ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಪದಕ’ ಮಕ್ಕಳ ಚಿತ್ರದ ಟ್ರೈಲರ್ ಬಿಡುಗಡೆ

ಮಕ್ಕಳ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಿ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
Last Updated 19 ಸೆಪ್ಟೆಂಬರ್ 2021, 13:52 IST
ಅಕ್ಷರ ಗಾತ್ರ

ಮೈಸೂರು: ಮಕ್ಕಳ ಶೌರ್ಯವನ್ನು ಗುರುತಿಸಿ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ (ಐಸಿಸಿಡಬ್ಲ್ಯು) ನೀಡುವ ಶೌರ್ಯ ಪ್ರಶಸ್ತಿಯ ಹಿಂದಿನ ನೂರಾರು ಘಟನೆಗಳಲ್ಲಿ ನಾಲ್ಕು ನೈಜ ಘಟನೆಗಳನ್ನು ಆಧರಿಸಿ ಮೈಸೂರಿನ ತಂಡ ನಿರ್ಮಿಸಿದ ‘ಪದಕ’ ಪ್ರಶಸ್ತಿ ವಿಜೇತ ಮಕ್ಕಳ ಚಿತ್ರದ ಟ್ರೈಲರ್‌ನ್ನು ಮೈಸೂರಿನ ಕೆಎಸ್‌ಒಯು ಕಾವೇರಿ ಸಭಾಂಗಣದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.

ಟ್ರೈಲರ್ ಬಿಡುಗಡೆ ಮಾಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ತಂದೆ– ತಾಯಿ ಮಕ್ಕಳ ಆಸಕ್ತಿ, ಪ್ರತಿಭೆಯನ್ನು ಗುರುತಿಸಿ ಆ ನಿಟ್ಟಿನಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು. ನಾವು ಬಯಸಿದಂತೆ ಮಕ್ಕಳು ಆಗಬೇಕು ಎಂದುಕೊಳ್ಳಬೇಡಿ’ ಎಂದು ಕಿವಿಮಾತು ಹೇಳಿದರು.

‘ಮಕ್ಕಳು ಈ ಚಿತ್ರವನ್ನು ನೋಡಿ ಪ್ರೇರಣೆಗೊಂಡು ಸಾಧನೆಯ ಹಾದಿಯಲ್ಲಿ ಸಾಗಲಿ ಎಂಬುದು ಪದಕ ಚಿತ್ರತಂಡ ಉದ್ದೇಶವಾಗಿದೆ. ಶಾಲಾ ಮಕ್ಕಳು ಅದನ್ನು ನೋಡಲಿ, ಅದರಲ್ಲಿ ಏನಿದೆ ಎಂಬುದು ಎಲ್ಲರ ಕುತೂಹಲವೂ ಆಗಿದೆ’ ಎಂದರು.

‘ಹಲವಾರು ಚಲನಚಿತ್ರಗಳು ನೂರಾರು ಪ್ರದರ್ಶನ ಕಂಡರೂ ಯಾವುದೇ ಪ್ರಶಸ್ತಿ ಬಂದಿರುವುದಿಲ್ಲ. ‘ಪದಕ’ ಚಿತ್ರದ ಟ್ರೈಲರ್ ಈಗ ಬಿಡುಗಡೆಯಾಗಿದೆ. ಆದರೆ, ಈಗಲೇ ಹಲವು ಪ್ರಶಸ್ತಿ ಗಳಿಸಿದ್ದು ಹೆಮ್ಮೆಯ ಸಂಗತಿ. ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣಲಿ’ ಎಂದು ಹಾರೈಸಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಲ್ಲಿ ‘ಎಆರ್‌ಸಿ’ ಎಂಟರ್‌ಟೈನ್‌ಮೆಂಟ್ ಅರ್ಪಿಸುವ ಪದಕ ಚಲನಚಿತ್ರದ ಕಥೆ, ಸಂಭಾಷಣೆ, ನಿರ್ಮಾಣ ಮತ್ತು ನಿರ್ದೇಶನ ಎಲ್ಲವೂ ಮೈಸೂರಿನ ಆದಿತ್ಯ ಆರ್. ಚಿರಂಜೀವಿ ಅವರದ್ದಾಗಿದೆ.

ಡ್ರಾಮಾ ಜೂನಿಯರ್ಸ್‌ ಖ್ಯಾತಿಯ ಮಹೇಂದ್ರ, ತುಷಾರ್ ಹಾಗೂ ಅಮಿತ್, ಕೆಜಿಎಫ್‌ ಸಿನಿಮಾ ಖ್ಯಾತಿಯ ಅನ್‌ಮೋಲ್, ಕಾರ್ನಿಕಾ ನಾಯಕ್, ಸ್ಕಂದ ತೇಜಸ್, ಮಂಜುಳಾ ರೆಡ್ಡಿ, ಕಿಲ್ಲರ್ ವೆಂಕಟೇಶ್, ಕೆ.ಎಸ್. ಶ್ರೀಧರ್, ಸುರೇಶ್ ಉದ್ಬೂರ ತಾರಾಗಣದಲ್ಲಿ ಇದ್ದಾರೆ.

ಮೈಸೂರು ಲೋಕಾಯುಕ್ತ ಎಸ್ಪಿ ಸಿ.ಮಲ್ಲಿಕ್, ಚಾಮರಾಜನಗರ ಜಿ.ಪಂ ಸಿಎಒ ಮಿಲನಾ ಮುರಗೋಡ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಉಪಾಧ್ಯಕ್ಷ ಉಮೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಾಮರಾಜನಗರ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್, ಸಿಜಿಎಚ್‌ಬಿಎಸ್ ಅಧ್ಯಕ್ಷ ಎಲ್. ವೆಂಕಟೇಶ್, ರಂಗನಾಥ್ ಉಪಸ್ಥಿತರಿದ್ದರು.

‘ಉರುವಟ್ಟಿ ಇಂಟರ್‌ ನ್ಯಾಷನಲ್ ಫಿಲಂ ಫೇರ್ ಅವಾರ್ಡ್, ಬೆಟ್ಟಯ್ಯ ಫಿಲಂ ಫೇರ್ ಅವಾರ್ಡ್, ರಾಮೇಶ್ವರಂ ಫಿಲಂ ಫೇರ್ ಅವಾರ್ಡ್, ಬ್ಲ್ಯಾಕ್ ಸ್ಪಿಯರ್, ವರ್ಜಿನ್ ಸ್ಪ್ರಿಂಗ್ ಕೋಲ್ಕತ್ತ ಹೀಗೆ 40ಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ. ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ’ ಎಂದು ಆದಿತ್ಯ ಚಿರಂಜೀವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT