ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಿನಗೊಂಡ ಲಕ್ಷ್ಮಣತೀರ್ಥ

ಜೀವನದಿಗೆ ಹುಣಸೂರು ನಗರದ ತ್ಯಾಜ್ಯ; ಹಸಿರುಗೊಂಡ ಜಲ
Last Updated 9 ಏಪ್ರಿಲ್ 2023, 5:26 IST
ಅಕ್ಷರ ಗಾತ್ರ

ಹುಣಸೂರು: ಪಟ್ಟಣದೊಳಗೆ ಹರಿದು ಹೋಗುವ ಲಕ್ಷ್ಮಣತೀರ್ಥ ನದಿ ತ್ಯಾಜ್ಯ ತುಂಬಿ ಚರಂಡಿ ನೀರಿನಂತಾಗಿ ಮಾರ್ಪಟ್ಟಿದೆ. ಎಲ್ಲೆಲ್ಲೂ ಹಸಿರು ಪಾಚಿ, ಕಲ್ಮಶ ಸೇರಿ ದುರ್ವಾಸನೆ ಬೀರುತ್ತಿದೆ. ನದಿ ಉಳಿವಿಗೆ ಅವಿರತ ಹೋರಾಟಗಳು ನಡೆಯುತ್ತಿದ್ದರೂ ಸರ್ಕಾರದ ಕಣ್ಣು ತೆರೆದಿಲ್ಲ!. ನದಿ ಮಲಿನಗೊಂಡು ಶಾಶ್ವತವಾಗಿ ಬಳಕೆಗೆ ಬಾರದಂತಾಗಿದೆ.

ಕೊಡಗಿನ ಬ್ರಹ್ಮಗಿರಿಲ್ಲಿ ಲಕ್ಷ್ಮಣತೀರ್ಥ ಪರಿಶುದ್ಧತೆಯಿಂದ ಉಗಮವಾಗಿ ನಾಗರಹೊಳೆ ಅರಣ್ಯದಲ್ಲಿ ಹರಿದು ಹುಣಸೂರು ತಾಲ್ಲೂಕು ಗಡಿಭಾಗದ ಹನಗೋಡು ಹೋಬಳಿಯಲ್ಲಿ ಪ್ರವೇಶಿಸುತ್ತದೆ.

ಲಕ್ಷ್ಮಣತೀರ್ಥ 110 ಕಿ.ಮಿ ಹರಿದು ತಾಲ್ಲೂಕಿನ ಹೊಸ ರಾಮೇನಹಳ್ಳಿ ಬಳಿ ಕಾವೇರಿ ಸೇರುತ್ತದೆ. ನದಿಗೆ ಹನಗೋಡು, ನಿಲುವಾಗಿಲು, ನಗರದ ರೆಹಮತ್ ಮೊಹಲ್ಲಾ, ಶಬ್ಬೀರ್ ನಗರ, ಕಲ್ಕುಣಿಕೆ, ದಾವಣಿ ಬೀದಿ, ಹಳೆ ಸೇತುವೆ ಭಾಗದ ಕಲುಷಿತ ನೀರು ನೇರವಾಗಿ ನದಿ ಒಡಲು ಸೇರುತ್ತಿದೆ.

60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹುಣಸೂರು ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ನೀರಿನ ಶೇ 40 ರಷ್ಟು ಶುದ್ಧಿಕರಣ ಘಟಕಕ್ಕೆ ಹೋಗುತ್ತದೆ. ಉಳಿದ ಶೇ 60 ರಷ್ಟು ತ್ಯಾಜ್ಯ ನೇರವಾಗಿ ನದಿ ಒಡಲಿಗೆ ಸೇರಿಸಲಾಗುತ್ತಿದೆ. ಇದರಿಂದಾಗಿ ನದಿ ಸಂಪೂರ್ಣ ಕಲುಷಿತಗೊಳ್ಳಲು ಮೂಲ ಕಾರಣವಾಗಿದೆ’ ಎಂದು ಸೇವ್ ಅವರ್ ಅರ್ಥ ಮುಖ್ಯಸ್ಥ ಸಂಜಯ್ ಹೇಳುತ್ತಾರೆ.‌

‘2010ರಲ್ಲಿ ಪರಿಸರವಾದಿ ಅನಂತ ಹೆಗಡೆ ಆಶೀಸರ, ಯಲ್ಲಪ್ಪ ರೆಡ್ಡಿ ಮತ್ತು ಶಾಸಕ ಎಚ್‌.ಪಿ.ಮಂಜುನಾಥ್ ನೇತೃತ್ವದಲ್ಲಿ ನದಿ ಸಂರಕ್ಷಣೆ ಕುರಿತು ಬೃಹತ್ ಮಟ್ಟದ ಜಾಥಾ ನಡೆಸಲಾಗಿತ್ತು. ಆನಂತರದಲ್ಲಿ ನದಿಗೆ ಸಂಬಂಧಿಸಿದಂತೆ ಶಾಸಕ ಮಂಜುನಾಥ್ ತ್ಯಾಜ್ಯ ನೀರು ನದಿ ಒಡಲಿಗೆ ಸೇರದಂತೆ ₹23 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆ ಯೋಜನೆ ಈವರೆಗೂ ಜಾರಿಗೆ ಬರಲಿಲ್ಲ’ ಎಂದು ಮಾಹಿತಿ ನೀಡಿದರು.

ನದಿ ಪಾತ್ರದಲ್ಲಿ ಒತ್ತುವರಿಯಾಗಿದ್ದು, ಕನಿಷ್ಠ 100 ಮೀಟರ್ ತೆರವು ಕಾರ್ಯಾಚರಣೆ ನಡೆಸಬೇಕು. ನದಿ ದಡದಲ್ಲಿ ಅರಣ್ಯ ಇಲಾಖೆಯಿಂದ ಮರ ಬೆಳೆಸುವ ಕೆಲಸ ಆಗಬೇಕು. ಹೀಗಾದಲ್ಲಿ ನದಿ ಕೊರೆತ ಕಡಿಮೆಯಾಗುವುದರೊಂದಿಗೆ ನೀರು ಹಿಡಿದಿಡುವ ಪ್ರಕ್ರಿಯೆ ನಡೆಯಲಿದೆ. ನಗರಸಭೆ ಪರಿಸರ ಎಂಜನಿಯರಿಂಗ್ ವಿಭಾಗ ಕಠಿಣ ಕ್ರಮ ಅನುಸರಿಸದ ಪರಿಣಾಮ ಈಗಲೂ ತ್ಯಾಜ್ಯ ಸೇರುತ್ತಿದೆ. ಮುಂದೊಂದು ದಿನ ನದಿ ಕಣ್ಮರೆಯಾಗುವ ಸಾಧ್ಯತೆಯೂ ಇದೆ’ ಎಂದು ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಕಳವಳ ವ್ಯಕ್ತಪಡಿಸಿದರು

ನಗರದಲ್ಲಿ ಕಳೆದ ವರ್ಷ ಜಿಲ್ಲಾಧಿಕಾರಿ ನೇತೃತ್ವದಲ್ಲಿ ‌ಲಕ್ಷ್ಮಣತೀರ್ಥ ನದಿ ಪುನಶ್ಚೇತನ ಹಾಗೂ ಅಭಿವೃದ್ಧಿ ಸಮಿತಿ ಸಭೆ ನಡೆದಿತ್ತು. ಆ ಸಮಿತಿ ವರದಿ ಆಧರಿಸಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿತ್ತು. ಆದರೆ ವರದಿ ಏನು ತಿಳಿಸಿದೆ ಎಂಬುದು ಗೋಪ್ಯವಾಗಿದೆ ಎಂದು ಅವರು ಹೇಳಿದರು.

ಪರಿಸರಪ್ರೇಮಿಗಳು 2010 ರಿಂದ ಸತತವಾಗಿ 3 ವರ್ಷ ಹೋರಾಟ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದರಾದರೂ ಸರ್ಕಾರ ಗಮನಹರಿಸುತ್ತಿಲ್ಲ.

‘ಚಿಕ್ಕವನಿದ್ದಾಗಿನಿಂದಲೂ ಲಕ್ಷ್ಮಣತೀರ್ಥ ನದಿ ನೀರು ಕುಡಿದು ಬೆಳೆದ ನಾನು. ಈಗ ಕೊಳವೆಬಾವಿ ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಪರಿಸರ ಸಂರಕ್ಷಣೆ ಕಾಳಜಿ ಯಾರಿಗೂ ಇಲ್ಲದಂತಾಗಿದೆ’ ಎಂದು ಪೌರಕಾರ್ಮಿಕ ಕಾಲೋನಿ ನಿವಾಸಿ
ಪೆರುಮಾಳ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT