ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ | ಶುರು ಮತದಾನೋತ್ತರ ಲೆಕ್ಕಾಚಾರ

ಸಾರ್ವಜನಿಕರು, ರಾಜಕೀಯ ಪಕ್ಷದವರ ನಡುವೆ ಹಲವು ಚರ್ಚೆ
Published 27 ಏಪ್ರಿಲ್ 2024, 6:59 IST
Last Updated 27 ಏಪ್ರಿಲ್ 2024, 6:59 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದಿದ್ದು, ಮತದಾರರು ಯಾರ ಪರವಾಗಿ ಒಲವು ತೋರಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಫಲಿತಾಂಶಕ್ಕಾಗಿ ಜನರು ಬರೋಬ್ಬರಿ 39 ದಿನಗಳವರೆಗೆ ಕಾಯಬೇಕಾಗಿದೆ. ಅಲ್ಲಿಯವರೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಕಾಪಾಡಿಕೊಳ್ಳುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ!

ದೇಶದಲ್ಲಿ ಈ ಬಾರಿ ಒಟ್ಟು 7 ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ 2ನೇ ಹಂತದಲ್ಲಿ ಮತದಾನ ಮುಗಿದಿದೆ. ಇದರೊಂದಿಗೆ ಇಲ್ಲಿನ ಚುನಾವಣಾ ರಾಜಕೀಯ ಚಟುವಟಿಕೆಗಳಿಗೂ ತೆರೆ ಬಿದ್ದಿದ್ದು, ಸೋಲು–ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

ಚುನಾವಣಾ ಕಣದಲ್ಲಿ ಪ್ರಮುಖ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಎಂ.ಲಕ್ಷ್ಮಣ, ಬಿಜೆಪಿಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ನಡುವೆ ತೀವ್ರ ಹಣಾಹಣಿ ಕಂಡುಬಂದಿತ್ತು. ಆದ್ದರಿಂದ, ಇವರಿಬ್ಬರಲ್ಲಿ ಯಾರ ಕೈ ಮೇಲಾಗಿದೆ, ಯಾರಿಗೆ ಹೊಡೆತ ಬಿದ್ದಿದೆ, ಜನರು ಯಾರಿಗೆ ಜೈ ಎಂದಿದ್ದಾರೆ, ಅದಕ್ಕೆ ಕಾರಣವಾಗಿರುವ ಅಂಶಗಳೇನು ಎಂಬಿತ್ಯಾದಿ ವಿಷಯಗಳ ಮೇಲೆ ಚರ್ಚೆಗಳು ಮತ್ತು ವಿಶ್ಲೇಷಣೆಗಳು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷದವರ ವಲಯದಲ್ಲಿ ನಡೆಯುತ್ತಿವೆ. ಮತದಾನೋತ್ತರ ವಿಶ್ಲೇಷಣೆಗಳು–ಚರ್ಚೆಗಳು ಕುತೂಹಲ ಕೆರಳಿಸಿವೆ.

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದವರು, ಆ ಪಕ್ಷಗಳ ಬೆಂಬಲಿಗರು ಮತ್ತು ಕಾರ್ಯಕರ್ತರು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡುತ್ತಾ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದಾರೆ. ಮತದಾರರು ನಮ್ಮನ್ನು ‘ಈ ಕಾರಣಕ್ಕಾಗಿ’ ಬೆಂಬಲಿಸಿದ್ದಾರೆ ಅಥವಾ ಬೆಂಬಲಿಸಿರಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ‘ಚುನಾವಣೆಯ ಸೋಲು–ಗೆಲುವಿನ ಲೆಕ್ಕಾಚಾರ’ದ್ದೇ ಪ್ರಮುಖ ಪಾತ್ರ ವಹಿಸಿದೆ.

ಬಿಜೆಪಿ–ಜೆಡಿಎಸ್‌ ಮೈತ್ರಿ ಪರವಾಗಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಪ್ರಚಾರ ಮಾಡಿದ್ದರು. ಕಾಂಗ್ರೆಸ್‌ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಿ ಮತ ಯಾಚಿಸಿದ್ದರು. ಕ್ಷೇತ್ರದಲ್ಲಿ ಇಬ್ಬರೂ ನಾಯಕರು ಪ್ರತಿಷ್ಠೆಯನ್ನು ಪಣವಾಗಿ ಇಟ್ಟಿದ್ದರು. ಇವರಲ್ಲಿ ಯಾರ ಮನವಿಗೆ ಜನರು ಬೆಂಬಲ ನೀಡಿದ್ದಾರೆ ಎನ್ನುವುದು ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ. ಚುನಾವಣೆಯ ಸೋಲು, ಗೆಲುವಿನ ಲೆಕ್ಕಾಚಾರಗಳಿಗೆ ಜೂನ್‌ 4ರಂದು ಉತ್ತರ ದೊರೆಯಲಿದೆ.

ಎಂ. ಲಕ್ಷ್ಮಣ
ಎಂ. ಲಕ್ಷ್ಮಣ

‘ಸ್ಟ್ರಾಂಗ್‌ ರೂಂ’ಗೆ 3 ಹಂತದ ಭದ್ರತೆ ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಸ್ಥಾಪಿಸಿರುವ ‘ಸ್ಟ್ರಾಂಗ್‌ ರೂಂ’ಗೆ (ಭದ್ರತಾ ಕೊಠಡಿ) ಮೂರು ಹಂತದಲ್ಲಿ ಭದ್ರತೆ ಒದಗಿಸಲಾಗಿದೆ. ಮೊದಲನೇ ಹಂತದಲ್ಲಿ ಸಿಎಪಿಎಫ್‌ ತುಕಡಿ 2ನೇ ಹಂತದಲ್ಲಿ ಸಶಸ್ತ್ರ ಮೀಸಲು ಪಡೆಯಿಂದ ಮತ್ತು ಮೂರನೇ ಹಂತದಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಭದ್ರತಾ ಕೊಠಡಿಗಳಿಗೆ ಪ್ರವೇಶಿಸುವ ಮುನ್ನ ಲಾಗ್‌ಬುಕ್‌ನಲ್ಲಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮತದಾನ ಪ್ರಮಾಣ ಕೊಂಚವಷ್ಟೆ ಹೆಚ್ಚಳ! 2019ರಲ್ಲಿ ನಡೆದಿದ್ದ ಚುನಾವಣೆಗಿಂತ ಈ ಬಾರಿ ಮತದಾನ ಪ‍್ರಮಾಣ ಕೊಂಚವಷ್ಟೆ ಹೆಚ್ಚಾಗಿದೆ. ಕ್ಷೇತ್ರದಲ್ಲಿರುವ 8 ವಿಧಾನಸಭಾ ಕ್ಷೇತ್ರವಾರು ಮತಗಟ್ಟೆವಾರು ಮತದಾನ ಪ್ರಮಾಣದ ಪಟ್ಟಿಗಳನ್ನು ಇಟ್ಟುಕೊಂಡು ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಒಂದು ಸುತ್ತಿನ ವಿಶ್ಲೇಷಣೆ ನಡೆಸಿದ್ದಾರೆ. ಯಾವ ಕ್ಷೇತ್ರ ಅಥವಾ ಮತಗಟ್ಟೆಗಳಲ್ಲಿ ಯಾರಿಗೆ ಹೆಚ್ಚಿನ ಬೆಂಬಲ ಸಿಕ್ಕಿರಬಹುದು ಯಾರಿಗೆ ಯಾರಿಂದ ‘ಒಳೇಟು’ ಬಿದ್ದಿರಬಹುದು ಎಂಬ ಊಹೆಗಳ ಆಧಾರದ ಮೇಲೆ ಚರ್ಚೆಗಳು ರೆಕ್ಕೆಪುಕ್ಕ ಪಡೆದುಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT