಾತಕೋತ್ತರ ಪದವಿಯನ್ನು ಪಡೆಯುವ ಅವಕಾಶವೂ ಇದೇ ಸಂಸ್ಥೆಯಲ್ಲಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ₹11 ಸಾವಿರ ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಸುಮಾರು ₹30 ಸಾವಿರ ಪ್ರವೇಶ ಶುಲ್ಕವಿದೆ.

ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ವಿಧಿ ವಿಜ್ಞಾನ ಲ್ಯಾಬೋರೇಟರಿಗಳು, ಸಿಐಡಿ, ಸಿಬಿಐ, ಐಬಿ, ಪೊಲೀಸ್ ಇಲಾಖೆ, ನರ್ಕೋಟಿಕ್ಸ್ ಇಲಾಖೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದಾಗಿದೆ. ಒಟ್ಟು 45 ಸೀಟ್‌ ಲಭ್ಯವಿದ್ದು, ದಾಖಲಾತಿ ಆರಂಭಗೊಂಡಿದೆ. ಆಸಕ್ತರು ಕಾಲೇಜನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0